ಬೆಳಗಾವಿ: ಚುಟುಕು ಸಾಹಿತ್ಯವೆಂದರೆ ಅದು ಮನುಕುಲದ ಬೆಡಗು ಮನುಕುಲದ ಬೆರುಗು ಮನುಕುಲಕ್ಕೆ ವಿಸ್ಮಯವೂ ಹೌದು ಎಂದು ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ ನುಡಿದರು.
ಅವರಿಂದು ಬೆಳಗಾವಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ರಜತ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಬಹುಭಾಷಾ ಚುಟುಕು ವಾಚನಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಅತ್ಯಂತ ಕಡಿಮೆ ಶಬ್ದಗಳಲ್ಲಿ ಸಮಕಾಲಿನ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮತ್ತು ಸಮಾಜದಲ್ಲಿನ ಲೋಪ-ದೋಷಗಳನ್ನು ಎತ್ತಿ ತೋರಿಸುವ, ಅವನ್ನು ತಿದ್ದುವ, ಸಂಭ್ರಮಿಸುವ ಮತ್ತು ವಿಶೇಷ ಸಂದೇಶಗಳನ್ನು ನೀಡುವುದೇ ಚುಟುಕುಗಳು. ಎರಡೆರಡೇ ಸಾಲುಗಳಲ್ಲಿ ಮಹಾಕಾವ್ಯಗಳು ನೀಡುವ ದೊಡ್ಡ ದೊಡ್ಡ ಸಂದೇಶವನ್ನು ಚುಟುಕುಗಳು ನೀಡುತ್ತವೆ. ಚುಟುಕು ಸಾಹಿತ್ಯವನ್ನು ಇನ್ನಷ್ಟು ಜನಪ್ರಿಯಗೊಳಿಸುವ ಮತ್ತು ರಾಷ್ಟ್ರಮಟ್ಟದಲ್ಲಿ ಅದಕ್ಕೆ ಹೆಚ್ಚಿನ ಪ್ರಚಾರ ಸಿಗುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದವರು ನುಡಿದರು.
ಹರಿದಾರಿಗೊಂದು ಭಾಷೆ ಎಂಬಂತೆ ಬಹು ಭಾಷೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ಬಳಕೆಯಲ್ಲಿರುವ 9 ಭಾಷೆಗಳನ್ನು ಒಂದೇ ವೇದಿಕೆಗೆ ತಂದು ಆ ಭಾಷೆಗಳಲ್ಲಿ ಚುಟುಕುಗಳ ವಾಚನ ಮಾಡಿಸಿದ್ದು ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮಾದರಿಯಾಗಿದೆ ಎಂದವರು ಬಣ್ಣಿಸಿದರು.
ಗೋಷ್ಟಿಯ ಕುರಿತು ಹಿರಿಯ ಸಾಹಿತಿ ಶಿರೀಶ್ ಜೋಶಿ ಆಶಯ ನುಡಿಗಳನ್ನಾಡಿದರು ಗೌರವ ಉಪಸ್ಥಿತಿಯಲ್ಲಿದ್ದ ಹಿರಿಯ ಕವಿ ಪ್ರೊ ಎಂ. ಎಸ್. ಇಂಚಲ ಮತ್ತು ಸಾಹಿತಿ ಡಾ.ಜೆ.ಪಿ. ದೊಡ್ಡಮನಿ ಅವರುಗಳು ಜನಪದ ಸಾಹಿತ್ಯದಲ್ಲಿ ಚುಟುಕುಗಳ ಬಳಕೆ ಕುರಿತು ಉದಾಹರಣೆ ನೀಡಿ ಸಾಂದರ್ಭಿಕವಾಗಿ ಮಾತನಾಡಿದರು.
ಶ್ರೀಮತಿ ಜ್ಯೋತಿ ಬದಾಮಿ ಕಾರ್ಯಕ್ರಮ ನಿರ್ವಹಿಸಿದರು. ಶ್ವೇತಾ ನರಗುಂದ, ಶಿವಕುಮಾರ್ ಕಟ್ಟಿಮನಿ, ಎ.ಎ.ಸನದಿ , ಡಾ ಅರುಣಾ ನಾಯಕ್, ಶ್ರೀಮತಿ ಸುಷ್ಮಾ ಜಗಜಂಪಿ ,ರಾಧಾ ಶಾಮರಾವ್, ಅಸ್ಮಿತ ಅಳತೆಕರ್, ಶೋಭಾ ಲೋಕುರ್, ರಂಜನಾ ನಾಯಕ್, ಲೀಲಾ ಕಲಕೋಟಿ, ಎಲೆನ್ ಬೋಜಸ್, ಇಂದುಮತಿ ರಾಘವೇಂದ್ರ, ಅನುರಾಧಾ ಕುಲಕರ್ಣಿ, ಮುಂತಾದವರು ವಿವಿಧ ಭಾಷೆಗಳಲ್ಲಿ ಚುಟುಕುಗಳನ್ನು ವಾಚನ ಮಾಡಿದರು. ಸುಧಾ ಪಾಟೀಲ್ ಹಾಗೂ ಇಂದಿರಾ ಹೋಳ್ಕರ್ ವೇದಿಕೆ ನಿರ್ವಹಣೆ ನಡೆಸಿಕೊಟ್ಟರು.