This is the title of the web page
This is the title of the web page

Please assign a menu to the primary menu location under menu

State

ನರೇಂದ್ರ ಮೋದಿಯವರ ಆಡಳಿತದಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿ- ಡಾ|| ಕೆ. ಲಕ್ಷ್ಮಣ್


ಬೆಂಗಳೂರು: ಹಿಂದೆ ಆರು ದಶಕಕ್ಕೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು ವಂಶವಾದ ಹಾಗೂ ಭ್ರಷ್ಟಾಚಾರಕ್ಕೆ ಅಂಟಿಕೊಂಡಿತ್ತು. ಆದರೆ, ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು 8 ವರ್ಷಗಳಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದೆ. ಮೋದಿಯವರ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡಬೇಕಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ|| ಕೆ. ಲಕ್ಷ್ಮಣ್ ಅವರು ತಿಳಿಸಿದರು.
ಯಲಹಂಕದ ಹೋಟೆಲ್ ರಮಡಾದಲ್ಲಿ ಇಂದು ಆರಂಭಗೊಂಡ ಬಿಜೆಪಿ ಒಬಿಸಿ ಮೋರ್ಚಾದ ಮೂರು ದಿನಗಳ ರಾಷ್ಟ್ರೀಯ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿದ ಅವರು, ಮೌಲ್ಯಾಧಾರಿತ ರಾಜಕೀಯ ಬಿಜೆಪಿಯದು. ಅಧಿಕಾರ ಪಡೆಯಲು ಮತ್ತು ಉಳಿಸಿಕೊಳ್ಳಲು ಬದಲಿ ಮಾರ್ಗವನ್ನು ಅದು ಬಳಸುವುದಿಲ್ಲ. ಒಂದು ಮತದಿಂದ ಸರಕಾರ ಪತನವಾಗುವುದೆಂದು ಆಗಿನ ಪ್ರಧಾನಿ ವಾಜಪೇಯಿ ಅವರಿಗೆ ಗೊತ್ತಿದ್ದರೂ ಅವರು ಮೌಲ್ಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ಅವರು ತಮ್ಮ ಪದವಿಯಿಂದ ಕೆಳಕ್ಕಿಳಿದರು ಎಂದು ವಿವರಿಸಿದರು.
ಅಧಿಕಾರವು ಸೇವೆಗೆ ಸಾಧನವಾಗಬೇಕು. ಬಿಜೆಪಿ, ಪ್ರಜಾಸತ್ತಾತ್ಮಕ ದೇಶ ಮತ್ತು ಸಂವಿಧಾನಕ್ಕೆ ಹೆಚ್ಚು ಗೌರವ ಕೊಡುತ್ತದೆ. ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನತೆಯನ್ನು ಹೊಂದಿದೆ. ಕುಟುಂಬವಾದ, ವಂಶವಾದ ಹಾಗೂ ಧನಸಂಗ್ರಹಕ್ಕೆ ಅಧಿಕಾರ ಸಾಧನ ಎಂದು ಇತರ ಪಕ್ಷಗಳು ನಂಬಿಕೆ ಹೊಂದಿದ್ದರೆ, ಬಿಜೆಪಿ ಅಧಿಕಾರವನ್ನು ಸೇವೆಗೆ ಬಳಸಿಕೊಳ್ಳಬೇಕೆಂಬ ಸಿದ್ಧಾಂತವನ್ನು ಹೊಂದಿದೆ ಎಂದು ವಿಶ್ಲೇಷಿಸಿದರು.
18 ಕೋಟಿಗೂ ಹೆಚ್ಚು ಸದಸ್ಯರಿರುವ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವೆನಿಸಿದ ಬಿಜೆಪಿ, ಪ್ರಶಿಕ್ಷಣವು ಕಾರ್ಯಕರ್ತರು ಚುನಾವಣೆ ಗೆಲ್ಲುವುದಕ್ಕಿಂತ ಹೆಚ್ಚು ಪ್ರಮುಖ ಎಂದು ಭಾವಿಸುತ್ತದೆ. ಕಾರ್ಯಕರ್ತರು ಸಮಾಜಸೇವೆಯನ್ನು ನಿರಂತರವಾಗಿ ಮಾಡಬೇಕೆಂಬ ಸಿದ್ಧಾಂತ ಬಿಜೆಪಿಯದು ಎಂದು ನುಡಿದರು.
ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಮೋರ್ಚಾ ಶ್ರಮಿಸುತ್ತಿದೆ. ಅಹಂ ತೊರೆಯುವ ಮೂಲಕ ವ್ಯಕ್ತಿ ಪರಿವರ್ತನೆ ಆಗಬೇಕು. ಇದು ಸಾಮಾಜಿಕ ಪರಿವರ್ತನೆಗೆ ಪೂರಕ. ಪರಿವರ್ತನೆಯ ಹಾದಿ ಸುಗಮವಾಗಿರಲು ಪ್ರಶಿಕ್ಷಣ ವರ್ಗ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ನುಡಿದರು.
ಪಂಡಿತ್ ದೀನದಯಾಳ್ ಉಪಾಧ್ಯಾಯರ ಅಂತ್ಯೋದಯ ಪರಿಕಲ್ಪನೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯನ್ನು ಸಾಕಾರಗೊಳಿಸಲು ಮೋರ್ಚಾ ಶ್ರಮಿಸುತ್ತಿದೆ. ಕಡು ಬಡವರಿಗೆ ಪಕ್ಷವು ಆದ್ಯತೆ ನೀಡುತ್ತಿದೆ ಎಂದು ತಿಳಿಸಿದರು.
ಇದೊಂದು ಐತಿಹಾಸಿಕ ಮಹತ್ವದ ಪ್ರಶಿಕ್ಷಣ ಶಿಬಿರವಾಗಿದೆ. ಇನ್ನು ಮುಂದೆ ರಾಜ್ಯ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಶಿಕ್ಷಣ ವರ್ಗಗಳು ನಡೆಯಲಿವೆ. ಒಬಿಸಿ ಮೋರ್ಚಾವು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಎಲ್ಲ ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡು ಅದು ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕೇಂದ್ರ ಸರ್ಕಾರದ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಹಾಗೂ ಸಹಕಾರ ಇಲಾಖೆ ರಾಜ್ಯ ಸಚಿವ ಮತ್ತು ಒಬಿಸಿ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್.ವರ್ಮ ಅವರು ಮಾತನಾಡಿ, ನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಿಯಾಗುವ ಮೊದಲು ದೇಶದಲ್ಲಿ ನಿರಾಶಾದಾಯಕ ಸ್ಥಿತಿ ಇತ್ತು. 10 ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಜನರಿಗೆ ಹೆಚ್ಚು ಪರಿಚಿತರಲ್ಲ. ಆದರೆ, ಮೋದಿಯವರು ದೇಶದ ಅಭಿವೃದ್ಧಿಯ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ ಎಂದು ನುಡಿದರು.
ಹಿಂದಿನ ಕಾಂಗ್ರೆಸ್ ಮತ್ತು ಯುಪಿಎ ನೇತೃತ್ವದ ಕೇಂದ್ರ ಸರಕಾರದಲ್ಲಿ ಭ್ರಷ್ಟಾಚಾರದ ಹಗರಣಗಳು ನಿರಂತರ ಎಂಬಂತೆ ನಡೆದವು. ಆದರೆ, ಪ್ರಧಾನಿ ಮೋದಿಯವರ ನೇತೃತ್ವದ ಸರಕಾರವು ವರ್ಗ, ಜಾತಿ ಭೇದವಿಲ್ಲದೆ ಹಾಗೂ ಭ್ರಷ್ಟಾಚಾರ ದೂರವಿಟ್ಟು ಬಡವರ ಅಭಿವೃದ್ಧಿಗೆ ಶ್ರಮಿಸಿತು. ಭ್ರಷ್ಟಾಚಾರ ಇಲ್ಲದ ಯೋಜನೆಗೆ ಜನಧನ್ ಸ್ಪಷ್ಟ ಉದಾಹರಣೆ ಎಂದರು.
ರಾಜೀವ್ ಗಾಂಧಿಯವರು ಭ್ರಷ್ಟಾಚಾರ ಇರುವುದನ್ನು ಮತ್ತು ಅನುದಾನದ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಅಭಿವೃದ್ಧಿಗೆ ಬಳಕೆ ಆಗುವುದನ್ನು ಸ್ವತಃ ಒಪ್ಪಿಕೊಂಡಿದ್ದರು. ಆದರೆ, ಮೋದಿಯವರು 100ಕ್ಕೆ 100ರಷ್ಟು ಮೊತ್ತ ಫಲಾನುಭವಿಯನ್ನು ತಲುಪುವಂತೆ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು. ಒಬಿಸಿ ವರ್ಗಕ್ಕೆ ಕೇಂದ್ರದ ಯೋಜನೆಗಳ ಗರಿಷ್ಠ ಪ್ರಯೋಜನ ಲಭಿಸಿದೆ ಎಂದರು.
ಕೃಷಿಗೆ ಬಜೆಟ್ ಮೊತ್ತ ಹಲವು ಪಟ್ಟು ಹೆಚ್ಚಾಗಿದೆ. ಕಿಸಾನ್ ಸಮ್ಮಾನ್ ನಿಧಿಯಿಂದ ಕೋಟಿಗಟ್ಟಲೆ ರೈತರಿಗೆ ಹೆಚ್ಚಿನ ಪ್ರಯೋಜನ ಲಭಿಸಿದೆ. 2014 ಮತ್ತು 2019ರಲ್ಲಿ ಒಬಿಸಿ ಸಮುದಾಯವು ಮೋದಿಯವರಿಗೆ ಬೆಂಬಲವಾಗಿ ನಿಂತಿದೆ. ಉತ್ತರ ಪ್ರದೇಶದಲ್ಲೂ ಮೋದಿಜಿ ಮತ್ತು ಯೋಗಿಜಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ರಚನೆಗೊಂಡಿದೆ ಎಂದು ವಿವರಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಮುಂದುವರಿದಿದೆ. ಇದು ಮಹತ್ವದ ಕಾರ್ಯವಾಗಿದೆ. ಸಚಿವ ಸಂಪುಟ ರಚನೆ ವೇಳೆ ಮೋದಿಯವರು ಒಬಿಸಿ, ಪರಿಶಿಷ್ಟ ಜಾತಿ- ಪಂಗಡಕ್ಕೆ ಗರಿಷ್ಠ ಸ್ಥಾನಗಳನ್ನು ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಆದರೆ, ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಡೆ ಅಸಮರ್ಪಕವಾಗಿತ್ತು ಎಂದು ಆಕ್ಷೇಪಿಸಿದರು. ಬಳಿಕ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಾಯಿತು ಎಂದು ವಿವರಿಸಿದರು.
ಬಿಜೆಪಿ, ಒಬಿಸಿ ಸಮುದಾಯಕ್ಕೆ ಆದ್ಯತೆ ಕೊಡುತ್ತಿದೆ. ಬೇರೆ ಅನೇಕ ಪಕ್ಷಗಳು ಕುಟುಂಬವಾದ, ಮುಸ್ಲಿಂ ತುಷ್ಟೀಕರಣ ನೀತಿಯನ್ನು ತಮ್ಮದಾಗಿಸಿಕೊಂಡಿವೆ. ಆದರೆ, ಬಿಜೆಪಿಯು ಪಕ್ಷದಲ್ಲಿ ಸಕ್ರಿಯವಾಗಿರುವ ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸಿ ಅಧಿಕಾರ ನೀಡುತ್ತದೆ ಎಂದು ತಿಳಿಸಿದರು.
ಕೋವಿಡ್ ವೇಳೆ ವಿಶ್ವದಾದ್ಯಂತ ಹಾಹಾಕಾರ ಉಂಟಾಗಿತ್ತು. ಆದರೆ, ಭಾರತದಲ್ಲಿ ಪ್ರಧಾನಿ ಮೋದಿಯವರ ದೂರದೃಷ್ಟಿಯ ನಿರ್ಧಾರದಿಂದ ಆಂತರಿಕವಾಗಿ ಲಸಿಕೆ ಉತ್ಪಾದನೆ ಸಾಧ್ಯವಾಯಿತು. ಅಲ್ಲದೆ, ಜನರಿಗೆ ಉಚಿತ ಪಡಿತರ ಕೊಡಲಾಯಿತು ಎಂದು ಮೆಚ್ಚುಗೆ ಸೂಚಿಸಿದರು. ಲಸಿಕೆಯನ್ನು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ವಿರೋಧಿಗಳು ದೂರಿದರು ಎಂದು ಟೀಕಿಸಿದರು. ಬಳಿಕ ಅವರೇ ಲಸಿಕೆ ಹಾಕಿಸಿಕೊಂಡರು ಎಂದು ವಿವರಿಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರತದ ಘನತೆಯನ್ನು ಹೆಚ್ಚಿಸುವ ಕಾರ್ಯವನ್ನು ಮೋದಿಯವರು ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಂಗಮ್ ಲಾಲ್ ಗುಪ್ತ, ಯಶಪಾಲ್ ಸುವರ್ಣ, ನಿಖಿಲ್ ಆನಂದ್, ಉತ್ತರ ಪ್ರದೇಶ ರಾಜ್ಯದ ಸಚಿವ ನರೇಂದ್ರ ಕಶ್ಯಪ್, ರಾಜ್ಯದ ಸಚಿವ ಎನ್. ಮುನಿರತ್ನ, ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್. ವಿಶ್ವನಾಥ್ ಮತ್ತು ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ವಿವಿಧ ರಾಜ್ಯಗಳ ಆಹ್ವಾನಿತ ಪದಾಧಿಕಾರಿಗಳು ಭಾಗವಹಿಸಿದ್ದರು.


Gadi Kannadiga

Leave a Reply