ಬೆಳಗಾವಿ; ಬ್ರಹ್ಮನ ನಿರ್ಮಾಣದ ಪ್ರಪಂಚಕ್ಕಿಂತ ಕವಿಯ ನಿರ್ಮಾಣದ ಕವನ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ಸಿದ್ದರಾಮ ಶ್ರೀಗಳು ನುಡಿದರು.
ಅವರು ಬೆಳಗಾವಿಯಲ್ಲಿ ಡಾ ಶಿವಾನಂದ ಮೂಲಿಮನಿ ಅವರ “ಮಿಂಚು” ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಸೀಮೆ ಇಲ್ಲದ ಪ್ರಪಂಚ ಎಂದರೆ ಅದು ಕಾವ್ಯ ಪ್ರಪಂಚ ಅದು ಅಪಾರವಾದದ್ದು ತನಗೆ ಬೇಕಾದಂತೆ ಕಾವ್ಯ ಸೃಷ್ಟಿ ಮಾಡುವ ಸ್ವಾತಂತ್ರ್ಯ ಕವಿಗಳಿಗೆ ಇದೆ ಡಾ.ಶಿವಾನಂದ ಮೂಲಿಮನಿಯವರು ಹೃದಯದ ಭಾವನೆಗಳನ್ನು ಮಿಂಚುಗಳ ಮೂಲಕ ಬೆಳಕಾಗಿಸಿದವರು, ಹೃದಯದ ಭಾವನೆಗಳಿಗೆ ಅಭಿವ್ಯಕ್ತಿ ನೀಡಿ ಕವನಗಳನ್ನಾಗಿಸಿದವರು.
ಕವಿ ಬ್ರಹ್ಮನಿದ್ದಂತೆ ಬ್ರಹ್ಮನಿಗಿಂತ ಕವಿ ಶ್ರೇಷ್ಠ ಎಂದವರು ಹೇಳಿದರು.
ಭೌತಿಕ ಪ್ರಪಂಚದಲ್ಲಿ ಆರು ರಸಗಳಿದ್ದರೆ ಕವಿಯ ಪ್ರಪಂಚದಲ್ಲಿ ನವರಸಗಳಿವೆ. ಇದರಿಂದ ಕಾವ್ಯ ಪ್ರಪಂಚ ಸಮೃದ್ಧಗೊಂಡಿದೆ ಅದಕ್ಕೆಂದೆ ಕಾವ್ಯ ಪ್ರಪಂಚಕ್ಕೆ ಮಹತ್ವ ಕಾವ್ಯ ದುಃಖದಲ್ಲೂ ಕೂಡ ಓದುವ ಸುಖವನ್ನು ಕೊಡುವಂತಹದ್ದು ಅದಕ್ಕೆಂದೇ ಹೇಳುತ್ತಾರೆ ರವಿ ಕಾಣದನ್ನು ಕವಿ ಕಾಣುತ್ತಾನೆಂದು ಕವನಗಳ ಮೂಲಕ ಆನಂದ ಹೊಂದಬಹುದು ಮಾರ್ಗದರ್ಶನ ಮಾಡುವ ಕಾರ್ಯವನ್ನು ಕವನಗಳು ಮಾಡುತ್ತವೆ 100 ಮೂರ್ಖ ಮಕ್ಕಳಿಗಿಂತ ಒಬ್ಬ ಗುಣವಂತ ಮಗ ಸಾಕು ಎನ್ನುವ ನಾಣ್ನುಡಿಯಂತೆ ನೂರು ಕೃತಿಗಳಿಗಿಂತ ಒಂದು ಅತ್ಯುತ್ತಮ ಕೃತಿ ಮುಖ್ಯ, ಜನಪರ ಕಾಳಜಿಗಾಗಿ ಕಾವ್ಯ ರಚನೆಯಾಗಿದೆ, ಕೇವಲ ಕವಿಯಾಗಲೆಂದು ಬರೆದ ಕೃತಿ ಇದಲ್ಲ ತಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸಿ ಶಬ್ದಗಳ ರೂಪದಲ್ಲಿ ಕವನ ರಚನೆ ಸುಲಭವಲ್ಲ .ದುಃಖದಲ್ಲೂ ಆನಂದ ಭಾಷ್ವ ಬರುವಂಥ ಕವನಗಳ ರಚನೆ ಇದಾಗಿದೆ . ಮೂಲಿಮನಿಯವರ ಕೃತಿಗಳು ಸೀಮಿತ ಅದರಲ್ಲೂ “ಮಿಂಚು” ಬೆಳಗುವ ಚಂದ್ರನಂತೆ ಇದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಸಮ್ಮುಖದಲ್ಲಿದ್ದ ಬೆಳಗಾವಿಯ ಕಾರಂಜಿ ಮಠದ ಶ್ರೀ.ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಿ ಮಿಂಚು ಕವನ ಸಂಕಲನದಲ್ಲಿ ಹಿಂದಿನ ಸಾಮಾಜಿಕ ರೀತಿ ನೀತಿ ಶಿಕ್ಷಕರ ರೀತಿ ನೀತಿ ಮತ್ತು ಇಂದಿನವರ ರೀತಿ ನೀತಿಗಳ ಕುರಿತು ಸಾಮಾಜಿಕ ಕಾಳಜಿ ವ್ಯಕ್ತವಾಗಿದೆ ಎಂದರು.
ಕೃತಿ ಪರಿಚಯ ಮಾಡಿದ ನಿವೃತ್ತ ಪ್ರಾಚಾರ್ಯ ಡಾ. ಸಿ.ಕೆ.ನಾಮಲಗಿ ಮತ್ತು ಪ್ರೊಫೆಸರ್ ಕೆ.ಎಸ್. ಕೌಜಲಗಿ ಅವರುಗಳು ಮಾತನಾಡಿ ಹಿಂದಿನ ಕಾಲದ ಶಿಕ್ಷಕರು ರಾಜಕಾರಣಿಗಳನ್ನು ಒಲೈಸುವ ಕಾರ್ಯ ಮಾಡಲಿಲ್ಲ , ಅಧಿಕಾರಿಗಳ ಹಿಂದೆ ತಿರುಗಲಿಲ್ಲ, ನಿಸ್ವಾರ್ಥ ಸೇವೆಯನ್ನು ತಮ್ಮ ಪಾಡಿಗೆ ತಾವು ಮಾಡಿ ಗೌರವಕ್ಕೆ ಪಾತ್ರರಾದರು. ಇಂದು ಅದು ಆಗುತ್ತಿಲ್ಲ ಅತ್ಯಂತ ಕೆಟ್ಟ ರಾಜಕಾರಣ ನಡೆಯುತ್ತಿದೆ ಎಂದರು.
ಕೃತಿಯಲ್ಲಿನ ಕವನಗಳ ವಿಮರ್ಶೆಯನ್ನು ಮಾಡಿದ ಅವರು ಇತ್ತೀಚಿನ ದಿನಗಳಲ್ಲಿನ ಅತ್ಯುತ್ತಮ ಕೃತಿ ಇದಾಗಿದೆ ಎಂದು ಬಣ್ಣಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಚಾರ್ಯ ಎಂ.ಆರ್. ಉಳ್ಳೇಗಡ್ಡಿ ವಹಿಸಿದ್ದರು ಇದೇ ಸಂದರ್ಭದಲ್ಲಿ ಇಬ್ಬರೂ ಶ್ರೀಗಳು ಕೃತಿಯ ಲೇಖಕ ಶಿವಾನಂದ ಮೂಲಿಮನಿ ದಂಪತಿಗಳನ್ನು ಸತ್ಕರಿಸಿದರು. ಶ್ರೀಮತಿ ನೈನಾ ಗಿರಿಗೌಡರ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರೊ. ಏ.ಕೆ. ಪಾಟೀಲ್ ನಿರ್ವಹಿಸಿದರು, ಶಿವಾನಂದ ಮೂಲಿಮನಿ ಸ್ವಾಗತಿಸಿದರು, ಮೋಹನ ಗುಂಡ್ಲೂರ್ ಅತಿಥಿಗಳ ಪರಿಚಯ ಮಾಡಿದರು.