This is the title of the web page
This is the title of the web page

Please assign a menu to the primary menu location under menu

Local News

ವಚನ ಪಿತಾಮಹ ಫ.ಗು ಹಳಕಟ್ಟಿ ಅವರ ಜಯಂತಿ – ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ -೨೦೨೨ ಫ.ಗು. ಹಳಕಟ್ಟಿ ಅವರು ೧೨ನೇ ಬಸವಾದಿ ಶರಣರ ಪ್ರತೀಕ: ಮಾತೆ ವಾಗ್ದೇವಿ


ಬೆಳಗಾವಿ,ಜುಲೈ೦೨: ಫ.ಗು.ಹಳಕಟ್ಟಿಯವರು ೧೨ನೇ ಶತಮಾನದ ಬಸವಾದಿ ಶರಣರ ಪ್ರತೀಕವಾಗಿ ಜನಮಾನಸದಲ್ಲಿ ನೆಲೆಗೊಂಡಿದ್ದಾರೆ. ಮಾನವನಲ್ಲಿಯೇ ದಿವ್ಯತ್ವ ಇದೆ ಎನ್ನುವ ಅನುಭಾವವನ್ನು ವಚನ ಸಂಪತ್ತಿನ ಮೂಲಕ ಪಸರಿಸಿ ಸರ್ವರ ಬದುಕಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಬೆಳಗಾವಿ ಬಸವತತ್ವ ಅನುಭಾವ ಕೇಂದ್ರದ ಪ್ರವಚನಕಾರರಾದ ಮಾತೆ ವಾಗ್ದೇವಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಶನಿವಾರ (ಜುಲೈ ೦೨) ವಚನ ಪಿತಾಮಹ ಫ.ಗು ಹಳಕಟ್ಟಿ ಅವರ ಜಯಂತಿ – ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ -೨೦೨೨ ಕಾರ್ಯಕ್ರಮದಲ್ಲಿ ಹಳಕಟ್ಟಿಯವರ ಬದುಕಿನ ಕುರಿತು ಅವರು ಉಪನ್ಯಾಸ ನೀಡಿದರು.
ಹಳಕಟ್ಟಿ ಅವರು ಬರೀ ವಚನ ಸಾಹಿತ್ಯ ಅಷ್ಟೇ ಅಲ್ಲದೇ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಚಟುವಟಿಕೆಗಳಲ್ಲೂ ನಿಸ್ಸೀಮರಾಗಿದ್ದರು. ತಮ್ಮ ಜೀವಿತಾವಧಿಯ ಕೊನೆಯ ತನಕ ಸ್ವಸ್ಥ ಸಮಾಜಕ್ಕಾಗಿ ನಾಡಿನ ಶರಣರ ಅನುಭಾವವನ್ನು ವಚನಗಳ ಮೂಲಕ ಹರಡಿ ನಾಡಿನಲ್ಲಿ ‘ಶರಣ ಜ್ಯೋತಿ’ಎಂದೇ ಚಿರಸ್ಥಾಯಿ ಆಗಿದ್ದಾರೆ ಎಂದು ಅವರು ಸ್ಮರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಹಳಕಟ್ಟಿ ಅವರು ವಚನ ಸಾಹಿತ್ಯದ ಮುಖೇನ ವಿಶ್ವದಲ್ಲಿ ಕನ್ನಡ ಕಂಪು ಪಸರಿಸಿದರು. ಕನ್ನಡ ಸಾಹಿತ್ಯ ಶ್ರೀಮಂತಿಕೆಗೆ ಫ.ಗು.ಹಳಕಟ್ಟಿಯವರ ವಚನ ಸಂಪತ್ತೂ ಅದ್ಭುತ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಉದ್ಘಾಟನೆ ಬಳಿಕ ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಗಣ್ಯರು ಪೂಜೆ, ಪುಷ್ಪ ಸಲ್ಲಿಸಿದರು. ನಂತರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅವರು ನಾಡಿನ ಶರಣರ ಅನುಭಾವವನ್ನು ನಾಡಿನ ಉದ್ದಗಲಕ್ಕೂ ವಚನಗಳ ಮೂಲಕ ಪಸರಿಸಿದ ಫ.ಗು. ಹಳಕಟ್ಟಿ ಅವರು ವಚನ ಸಂತನಾಗಿ ಉಳಿದುಕೊಂಡಿದ್ದಾರೆ ಎಂದು ಸ್ಮರಿಸಿಕೊಂಡರು.
ಕಳೆಗಟ್ಟಿದ ಹಳಕಟ್ಟಿಯವರ ಭಾವಚಿತ್ರ ಮೆರವಣಿಗೆ:
ಇದಕ್ಕೂ ಮುಂಚೆ ನಗರದ ಕೋಟೆ ಕೆರೆಯಿಂದ ಕುಮಾರ ಗಂಧರ್ವ ಕಲಾ ಮಂದಿರದವರೆಗೆ ಜಾನಪದ ಕಲಾಮೇಳದೊಂದಿಗೆ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಭಾವಚಿತ್ರ ಮೆರವಣಿಗೆ ನಡೆಯಿತು. ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಮೆರವಣಿಗೆಗೆ ಚಾಲನೆ ನೀಡಿದರು. ಹಳಕಟ್ಟಿ ಅವರ ಅಭಿಮಾನಿಗಳು, ಸಾಹಿತಿಗಳು, ಸಾರ್ವಜನಿಕರು ಇತರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಸಂಭ್ರಮ:
ಹಳಕಟ್ಟಿ ಅವರ ಜಯಂತಿ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ಕಾರ್ಯಕ್ರಮದಲ್ಲಿ ಡಾ. ರೋಹಿಣಿ ಕೆ.ಎಂ ತಂಡದಿಂದ ವಚನ ಸಂಗೀತ ಹಾಗೂ ವಿವಿಧ ಕಲಾ ತಂಡಗಳಿಂದ ನೃತ್ಯ ರೂಪಕ ಪ್ರದರ್ಶನಗೊಂಡಿತು.
ಹಳಕಟ್ಟಿ ವಂಶಸ್ಥರಿಗೆ ಉಡುಗೊರೆ:
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ವತಿಯಿಂದ ವಚನ ಪಿತಾಮಹ ಫ.ಗು.ಹಳಕಟ್ಟಿ ಅವರ ಕುಟುಂಬಸ್ಥರಿಗೆ ಬಸವ ಭಾವಚಿತ್ರ, ವಚನ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಬಸವತತ್ವ ಅನುಭಾವ ಕೇಂದ್ರದ ಮಾತೆ ಕುಮುದಿನಿ, ಬಸವರಾಜ ರೊಟ್ಟಿ, ರಾಜಶೇಖರ ಭೋಜ, ಶಂಕರ ಗುಡಸ, ರಾಜಶ್ರೀ ದಯಾನವರ, ಎಸ್ ಜಿ ಸಿದ್ನಾಳ, ಸಿಎಂ ಬೂದಿಹಾಳ ಹಾಗೂ ವಚನಾಭಿಮಾಗಳು ಉಪಸ್ಥಿತರಿದ್ದರು.


Gadi Kannadiga

Leave a Reply