ಬೆಳಗಾವಿ : ನೆಹರು ನಗರದ ಕನ್ನಡ ಭವನದಲ್ಲಿ ಇಂದು ೧೦೯ ನೇಯ ಕಸಾಪ ಸಂಸ್ಥಾಪನಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಉದ್ಘಾಟಕರಾಗಿ ಆಗಮಿಸಿದ ಹಸಿರು ಕ್ರಾಂತಿ ದಿನಪತ್ರಿಕೆಯ ಸಂಪಾದಕರಾದ ಸಂಪತಕುಮಾರ ಮುಚಳಂಬಿಯವರು ಕನ್ನಡದ ಉಳಿವಿಗಾಗಿ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಗಳನ್ನು ತಿಳಿಸಿದರು. “ಕನ್ನಡ ಅಸ್ಮಿತೆ- ಕನ್ನಡ ಸಾಹಿತ್ಯ ಪರಿಷತ್ತು” ಎಂಬ ವಿಷಯದ ಕುರಿತು ಮಹೇಶ ಪ.ಪೂ ಮಹಾವಿದ್ಯಾಲಯದ ಪ್ರಾಚಾರ್ ಎಂ.ವ್ಹಿ.ಭಟ್ಟರವರು ಮಾತನಾಡಿ ಅತ್ಯಂತ ಮೌಲಿಕ ವಿಚಾರಗಳನ್ನು ತಿಳಿಸಿ ಕನ್ನಡದ ಸಂವಾದ, ಚರ್ಚೆಗಳು ಮತ್ತು ಚಟುವಟಿಕೆಗಳು ನಿರಂತರವಾಗಿ ಸಾಗಬೇಕೆಂದರು. ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರೇವತಿ.ಹಿರೇಮಠ ಅವರು ಕನ್ನಡ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದೆ ಸ್ತ್ರೀ ಸ್ವ ಸಹಾಯ ಸಂಘಗಳು ಚಟುವಟಿಕೆಗಳಲ್ಲಿ ತೊಡಗಿಕೊಂಡು ಸರಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಅಭಿಪ್ರಾಯ ಪಟ್ಟರು. ಬೆಳಗಾವಿಯ ಹಿರಿಯ ಸಾಹಿತಿ ಸ. ರಾ ಸುಳಕೂಡೆ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಸಾಪ ಚಟುವಟಿಕೆಗಳಿಗೆ ಶಾಸನ ಬದ್ಧವಾಗಿ ಹಣ ಬಿಡುಗಡೆಯಾಗಿ ಹಳ್ಳಿ ಹಳ್ಳಿಗಳಲ್ಲಿ ಕನ್ನಡ ಪ್ರಭಾವ ಬೀರುವ ಸಮಾರಂಭಗಳು ಜರುಗಬೇಕೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಮಂಗಲಾ ಮೆಟಗುಡರವರು ವಹಿಸಿಕೊಂಡು ಪುಸ್ತಕ ಮುದ್ರಣ ವಿಭಾಗಕ್ಕೆ ಬೆಳಗಾವಿ ಜಿಲ್ಲೆವರೆ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ರಚಿಸಿ ಕಳುಹಿಸಬೇಕೆಂದು ಆಶಯ ವ್ಯಕ್ತಪಡಿಸಿದರು.ಸಮಾರಂಭದಲ್ಲಿ ಬೆಳಗಾವಿ ಲೇಖಕಿಯ ಸಂಘದ ಪದಾಧಿಕಾರಿಗಳು, ಕಸಾಪ ತಾಲೂಕಾ ಅಧ್ಯಕ್ಷರು, ಜಿಲ್ಲಾ ಕಸಾಪದ ಕಾರ್ಯಕಾರಿ ಸಮಿತಿಯ ಸದಸ್ಯರು ಕನ್ನಡಾಭಿಮಾನಿಗಳು ಹಾಗೂ ಅನೇಕ ಕಲಾವಿದರು ಭಾಗಿಯಾಗಿದ್ದರು. ಎಂ.ವೈ.ಮೆಣಸಿನಕಾಯಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೀರಭದ್ರಪ್ಪ ಅಂಗಡಿಯವರು ಪರಿಚಯಿಸಿದರು. ಪ್ರತಿಭಾ ಕಳ್ಳಿಮಠ ನಿರೂಪಿಸಿದರು.ಸುನೀಲ ಹಲವಾಯಿ ವಂದಿಸಿದರು.
Gadi Kannadiga > Local News > ಕನ್ನಡದ ಉಳಿವಿಗಾಗಿ ಹೋರಾಟ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ : ಮುಚಳಂಬಿ