ಬೆಳಗಾವಿ, ಜು.೨೪ : ಜಿಲ್ಲೆಯ ಮಳೆಯಾಗುತ್ತಿದ್ದರೂ ಕೆಲವೆಡೆ ಬರದ ಛಾಯೆ ಇದೆ. ಆದ್ದರಿಂದ ಅವಶ್ಯಕತೆ ಆಧರಿಸಿ ಕಾಳಜಿ ಕೇಂದ್ರಗಳು, ಮೇವಿನ ಕೊರತೆ ಇರುವ ಕಡೆಗಳಲ್ಲಿ ಗೋಶಾಲೆ ಆರಂಭಿಸಬೇಕು. ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುವರ್ಣ ವಿಧಾನಸೌಧದ ಕಾನ್ಫರೆನ್ಸ್ ಸಭಾಂಗಣದಲ್ಲಿ ಸೋಮವಾರ (ಜು.೨೪) ನಡೆದ ೨೦೨೩-೨೪ ನೇ ಸಾಲಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(೨೦ ಅಂಶಗಳು ಸೇರಿದಂತೆ) ಜೂನ್ ೨೦೨೩ ಮಾಹೆಯ ಅಂತ್ಯದವರೆಗಿನ ಮೊದಲನೇ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನರೇಗಾ ಯೋಜನೆಯಡಿ ಹೊಲಗಳಿಗೆ ಹೋಗುವ ರಸ್ತೆಗಳನ್ನು ನಿರ್ಮಿಸಿಕೊಡಲು ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.೨೦೧೯-೨೦ ನೇ ಸಾಲಿನಲ್ಲಿ ಪ್ರವಾಹ/ಅತಿವೃಷ್ಟಿ ಯಿಂದ ಮನೆ ಕಳೆದುಕೊಂಡಿರುವವರಿಗೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಕೂಡಲೇ ಮರು ಸಮೀಕ್ಷೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳಿಸಬೇಕು ಎಂದು ಹೇಳಿದರು.ಅಥಣಿ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರ ಸಭೆಯನ್ನು ನಡೆಸಿ ವಿಮಾ ಯೋಜನೆ ಸೇರಿದಂತೆ ಅಗತ್ಯವಿರುವ ಮಾಹಿತಿಯನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯ ಕೆಲವೆಡೆ ಬರಗಾಲ ಪರಿಸ್ಥಿತಿ ಇರುವ ಬಗ್ಗೆ ಶಾಸಕರು ಗಮನಸೆಳೆದಾಗ ಮೇವಿನ ಕೊರತೆ ಇದ್ದಲ್ಲಿ ಅಗತ್ಯತೆ ಆಧರಿಸಿ ಗೋಶಾಲೆಗಳನ್ನು ಆರಂಭಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ಅವರು ಖುದ್ದಾಗಿ ಪರಿಶೀಲಿಸಿ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ರಸ್ತೆ ಅಗೆತ; ನಿಗಾ ವಹಿಸಲು ನಿರ್ದೇಶನ:
ರಸ್ತೆ ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿರುತ್ತದೆ. ಕೇಬಲ್ ಅಳವಡಿಸಲು ಕೆಲವೆಡೆ ರಸ್ತೆ ಅಗೆಯಲಾಗುತ್ತಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಸೂಚನೆ ನೀಡಿದರು.
ಅನುಮತಿ ಇಲ್ಲದೇ ರಸ್ತೆ ಅಗೆಯುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟಬೇಕು. ನಿಯಮಾವಳಿ ಪ್ರಕಾರ ದುಡ್ಡು ಪಾವತಿಸಿ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅಂತಹ ಕಾಮಗಾರಿಗಳನ್ನು ತಡೆಹಿಡಿಯಬೇಕು ಎಂದು ನಿರ್ದೇಶನ ನೀಡಿದರು.
ಇಸ್ಲಾಂಪುರ ಸೇರಿದಂತೆ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಕೂಡಲೇ ಪ್ರಕರಣಗಳನ್ನು ದಾಖಲಿಸಿ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅನ್ನಭಾಗ್ಯ ಯೋಜನೆಯಡಿ ಎಲ್ಲ ಅರ್ಹ ಫಲಾನುಭವಿಗಳಿಗೆ ನಗದು ಜಮೆ ಮಾಡಬೇಕು ಎಂದು ಹೇಳಿದರು.
ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ:
ಬೆಳಗಾವಿ ನಗರದಲ್ಲಿ ನಿರ್ಮಿಸಲು ಉದ್ಧೇಶಿಸಲಾಗಿರುವ ನೂತನ ಜಿಲ್ಲಾಧಿಕಾರಿ ಕಚೇರಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ಸದ್ಯಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಲಭ್ಯವಿರುವ ಒಟ್ಟಾರೆ ೯ ಎಕರೆ ಜಾಗೆಯಲ್ಲಿ ಎರಡು ಎಕರೆ ಜಾಗೆಯನ್ನು ಬಳಸಿಕೊಂಡು ಜಿಲ್ಲಾಧಿಕಾರಿ ಕಚೇರಿಯನ್ನು ನಿರ್ಮಿಸಲು ಉದ್ಧೇಶಿಸಲಾಗಿದೆ.
ಉಳಿದ ಜಾಗೆಯಲ್ಲಿ ಪಾರ್ಕಿಂಗ್, ಉದ್ಯಾನ ಮತ್ತಿತರ ಮೂಲಸೌಕರ್ಯ ಒದಗಿಸಲಾಗುವುದು. ಈ ಯೋಜನೆ ಕುರಿತು ಜನ ಪ್ರತಿನಿಧಿಗಳು ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಬೇಕೆಂದು ತಿಳಿಸಿದರು.
ಎಲ್ಲ ವಿಕಲಚೇತನರಿಗೆ ವಾಹನ-ಸಚಿವೆ ಹೆಬ್ಬಾಳಕರ್:
ರಾಜ್ಯದಲ್ಲಿರುವ ಎಲ್ಲ ವಿಕಲಚೇತನರಿಗೆ ಅವರ ಅಗತ್ಯತೆ ಆಧರಿಸಿ ಒಂದು ಬಾರಿಗೆ ದ್ವಿಚಕ್ರ ವಾಹನ ನೀಡಲು ತೀರ್ಮಾನಿಸಲಾಗಿದೆ. ಆದ್ದರಿಂದ ಅರ್ಹ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹೆಸ್ಕಾಂ ನಿರ್ಲಕ್ಷ್ಯ ದಿಂದ ವಿದ್ಯುತ್ ತಂತಿ ತಗುಲಿ ಮರಣ ಹೊಂದಿರುವವರಿಗೆ ಕೂಡಲೇ ಪರಿಹಾರವನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಬಾಡಿಗೆ ಕಟ್ಟಡಗಳಲ್ಲಿರುವ ಅಂಗನವಾಡಿ ಕೇಂದ್ರಗಳನ್ನು ಸಾಧ್ಯವಿದ್ದಷ್ಟು ಶಾಲಾ ಆವರಣದಲ್ಲಿ ಅಂಗನವಾಡಿ ಕೇಂದ್ರ ನಿರ್ಮಿಸಲು ಆದ್ಯತೆ ನೀಡಬೇಕು. ಈ ರೀತಿ ಮಾಡುವುದರಿಂದ ಅಂಗನವಾಡಿ ಮಕ್ಕಳು ಮುಂದೆ ಅದೇ ಶಾಲೆಗೆ ಪ್ರವೇಶ ಪಡೆಯಲು ಅನುಕೂಲವಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಗೃಹಲಕ್ಷ್ಮೀ ಯೋಜನೆ; ಫಲಾನುಭವಿಗಳ ನೋಂದಣಿಗೆ ಸೂಚನೆ:
ಗೃಹಲಕ್ಷ್ಮೀ ಯೋಜನೆಗೆ ೧೭ ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಜುಲೈ ೨೦ ರಿಂದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.ನೋಂದಣಿ ಪ್ರಕ್ರಿಯೆ ಹಾಗೂ ನೋಂದಾಯಿತ ಫಲಾನುಭವಿಗಳ ಸಂಖ್ಯೆ ಮತ್ತಿತರ ವಿಷಯಗಳನ್ನು ಸ್ಥಳೀಯ ಶಾಸಕರ ಗಮನಕ್ಕೆ ತರಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು.ಸರಕಾರದ ಯೋಜನೆಯನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿಗಳನ್ನು ನೇಮಿಸಲಾಗಿದೆ.ಗ್ರಾಮ ಪಂಚಾಯತಿ ಮಟ್ಟದಲ್ಲಿ ಗೃಹಲಕ್ಷ್ಮೀ ಯೋಜನೆ ಕುರಿತು ಪ್ರತಿದಿನ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಸಭೆಯಲ್ಲಿ ಮಾತನಾಡಿದ ಶಾಸಕ ಮಹಾಂತೇಶ ಕೌಜಲಗಿ ಅವರು ನರೇಗಾ ಯೋಜನೆಯಡಿ ಹೊಲಗಳಿಗೆ ಹೋಗುವ ರಸ್ತೆಗಳನ್ನು ನಿರ್ಮಿಸಿಕೊಡಬೇಕು. ಜಲಜಜೀವನ ಮಿಷನ್ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಕೂಡಲೇ ಹಸ್ತಾಂತರಿಸಬೇಕು.ಧಾರವಾಡ ಜಿಲ್ಲೆಗೆ ಹೋಲಿಸಿದರೆ ಪಕ್ಕದಲ್ಲೇ ಇರುವ ಬೆಳಗಾವಿ ಜಿಲ್ಲೆಯ ರೈತರಿಗೆ ಬೆಳೆವಿಮೆ ಪರಿಹಾರದಲ್ಲಿನ ತಾರತಮ್ಯ ಇದುವರೆಗೆ ಸರಿಪಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ತಾಲ್ಲೂಕು ಆಸ್ಪತ್ರೆಯಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಕೊರತೆ ಕುರಿತು ಪ್ರಸ್ತಾಪಿಸಿದ ಶಾಸಕ ಮಹಾಂತೇಶ ಕೌಜಲಗಿ, ದಾಸ್ತಾನು ಇದ್ದಾಗಲೂ ಬೇಡಿಕೆ ಸಲ್ಲಿಸಿದರೆ ಸಕಾಲದಲ್ಲಿ ಔಷಧ ಸಾಮಗ್ರಿ ಪೂರೈಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕ ಭರಮಗೌಡ(ರಾಜು) ಕಾಗೆ, ಕಾಗವಾಡ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವೆಡೆ ಐದು ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡಿರುವವರಿಗೆ ಇದುವರೆಗೆ ಪರಿಹಾರ ದೊರಕಿರುವುದಿಲ್ಲ ಎಂದರು.
ಶಾಪುರದಲ್ಲಿ ೯೦ ಮನೆಗಳ ಕೆಟಗರಿ ವರ್ಗೀಕರಣ ಅಸಮರ್ಪಕವಾಗಿ ಮಾಡಲಾಗಿದ್ದು, ಇದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.ದ್ರಾಕ್ಷಿ ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಬೇಕು ಹಾಗೂ ಕಾಗವಾಡ ಮತಕ್ಷೇತ್ರದಲ್ಲಿ ಮೇವಿನ ಕೊರತೆಯನ್ನು ನೀಗಿಸಬೇಕು ಎಂದರು.ಕ್ಷೇತ್ರದಲ್ಲಿ ಒಂದೆಡೆ ಬರಗಾಲ ಪರಿಸ್ಥಿತಿ ಇದ್ದರೆ ಇನ್ನೊಂದೆಡೆ ಮಳೆ ಜಾಸ್ತಿಯಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಸಕರಾದ ಆಸಿಫ್(ರಾಜು) ಸೇಠ್, ಬೆಳಗಾವಿ ನಗರದಲ್ಲಿ ಇರುವ ಸರಕಾರಿ ಆಸ್ಪತ್ರೆಯಲ್ಲಿ ಶೇ.೬೦ ರಷ್ಟು ನರ್ಸಿಂಗ್ ಸಿಬ್ಬಂದಿ ಕೊರತೆ ಇದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ಹುಕ್ಕೇರಿ, ನರೇಗಾ ಯೋಜನೆಯಡಿ ಈ ವರ್ಷ ಅಂಬೇಡ್ಕರ್ ಭವನಗಳ ದುರಸ್ತಿ ಹಾಗೂ ಕಾಂಪೌಂಡ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.
೨೦೧೯-೨೦ ನೇ ಸಾಲಿನಲ್ಲಿ ಪ್ರವಾಹ/ಅತಿವೃಷ್ಟಿ ಯಿಂದ ಮನೆ ಕಳೆದುಕೊಂಡಿರುವವರಿಗೆ ಪರಿಹಾರ ಒದಗಿಸಲು ಅನುಕೂಲವಾಗುವಂತೆ ಕೆಟಗರಿಗಳ ಪ್ರಕಾರ ಮರು ಸಮೀಕ್ಷೆಗೆ ಆದೇಶ ಮಾಡಲಾಗಿದೆ. ಆ ಆದೇಶದ ಪ್ರಕಾರ ಕೂಡಲೇ ಮರು ಸಮೀಕ್ಷೆ ಮಾಡಿ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಕಳಿಸಬೇಕು ಎಂದು ಹೇಳಿದರು.ಜಿಲ್ಲೆಯ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಹಿರೇಕೊಡಿ ಸಮೀಪದಲ್ಲಿ ಇರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ೨೦೧೪-೧೫ ರಲ್ಲಿ ಆರಂಭಗೊಂಡಿದೆ. ಆದರೆ ಇದುವರೆಗೂ ಪೂರ್ಣಗೊಂಡಿರುವುದಿಲ್ಲ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಗಮನಸೆಳೆದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಕೆಲವೆಡೆ ಇದುವರೆಗೆ ಮಳೆಯ ಕೊರತೆಯಿಂದ ಸಮರ್ಪಕ ಬಿತ್ತನೆ ಆಗದಿರುವುದರಿಂದ ಅಂತಹ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.
ವಾಡಿಕೆಗಿಂತ ಶೇ.೧೧ರಷ್ಟು ಮಳೆ ಕೊರತೆ:
ಜೂನ್ ನಲ್ಲಿ ಶೇ.೬೮ ರಷ್ಟು ಕಡಿಮೆ ಮಳೆಯಾಗಿತ್ತು. ಜುಲೈ ತಿಂಗಳಿನಲ್ಲಿ ಶೇ.೪೭ರಷ್ಟು ಹೆಚ್ಚಿನ ಮಳೆಯಾಗಿದೆ. ಎರಡೂ ತಿಂಗಳ ವಾಡಿಕೆಗಿಂತ ಶೇ.೧೧ ರಷ್ಟು ಕಡಿಮೆ ಮಳೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
೨.೪೦ ಲಕ್ಷ ಕ್ಯೂಸೆಕ್ ನೀರು ಒಳಹರಿವು ಇದ್ದಾಗ ಪ್ರವಾಹ ಸಾಧ್ಯತೆ ಇರುತ್ತದೆ. ಸದ್ಯಕ್ಕೆ ೧.೧೪ ಲಕ್ಷ ಕ್ಯೂಸೆಕ್ ಒಳಹರಿವು ಇರುವುದರಿಂದ ಯಾವುದೇ ಆತಂಕವಿಲ್ಲ ಎಂದು ತಿಳಿಸಿದರು.ವೇದಗಂಗಾ-ದೂಧಗಂಗಾ ನದಿಗಳಲ್ಲಿ ಒಳಹರಿವು ಹೆಚ್ಚಿನ ಪ್ರಮಾಣದಲ್ಲಿದೆ. ಈಗಾಗಲೇ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಅಗತ್ಯಬಿದ್ದರೆ ಕೂಡಲೇ ಜನರನ್ನು ಸ್ಥಳಾಂತರಿಸಲಾಗುವುದು.ಜಿಲ್ಲೆಯಲ್ಲಿ ಇದುವರೆಗೆ ಶೇ.೬೮ರಷ್ಟು ಬಿತ್ತನೆಯಾಗಿದೆ. ಹಿಂದಿನ ವರ್ಷಗಳಲ್ಲಿ ಮನೆಹಾನಿಯಾಗಿರುವ ಪ್ರಕರಣಗಳಲ್ಲಿ ಕಳೆದ ಎರಡು ತಿಂಗಳಲ್ಲಿ ೫೨ ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಫಲಾನುಭವಿಗಳ ಖಾತೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಬೆಳೆವಿಮೆ ಪರಿಹಾರ ನಿಗದಿಪಡಿಸುವಲ್ಲಿ ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿರುವ ತಾರತಮ್ಯ ಮತ್ತು ಅಕ್ರಮಗಳನ್ನು ತಡೆಗಟ್ಟಲು ಕೃಷಿ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಜಿಲ್ಲೆಯಲ್ಲಿ ಹೊಸದಾಗಿ ೧೩೦ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲು ಸರಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಕುಡಿಯುವ ನೀರು ಪೂರೈಕೆ ವ್ಯವಸ್ಥೆಗೆ ಸಂಬಂಧಿಸಿದಂತೆ ಹಳೆಯ ಪೈಪ್ ಲೈನ್, ಫೀಡರ್ ಚಾನೆಲ್ ಮತ್ತಿತರ ಕೆಲಸಗಳನ್ನು ಜಲಜೀವನ ಮಿಷನ್ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ ವೇತನ ಪಾವತಿಸಲು ಸರಕಾರ ಆದೇಶಿಸಿದೆ. ಆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಭೋಯರ್ ತಿಳಿಸಿದರು.ನರೇಗಾ ಯೋಜನೆಯಡಿ ಭವನಗಳ ದುರಸ್ತಿ ಕುರಿತು ಮಾರ್ಗದರ್ಶನ ಪಡೆದುಕೊಳ್ಳಲಾಗುವುದು ಎಂದರು.
ಅನ್ನಭಾಗ್ಯ ಪ್ರಚಾರಸಾಮಗ್ರಿ ಬಿಡುಗಡೆ:
ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅನ್ನಭಾಗ್ಯ ಯೋಜನೆಯ ಕುರಿತ ಪ್ರಚಾರಸಾಮಗ್ರಿಗಳನ್ನು ಬಿಡುಗಡೆಗೊಳಿಸಿದರು.
ಕೋವಿಡ್ ಸಂದರ್ಭದಲ್ಲಿ ಮರಣ ಹೊಂದಿದ ಸರಕಾರಿ ನೌಕರರ ಅವಲಂಬಿತರಿಗೆ ಅನುಕಂಪ ಆಧಾರದಲ್ಲಿ ನೇಮಕಾತಿ ಆದೇಶಪತ್ರಗಳನ್ನು ಸಚಿವರು ವಿತರಿಸಿದರು.ಇದೇ ವೇಳೆ ನರೇಗಾ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸಲಾಯಿತು. ನರೇಗಾ ಯೋಜನೆ ಕುರಿತ ಪ್ರಚಾರಸಾಮಗ್ರಿಗಳನ್ನು ಕೂಡ ಸಚಿವದ್ವಯರು ಬಿಡುಗಡೆಗೊಳಿಸಿದರು.
ಶಾಸಕರಾದ ದುರ್ಯೋಧನ ಐಹೊಳೆ, ಬಾಬಾಸಾಹೇಬ್ ಪಾಟೀಲ, ವಿಠ್ಠಲ ಹಲಗೇಕರ, ಮಹೇಂದ್ರ ತಮ್ಮಣ್ಣವರ, ಶಾಸಕರಾದ ವಿಶ್ವಾಸ ವೈದ್ಯ, ನಿಖಿಲ್ ಕತ್ತಿ, ವಿಧಾನಪರಿಷತ್ ಸದಸ್ಯರಾದ ಚನ್ನರಾಜ್ ಹಟ್ಟಿಹೊಳಿ, ಡಾ.ಸಾಬಣ್ಣ ತಳವಾರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ, ಡಿಸಿಪಿ ಟಿ.ಶೇಖರ್, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Gadi Kannadiga > Local News > ಮೊದಲ ತ್ರೆöÊಮಾಸಿಕ ಕೆಡಿಪಿ ಸಭೆ; ಕಾಳಜಿ ಕೇಂದ್ರ, ಗೋಶಾಲೆ ಆರಂಭಿಸಲು ನಿರ್ದೇಶನ ಗೋಶಾಲೆ ಆರಂಭಿಸಲು ನಿರ್ದೇಶನ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ
ಮೊದಲ ತ್ರೆöÊಮಾಸಿಕ ಕೆಡಿಪಿ ಸಭೆ; ಕಾಳಜಿ ಕೇಂದ್ರ, ಗೋಶಾಲೆ ಆರಂಭಿಸಲು ನಿರ್ದೇಶನ ಗೋಶಾಲೆ ಆರಂಭಿಸಲು ನಿರ್ದೇಶನ ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ
Suresh24/07/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023