This is the title of the web page
This is the title of the web page

Please assign a menu to the primary menu location under menu

Local News

ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್‌ರವರಿಂದ ಧ್ವಜಾರೋಹಣ


ಕೊಪ್ಪಳ ಜನವರಿ ೨೬ : ೭೪ನೇ ಗಣರಾಜ್ಯೋತ್ಸವ ದಿನಾಚರಣೆ ನಿಮಿತ್ತ ಕೊಪ್ಪಳ ಜಿಲ್ಲಾಡಳಿತದಿಂದ ಜನವರಿ ೨೬ ರಂದು ನಗರದ ಗದಗ ರಸ್ತೆಯ ಜಿಲ್ಲಾ ಕ್ರೀಡಾಂಗಣಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಸಿಂಗ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ೨೦೨೨-೨೩ನೇ ಸಾಲಿನಲ್ಲಿ ಇಲ್ಲಿಯವರೆಗೆ ೭೩.೪೪ ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.೧೦೫ರಷ್ಟು ಪ್ರಗತಿ ಸಾಧಿಸಲಾಗಿದೆ. ೧.೭೦ ಲಕ್ಷ ಕುಟುಂಬಗಳಿಗೆ ಹಾಗೂ ೩.೫೮ ಲಕ್ಷ ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದೆ. ಮುಖ್ಯಮಂತ್ರಿಯವರ ಬಹು ನಿರೀಕ್ಷೆಯ ಕಾರ್ಯಕ್ರಮವಾದ ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಜಿಲ್ಲೆಯಲ್ಲಿ ೧,೫೭೫ ಮಹಿಳಾ ಉದ್ಯಮಿಗಳಿಗೆ ಬ್ಯಾಂಕ್ ಮೂಲಕ ಸಾಲ ಸೌಕರ್ಯ ಒದಗಿಸಲಾಗುವುದು. ಕೊಪ್ಪಳ ಜಿಲ್ಲೆಯ ಡಿಜಿಪೇ ಸಖಿಯಾದ ಶ್ರುತಿ ಚವ್ಹಾಣ್ ಅವರು ಹಣಕಾಸಿನ ವಹಿವಾಟಿನಲ್ಲಿ ಮುಖ್ಯಮಂತ್ರಿ ಅವರಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಜೊತೆಗೆ ರಾಷ್ಟ್ರಮಟ್ಟದಲ್ಲಿ ಸಹ ಎರಡನೇ ಸ್ಥಾನ ಪಡೆದಿದ್ದಾರೆ ಎಂದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವು ಐತಿಹಾಸಿಕ ಪ್ರಸಿದ್ದ ಯಾತ್ರಾ ಸ್ಥಳವಾಗಿದ್ದು, ಶ್ರೀ ಆಂಜನೇಯಸ್ವಾಮಿ ಜನಿಸಿದ ಸ್ಥಳವೆಂದೇ ಪ್ರಸಿದ್ದಿಯಾಗಿದೆ. ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ೨೦೨೧-೨೨ನೇ ಸಾಲಿನಲ್ಲಿ ೨೦.೦೦ ಕೋಟಿ ರೂ. ಮತ್ತು ೨೦೨೨-೨೩ನೇ ಸಾಲಿನಲ್ಲಿ ೧೦೦ ಕೋಟಿ ರೂ. ಒದಗಿಸಲು ಈಗಾಗಲೇ ಘೋಷಿಸಲಾಗಿದೆ. ೨೦೨೨-೨೩ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಒದಗಿಸಲಾಗಿರುವ ಅನುದಾನದಲ್ಲಿ ಬೃಹತ್ ಅಭಿವೃದ್ದಿ ಯೋಜನೆಗಳಿಗೆ ನಿಗದಿಪಡಿಸಿರುವ ೧,೫೦೦ ಕೋಟಿ ರೂ.ಗಳಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ರೂ.೧೦೦ ಕೋಟಿ ಸರ್ಕಾರದ ವಿವೇಚನಾ ನಿಧಿ ರೂ.೭೫ ಕೋಟಿ ಮತ್ತು ಮುಖ್ಯ ಮಂತ್ರಿಗಳ ವಿವೇಚನಾ ನಿಧಿ ರೂ.೩೦ ಕೋಟಿಗಳನ್ನು ಹೊರತುಪಡಿಸಿ ಲಭ್ಯವಾಗುವ ರೂ.೧೨೯೫ ಕೋಟಿಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿವೇಚನೆಗೆ ರೂ.೧೨೪ ಕೋಟಿಗಳಲ್ಲಿ ಮೀಸಲಿರಿಸಿ ಎಸ್.ಸಿ.ಪಿ.ಗೆ ರೂ.೨೩೮.೦೦ ಕೋಟಿಗಳು ಟಿ.ಎಸ್.ಪಿ.ಗೆ ರೂ.೧೫೬.೦೦ ಕೋಟಿಗಳು ಮತ್ತು ಸಾಮಾನ್ಯ ಯೋಜನೆಯಡಿ ರೂ.೭೭೭.೦೦ ಕೋಟಿಗಳು ಸೇರಿ ಒಟ್ಟು ರೂ ೧,೧೭೧.೦೦ ಕೋಟಿಗಳ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರವು ಅನುಮೋದನೆ ನೀಡಿ ಆದೇಶಿಸಿದೆ ಎಂದು ಹೇಳಿದರು.
ರೈತರ ಮಕ್ಕಳ ವಿದ್ಯಾಭ್ಯಾಸ ಪ್ರೋತ್ಸಾಹಿಸಲು ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಯಡಿಯಲ್ಲಿ ಕೊಪ್ಪಳ ಜಿಲ್ಲೆಯ ೪೪,೬೩೧ ವಿದ್ಯಾರ್ಥಿಗಳಿಗೆ ೧೭.೦೯ ಕೋಟಿ ರೂಪಾಯಿ ನೇರ ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಜೊತೆಗೆ ಈ ವರ್ಷದಿಂದ ಸರ್ಕಾರವು ಭೂರಹಿತ ಕೃಷಿ ಕಾರ್ಮಿಕ ಮಕ್ಕಳಿಗೂ ಸಹ ಈ ಯೋಜನೆಯನ್ನು ವಿಸ್ತರಿಸಿ ವಿದ್ಯಾರ್ಥಿವೇತನ ನೀಡಲು ಆದೇಶಿಸಿದೆ. ಜಿಲ್ಲೆಯಲ್ಲಿ ಅರಣ್ಯ ಇಲಾಖೆಯಿಂದ ಉತ್ತಮ ಕಾರ್ಯಗಳಾಗಿವೆ. ಪ್ರಸಕ್ತ ಸಾಲಿನಲ್ಲಿ ೨೬೫ ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ೧ ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನೆಡುತೋಪು ನಿರ್ಮಾಣ ಮಾಡಲಾಗಿದೆ. ೬೯,೦೦೦ ಸಸಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲಾಗಿದೆ. ಸದ್ಯದಲ್ಲೇ ವೃಕ್ಷೋದ್ಯಾನ ನಿರ್ಮಾಣಕ್ಕಾಗಿ ಕಾರ್ಯಚಟುವಟಿಕೆಗಳು ಪ್ರಾರಂಭವಾಗಲಿವೆ. ಗಂಗಾವತಿ ತಾಲೂಕಿನ ಬಂಕಾಪುರದಲ್ಲಿ ಸದ್ಯದಲ್ಲೇ ತೋಳ ಸಂರಕ್ಷಣಾ ಮೀಸಲು ಪ್ರದೇಶವು ಪ್ರಗತಿ ಹಂತದಲ್ಲಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದಲೂ ಉತ್ತಮ ಕಾರ್ಯಗಳಾಗಿವೆ. ಅಮೃತ ಶಾಲಾ ಯೋಜನೆಯಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಜಿಲ್ಲೆಯಲ್ಲಿ ೨೩ ಶಾಲೆಗಳಿಗೆ ಪ್ರತಿ ಶಾಲೆಗೆ ೧೦ ಲಕ್ಷ ರೂ.ಗಳಂತೆ ಜಿಲ್ಲೆಗೆ ಒಟ್ಟು ೨ ಕೋಟಿ ೩೦ ಲಕ್ಷ ರೂ. ಅನುದಾನ ಮಂಜೂರಾಗಿ ಕಾಮಗಾರಿ ಮುಕ್ತಾಯವಾಗಿದೆ. ಶತಮಾನ ಪೊರೈಸಿದ ಜಿಲ್ಲೆಯ ೩ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ೪೯ ಲಕ್ಷ ರೂ.ಅನುದಾನ ಮಂಜೂರಾಗಿ ಕಾಮಗಾರಿ ಮುಕ್ತಾಯವಾಗಿದೆ. ಎಸ್.ಡಿ.ಪಿ ಯೋಜನೆಯಡಿ ಪ್ರಾಥಮಿಕ ಮತ್ತು ಪ್ರೌಢ ಸೇರಿ ೨೨ ಶಾಲೆಗಳಿಗೆ ೨೫ ಶಾಲಾ ಕೊಠಡಿಗಳ ನಿರ್ಮಾಣಕ್ಕಾಗಿ ಹಾಗೂ ೩ ಶಾಲೆಗಳ ದುರಸ್ಥಿಗೆ ೨ ಕೋಟಿ ೯೩ ಲಕ್ಷ ಅನುದಾನ ಮಂಜೂರಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ೩ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ೬ ಕೋಟಿ ರೂ. ಅನುದಾನ ಮಂಜೂರಾಗಿ ಕೊಠಡಿ ನಿರ್ಮಾಣ ಮಾಡಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯ ಅಮೃತ ಯೋಜನೆ ಕಾರ್ಯಕ್ರಮದಡಿಯಲ್ಲಿ ಒಟ್ಟು ೨೫ ಆರೋಗ್ಯ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಗುಣಮಟ್ಟ ಖಾತ್ರಿ ಕಾರ್ಯಕ್ರಮದಡಿಯಲ್ಲಿ ಗಿಣಿಗೇರಾ, ಕಾರಟಗಿ ಹಾಗೂ ದೋಟಿಹಾಳ ಮತ್ತು ಬೂದಗುಂಪಾ ಆರೋಗ್ಯ ಸಂಸ್ಥೆಗಳು ರಾಷ್ಟ್ರಮಟ್ಟದಲ್ಲಿ ಪ್ರಮಾಣಿಕೃತಗೊಂಡಿರುವುದು ಮತ್ತು ಲಕ್ಷ್ಯ ಕಾರ್ಯಕ್ರಮದಡಿಯಲ್ಲಿ ಉಪವಿಭಾಗ ಆಸ್ಪತ್ರೆ ಗಂಗಾವತಿ ಮತ್ತು ಸಮುದಾಯ ಆರೋಗ್ಯ ಕೇಂದ್ರ ಕಾರಟಗಿ ಸಂಸ್ಥೆಗಳು ರಾಷ್ಟ್ರಮಟ್ಟದಲ್ಲಿ ಪ್ರಮಾಣಿಕೃತಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಭಾರತ ಸರ್ಕಾರದ ರಾಷ್ಟ್ರೀಯ ಗೋಕುಲ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ೧೩,೪೯೪ ಉಚಿತ ಕೃತಕ ಗರ್ಭಧಾರಣೆ ಮಾಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ ನೀಡಲು ೨,೬೯೨ ಫಲಾನುಭವಿಗಳ ಗುರಿ ನಿಗದಿಯಾಗಿದ್ದು, ಅದರಲ್ಲಿ ೧,೧೬೨ ಅರ್ಜಿಗಳು ಮಂಜೂರಾಗಿವೆ. ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿಯಲ್ಲಿ ಜಾನುವಾರು ವಿಮಾ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ೨೦೨೨-೨೩ನೇ ಸಾಲಿನಲ್ಲಿ ೯೫೯ ಫಲಾನುಭವಿಗಳ ೧,೭೧೫ ಜಾನುವಾರುಗಳಿಗೆ ರೂ.೧೯.೪೫ ಲಕ್ಷ ಅನುದಾನ ವೆಚ್ಚ ಭರಿಸಿ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ೨೦೨೨-೨೩ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಬೃಹತ್ ಯೋಜನೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕನಕಗಿರಿ ತಾಲೂಕುಗಳಿಗೆ ಪೌಷ್ಟಿಕ ಆಹಾರ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಪ್ರತಿ ಘಟಕಕ್ಕೆ ರೂ.೧ ಕೋಟಿ ಅನುದಾನದಂತೆ ರೂ.೨ ಕೋಟಿ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಗೆ ಹೊಸದಾಗಿ ೧೧೦ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ೨೦೨೨-೨೩ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯ ಮಾಕ್ರೋ (ಮೆಗಾ) ಯೋಜನೆಯಡಿ ಎಸ್.ಸಿ.ಪಿ, ಟಿ.ಎಸ್.ಪಿ ಮತ್ತು ಇತರೆ ಯೋಜನೆಯಡಿ ಒಟ್ಟು ೩೭ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ೬.೫೯ ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ. ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಪ್ರಾರಂಭದಿಂದ ಮಾರ್ಚ-೨೦೨೨ ರವರೆಗೆ ೪೫,೫೨೪ ಫಲಾನುಭವಿಗಳು ಹಾಗೂ ಏಪ್ರಿಲ್-೨೦೨೨ ರಿಂದ ಡಿಸೆಂಬರ್-೨೦೨೨ರ ಅಂತ್ಯಕ್ಕೆ ೭,೩೧೬ ಫಲಾನುಭವಿಗಳು ಸೇರಿ ಒಟ್ಟು ೫೨,೮೪೦ ಫಲಾನುಭವಿಗಳಿಗೆ ೨,೨೩೧.೭೯ ಲಕ್ಷ ಮೊತ್ತವನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿಸಲಾಗಿದೆ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ೨೦೨೨-೨೩ನೇ ಸಾಲಿನಲ್ಲಿ ಒಟ್ಟು ೪೦ ಗುರಿ ನಿಗದಿಪಡಿಸಿದ್ದು, ಇಲ್ಲಿಯವರೆಗೆ ೪೯ ಭೌತಿಕ ಸಾಧನೆ ಮಾಡಿದ್ದು, ಇದರಲ್ಲಿ ೧೭೪ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲಾಗಿದೆ. ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪಾ ಗ್ರಾಮದ ಸೀಮಾದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ೨೭೦.೦೧ ಎಕರೆ ಭೂಮಿಯನ್ನು ಸ್ವಾಧೀನಪಡಿಸಿ ಅಭಿವೃದ್ಧಿ ಪಡಿಸಲಾಗಿದೆ. ಕೆ.ಐ.ಎ.ಡಿ.ಬಿ. ವತಿಯಿಂದ ಅಧಿಸೂಚನೆ ಹೊರಡಿಸುವುದು ಬಾಕಿ ಇರುತ್ತದೆ. ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಬಸಾಪುರ ಗ್ರಾಮದ ಸೀಮಾದಲ್ಲಿ ಕೈಗಾರಿಕಾ ಪ್ರದೇಶಕ್ಕಾಗಿ ೧೪೩.೧೫ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ೨೦೨೨-೨೩ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಗೆ ಮೈಕ್ರೋ ವಲಯದಲ್ಲಿ ರೂ.೧೦೦.೪೮ ಕೋಟಿ ಹಾಗೂ ಮ್ಯಾಕ್ರೋ ವಲಯದಲ್ಲಿ ರೂ.೪೩.೦೬ ಕೋಟಿ, ಒಟ್ಟು ರೂ.೧೪೩.೫೪ ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ. ನಿಗದಿಪಡಿಸಿದ ಅನುದಾನಕ್ಕೆ ಈಗಾಗಲೇ ಕ್ರಿಯಾಯೋಜನೆಯನ್ನು ರೂಪಿಸಲಾಗಿದ್ದು, ಸದರಿ ಕ್ರಿಯಾ ಯೋಜನೆಗೆ ಮಂಡಳಿಯು ಅನುಮೋದನೆಯನ್ನು ನೀಡಿರುತ್ತದೆ. ಲೋಕೋಪಯೋಗಿ ಇಲಾಖೆಯಿಂದ ರೂ.೧೩ ಕೋಟಿ ಅನುದಾನದಿಂದ ಎರಡು ಯಲಬುರ್ಗಾ ಮತ್ತ ಕೊಪ್ಪಳ ತಾಲೂಕಿನಲ್ಲಿ ಡಾ:ಬಿ.ಆರ್.ಅಂಬೇಡ್ಕರ ಬಾಲಕಿಯರ ಮತ್ತು ಬಾಲಕರ ವಿದ್ಯಾರ್ಥಿ ನಿಲಯಗಳು ಮಂಜೂರಾಗಿವೆ ರೂ.೧೫ ಕೋಟಿಗಳ ಅನುದಾನದಲ್ಲಿ ಯಲಬುರ್ಗಾ ತಾಲೂಕಿನ ೧ ಕೋರ್ಟ್ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕೊಪ್ಪಳ ಜಿಲ್ಲೆಗೆ ಒಟ್ಟು ರೂ. ೬ ಕೋಟಿ ಅನುದಾನದಲ್ಲಿ ಕೊಪ್ಪಳ, ಗಂಗಾವತಿ ಮತ್ತು ಕುಷ್ಟಗಿ ತಾಲೂಕುಗಳಲ್ಲಿ ೩ ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರಾಗಿದ್ದು, ಮೂರು ಶಾಲೆ ಕಾಮಗಾರಿ ಪ್ರಗತಿಯಲ್ಲಿವೆ. ಅಂಜನಾದ್ರಿ ಬೆಟ್ಟದ ಚತುಷ್ಪತ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲೆಯ ಎನ್‌ಹೆಚ್-೫೦ ರಸ್ತೆಯಿಂದ ಗಂಗಾವತಿ ತಾಲೂಕಿನ ಬುಕ್ಕ ಸಾಗರದವರೆಗೆ ವ್ಹಾಯಾ ಅಂಜನಾದ್ರಿ ಬೆಟ್ಟದ ಚತುಷ್ಪತ ರಸ್ತೆ ಅಭಿವೃದ್ಧಿಗಾಗಿ ೨೦೫.೦೦ ಕೋಟಿ ರೂ.ಗಳಿಗೆ ಅಂದಾಜು ಪತ್ರಿಕೆ ತಯಾರಿಸಿ, ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ರಸ್ತೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ ಎಂದರು.
ಕೆ.ಕೆ.ಆರ್.ಡಿ.ಬಿ. ಮ್ಯಾಕ್ರೋ ಅಡಿಯಲ್ಲಿ ಕೊಪ್ಪಳ ಜಿಲ್ಲಾ ರಂಗಮಂದಿರಕ್ಕೆ ಪಿಠೋಪಕರಣ, ವಿದ್ಯುತ್ತೀಕರಣ, ಧ್ವನಿವರ್ಧಕ, ಸ್ಟೇಜ್ ಅಲಂಕಾರ ಕಾಮಗಾರಿಗಳಿಗೆ ೬ ಕೋಟಿ ರೂ.ಅನುದಾನ ನೀಡಲಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೆ.ಕೆ.ಆರ್.ಡಿ.ಬಿ. ಮೆಗಾ ಅಡಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಕುಷ್ಟಗಿಗೆ ೫ ಕೋಟಿ ರೂ. ಅನುದಾನ ಹಾಗೂ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ, ಶ್ರೀರಾಮನಗರಕ್ಕೆ ೮.೯೨ ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೆ.ಕೆ.ಆರ್.ಡಿ.ಬಿ. ಮೆಗಾ ಜಿಡಿಕ್ಯೂ ಅಡಿಯಲ್ಲಿ ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳಲ್ಲಿ ೧೨ ಕೋಟಿ ರೂ.ಗಳಲ್ಲಿ ಆಯ್ದ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಸ್ಮಾರ್ಟ್ ಕ್ಲಾಸ್‌ನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೆ.ಕೆ.ಆರ್.ಡಿ.ಬಿ. ಮೆಗಾ ಮ್ಯಾಕ್ರೋ ಅಡಿಯಲ್ಲಿ ೨೦೦ ಶಾಲಾ ಕೊಠಡಿಗಳಿಗೆ ೩೦.೦೦ ಕೋಟಿ ರೂ.ಗಳ ಅನುದಾನವನ್ನು ನೀಡಲಾಗಿದ್ದು, ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಕೊಪ್ಪಳ ಜಿಲ್ಲೆಯ ಎಸ್‌ಹೆಚ್‌ಡಿಪಿ ಯೋಜನೆಯಡಿ ಹಂತ-೪ರ ಸ್ಟೇಜ್ ೨ ರಡಿ ೫ ಪ್ಯಾಕೇಜ್ ಕಾಮಗಾರಿಗಳಿಗೆ ಮೊತ್ತ ೯೧.೦೦ ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ೪೨.೦೦ ಕಿಮೀ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.
೨೦೨೨-೨೩ನೇ ಸಾಲಿನಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ೧,೮೪೨ ರೈತರಿಂದ ೧೬,೬೪೧.೫ ಕ್ವಿಂಟಾಲ್ ಹೆಸರು ಕಾಳು ಖರೀದಿ ಮಾಡಲಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ವಿವಿಧ ಸಹಕಾರ ಸಂಘಗಳಿಂದ ೬,೧೯೧.೯೫ ಮೆಟ್ರಿಕ್ ಟನ್ ರಸಗೊಬ್ಬರ ರೈತರಿಗೆ ಪೊರೈಸಲಾಗಿದೆ. ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಿಂದ ೮೦ ಜನರಿಗೆ ಸ್ವಯಂ ಉದ್ಯೋಗ ಕಲ್ಪಿಸಲಾಗಿದೆ ಎಂದು ಹೇಳಿದರು.
ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸದರಾದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಾಂತೇಶ ಎಸ್ ಪಾಟೀಲ್, ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕಾವ್ಯ ತ್ರಿವೇದಿ, ಉಪವಿಭಾಗಾಧಿಕಾರಿಗಳಾದ ಬಸವಣ್ಣೆಪ್ಪ ಕಲಶೆಟ್ಟಿ, ಕೊಪ್ಪಳ ತಹಶೀಲ್ದಾರರಾದ ಅಮರೇಶ ಬಿರಾದರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
*ಪಥಸಂಚಲನ ಬಹುಮಾನ ವಿತರಣೆ:* ಕಾರ್ಯಕ್ರಮದಲ್ಲಿ ಧ್ವಜಾರೋಹಣದ ನಂತರ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಎನ್‌ಸಿಸಿ, ಸೇವಾದಳ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ವಿವಿಧ ಶಾಲಾ-ಕಾಲೇಜುಗಳ ಮಕ್ಕಳಿಂದ ಪಥಸಂಚಲನ ಹಾಗೂ ಸಚಿವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಉತ್ತಮ ಪರೇಡ್ ಪ್ರದರ್ಶಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
*ಸಾಧಕರಿಗೆ ಸನ್ಮಾನ:* ರಾಷ್ಟ್ರಪತಿಗಳಿಂದ ಪೊಲೀಸ್ ಶ್ಲಾö್ಯಘನೀಯ ಸೇವಾ ಪದಕ ಪಡೆದ ಮುನಿರಾಬಾದ್ ಐ.ಆರ್.ಬಿ ಕಮಾಂಡೆಂಟ್ ಕೆ.ಎಂ ಮಹಾದೇವ ಪ್ರಸಾದ ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ನಿರ್ದೇಶನಾಲಯ ವತಿಯಿಂದ ರಾಷ್ಟ್ರಪತಿಗಳ ಶ್ಲಾö್ಯಘನೀಯ ಸೇವಾ ಪದಕ ಲಭಿಸಿರುವ ಕೊಪ್ಪಳ ಅಗ್ನಿಶಾಮಕ ಠಾಣಾಧಿಕಾರಿ ಜಿ.ಕೃಷ್ಣೋಜಿ ಅವರಿಗೆ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಅಲ್ಲದೇ ಗ್ರಾಮೀಣ ಭಾಗದಲ್ಲಿ ನಾಗರಿಕರಿಗೆ ಅತ್ಯಧಿಕ ಸೇವೆಗಳನ್ನು ನೀಡಿರುವ ಗ್ರಾಮ ಒನ್ ಪ್ರಾಂಚೈಸಿಗಳಿಗೆ ಜಿಲ್ಲಾ ಮಟ್ಟದ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪ್ರಶಂಸನಾ ಪತ್ರದೊಂದಿಗೆ ನೀಡಲಾಯಿತು ಹಾಗೂ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉನ್ನತ ಸಾಧನೆ ಮಾಡಿದ ಕೊಪ್ಪಳ ನಗರದ ಕೆ.ಎಸ್ ಹೆಲ್ತಕೇರ್ ಮತ್ತು ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರಮಾಣ ಪತ್ರವನ್ನು ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಯಿತು.
ಗಣರಾಜ್ಯೋತ್ಸವ ನಿಮಿತ್ತ ಎಸ್.ಎಫ್.ಎಸ್ ಶಾಲೆ ಹಾಗೂ ಸರ್ಕಾರಿ ಬಾಲಕೀಯರ ಪ್ರೌಢಶಾಲೆಯು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಯ ನೃತ್ಯ ಮಾಡಿ ಸಾರ್ವಜನಿಕರ ಗಮನ ಸೆಳೆದರು.


Leave a Reply