This is the title of the web page
This is the title of the web page

Please assign a menu to the primary menu location under menu

Local News

ಆರ್.ಟಿ.ಓ ನೂತನ ಕಟ್ಟಡದ ಶಂಕುಸ್ಥಾಪನೆ


ಬೆಳಗಾವಿ: ಫೆ.೨೭ : ೮ ಕೋಟಿ ರೂ. ವೆಚ್ಛದಲ್ಲಿ ಬೆಳಗಾವಿ ವಿಭಾಗದ ಜಂಟಿ ಸಾರಿಗೆ ಆಯುಕ್ತರ ಕಚೇರಿ ಮತ್ತು ಬೆಳಗಾವಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಿದರು.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಸಾರಿಗೆ ಇಲಾಖೆ ಸರಕಾರದ ಮಹತ್ವ ಇಲಾಖೆ. ಸರಕಾರಕ್ಕೆ ಅತೀ ಹೆಚ್ಚು ತೆರಿಗೆ ಸಂಗ್ರಹ ಮಾಡುವ ಇಲಾಖೆ ಆಗಿದೆ. ಸಾರ್ವಜನಿಕರು ದಿನನಿತ್ಯ ಇಲ್ಲಿಗೆ ಬರುತ್ತಾರೆ. ಹೀಗಾಗಿ ಇಲ್ಲಿ ಸುವ್ಯವಸ್ಥೆ ಮಾಡಬೇಕಿದೆ. ಬರುವಂತಹ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ, ಶೌಚಾಲಯ ಸೇರಿ ಇನ್ನಿತರ ಸೌಲಭ್ಯ ಕಲ್ಪಿಸಲಾಗುವುದು. ಉತ್ತಮ ಗುಣಮಟ್ಟದೊಂದಿಗೆ ಸುಂದರ ಕಟ್ಟಡ ನಿರ್ಮಾಣ ಮಾಡಬೇಕು. ಕಟ್ಟಡ ನಿರ್ಮಾಣಕ್ಕೆ ೧೨ ತಿಂಗಳ ಕಾಲಾವಧಿಯಿದ್ದು, ೧೧ ತಿಂಗಳೊಳಗೆ ಪೂರ್ಣಗೊಳಿಸಬೇಕು. ಜನವರಿ ೨೬ಕ್ಕೆ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಬೇಕು ಎಂದು ಗುತ್ತಿಗೆದಾರನಿಗೆ ಇದೇ ವೇಳೆ ಸೂಚಿಸಿದರು.
ಶಾಸಕ ಅನಿಲ ಬೆನಕೆ ಅಧ್ಯಕ್ಷತೆ ವಹಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಸಂಸದೆ ಮಂಗಲ ಅಂಗಡಿ ಆಗಮಿಸಿದ್ದರು. ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ, ಜಂಟಿ ಸಾರಿಗೆ ಆಯುಕ್ತ ಎಂ. ಶೋಭ, ಮುಖ್ಯ ಕಾಮಗಾರಿ ಅಭಿಯಂತ ಪ್ರಕಾಶ ಕಬಾಡಿ, ಗುತ್ತಿಗೆದಾರ ಉದಯ ಶೆಟ್ಟಿ, ಮೋಟರ್ ವಾಹನ ನಿರೀಕ್ಷಕರಾದ ರವಿರಾಜ ಪವಾರ, ನೂರುಲ್ಲಾ ಎಚ್.ಎಸ್., ಜೆ.ಬಿ.ನರಸನ್ನವರ, ಆನಂದ ಗಾಮನಗಟ್ಟಿ, ಸಾರಿಗೆ ಅಧಿಕಾರಿಗಳಾದ ಸುಜಯ ಕುಲಕರ್ಣಿ, ಸುಮಿತಕುಮಾರ ಉಮರಾಣಿ ಸೇರಿದಂತೆ ಇನ್ನಿತರರು ಇದ್ದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಸ್ವಾಗತಿಸಿದರು ಶಿತಲ್ ಕುಲಕರ್ಣಿ ನಿರೂಪಿಸಿದರು. ಸಾರಿಗೆ ಅಧೀಕ್ಷಕ ಶರಣಪ್ಪ ಹುಗ್ಗಿ ವಂದಿಸಿದರು.


Leave a Reply