ಬೆಳಗಾವಿ : ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಲ್ಲಿ ಓರ್ವನ ಹತ್ಯೆಯಾಗಿ 7 ಜನರಿಗೆ ಗಾಯವಾಗಿದ್ದ ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.
ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಭರಮೋಜಿ ಅರಬಳ್ಳಿ, ದೊಡ್ಡಪ್ಪ ಅರಬಳ್ಳಿ, ಬಸವಂತ ಕರವಿನಕೊಪ್ಪ ಹಾಗೂ ಮಾರಿಹಾಳ ಗ್ರಾಮದ ಲಕ್ಕಪ್ಪ ಬಸಪ್ಪ ಹಳ್ಳಿ ಎಂಬುವರು ಬಂಧಿತರು. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಆರಂಭವಾಗಿದ್ದ ಜಗಳ ವಿಕೋಪಕ್ಕೆ ತಿರುಗಿದೆ.
ಘಟನೆಯಲ್ಲಿ ಬೈಲಹೊಂಗಲ ತಾಲೂಕಿನ ಸುಂಕುಪ್ಪಿ ಗ್ರಾಮದ ಮುದುಕಪ್ಪ ಅಂಗಡಿ (25) ಎಂಬುವರ ಹತ್ಯೆಯಾಗಿತ್ತು. ಏಳು ಜನರಿಗೆ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುದುಕಪ್ಪ ಅಂಗಡಿ ಕೊಲೆಯತ್ನ ಪ್ರಕರಣದ ವಿಚಾರಣೆಗೆ ಬೆಳಗಾವಿ ಕೋರ್ಟ್ಗೆ ಬಂದಿದ್ದ.ಬೆಳಗಾವಿಯಿಂದ ಬೈಲಹೊಂಗಲಕ್ಕೆ ಹೋಗುವಾಗ ಕರಡಿಗುದ್ದಿಯಲ್ಲಿ ಆರೋಪಿಗಳು ವಾಹನ ನಿಲ್ಲಿಸಿದ್ದಾರೆ. ಆ ವೇಳೆ ಮಾತಿಗೆ ಮಾತು ಬೆಳೆದು ಉಭಯ ಗುಂಪುಗಳ ಮಧ್ಯೆ ಮಾರಾಮಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.