This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯ ಪೀರನವಾಡಿಯಲ್ಲಿ ಗಾಂಧಿ ಭವನ ಲೋಕಾರ್ಪಣೆ


ಬೆಳಗಾವಿ: ನಗರದ ಪೀರನವಾಡಿಯಲ್ಲಿ ತಲೆ ಎತ್ತಿರುವ ನೂತನ ಗಾಂಧಿ ಭವನ ಕಟ್ಟಡ ಆವರಣದಲ್ಲಿ ಮುಂದಿನ ಒಂದು ವರ್ಷದಲ್ಲಿ ಈ ನೆಲದ ಕಲೆ, ಸಾಹಿತ್ಯ ಸಂಸ್ಕೃತಿ ಹಾಗೂ ಗಾಂಧೀಜಿ ಅವರ ತತ್ವ ಸಿದ್ಧಾಂತಗಳ ಜೀವಂತಿಕೆಗಾಗಿ ಬಯಲು ರಂಗಮಂದಿರ ಮತ್ತು ಡಿಜಿಟಲ್ ಲೈಬ್ರರಿ ನಿರ್ಮಿಸಲಾಗುವುದು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಭರವಸೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಪೀರನವಾಡಿಯಲ್ಲಿ ನಿರ್ಮಿಸಲಾದ ಭವ್ಯವಾಗಿರುವ ಗಾಂಧಿ ಭವನ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗಾವಿಯಲ್ಲಿ ಮೊಟ್ಟ ಮೊದಲು ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ರಾಷ್ಟ್ರೀಯ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರ 100ವರ್ಷಗಳ ಸ್ಮರಣೆಗಾಗಿ ಈ ಗಾಂಧಿ ಭವನದಲ್ಲಿ ಒಂದು ವರ್ಷದ ವರೆಗೆ ಸರ್ಕಾರದಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಗಾಂಧೀಜಿ ತತ್ವ ಸಾರ್ವಕಾಲಿಕ ಪ್ರಸ್ತುತ:

ಗಾಂಧಿ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ರಾಷ್ಟ್ರಪಿತ ಗಾಂಧೀಜಿ ಅವರ ಸತ್ಯ, ಶಾಂತಿ, ಅಹಿಂಸಾ ಗುಣಗಳು ಇವತ್ತಿನ ಯುವ ಸಮುದಾಯಕ್ಕೆ ಪ್ರೇರಕವಾಗಿವೆ ಎಂದು ಹೇಳಿದರು.

ರಾಮ ರಾಜ್ಯ, ಗ್ರಾಮ ಸ್ವರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧಿ ಅವರ ಆಶಯವನ್ನು ನಮ್ಮ ಸರ್ಕಾರ ನನಸು ಮಾಡುವಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ದೇಶ ಭದ್ರತೆಗಾಗಿ ಅಗ್ನಿಪಥ್ ಯೋಜನೆಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

2 ಎಕರೆ ವಿಸ್ತೀರ್ಣದಲ್ಲಿ 3 ಕೋಟಿ ವ್ಯಯಿಸಿ ನಿರ್ಮಿಸಲಾದ ಗಾಂಧಿ ಭವನದ ಆವರಣದಲ್ಲಿ ಸ್ಥಾಪಿಸಲಾದ ಆಕರ್ಷಕ ಧ್ಯಾನಸ್ಥ ಗಾಂಧಿಜಿಯ ಕಂಚಿನ ಪುತ್ಥಳಿಯನ್ನು ಸಚಿವರು, ಶಾಸಕರು ಕಟ್ಟಡ ಉದ್ಘಾಟನೆಗೂ ಮೊದಲು ಅನಾವರಣಗೊಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರಾದ ಗುರುನಾಥ ಕಡಬೂರ ಅವರು, ಗಾಂಧಿ ಭವನದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಸಲು ಅನುಕೂಲವಾಗುವಂತೆ ಭವನದ ಆವರಣದಲ್ಲಿ ಬಯಲು ರಂಗಮಂದಿರ ಹಾಗೂ ಗ್ರಂಥಾಲಯ ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದರು.

ಸುಸಜ್ಜಿತ ಹಾಗೂ ಸುಂದರ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಶೇಖರಗೌಡ ಕುರಡಗಿ, ನಿರ್ಮಿತಿ ಕೇಂದ್ರದ ನಾಗರಾಜ ಪಾಟೀಲ ಅವರನ್ನು ಹಾಗೂ ಗಾಂಧೀಜಿ ಕಂಚಿನ ಪ್ರತಿಮೆ ರೂಪಿಸಿದ ಕೊಲ್ಲಾಪುರದ ಲಲಿತಾ ಡೊಂಗರಸಾನೆ ಅವರನ್ನು ವೇದಿಕೆಯಲ್ಲಿ ಸಚಿವರು, ಶಾಸಕರು ಸತ್ಕರಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಧಾರವಾಡ ಹಿರಿಯ ಸಹಾಯಕ ನಿರ್ದೇಶಕರಾದ ಮಂಜುನಾಥ್ ಡೊಳ್ಳಿನ, ವಾರ್ತಾ ಇಲಾಖೆ ಸಿಬ್ಬಂದಿ, ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಪೀರನವಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಸರ್ವಮಂಗಳ ಅರಳೀಕಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.


Gadi Kannadiga

Leave a Reply