ಖಾನಾಪುರ:ಬೀಡಿ ಗ್ರಾಮ ಪಂಚಾಯತಿಯಿಂದ ಸಂಗ್ರಹಿಸುವ ಕಸವನ್ನ ಬೀಡಿ-ಕಿತ್ತೂರು ಮುಖ್ಯ ರಸ್ತೆಯ ಪಕ್ಕದಲ್ಲೇ ಹಾಕುತ್ತಿರುವದರಿಂದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಶಾಲಾ ಮಕ್ಕಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಮ ಪಂಚಾಯತಿ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಕೇಂದ್ರ ಸರಕಾರ ಸ್ವಚ್ಛ ಭಾರತ ಯೋಜನೆಯಡಿ ಸಾಕಷ್ಟು ಅನುದಾನ ಒದಗಿಸಿ ಕಸ ಸಂಗ್ರಹಿಸಲು ಪ್ರತ್ಯೇಕ ವಾಹನದ ಜೊತೆ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಗ್ರಾಮಗಳನ್ನ ಸ್ವಚ್ಛವಾಗಿಡಲು ಪ್ರಯತ್ನಿಸುತ್ತಿದೆ ಆದರೆ ಬೀಡಿ ಗ್ರಾಮ ಪಂಚಾಯತಿ ಅಧಿಕಾರಿಗಳು ಮಾತ್ರ ಊರಿನ ಕಸ ಸಂಗ್ರಹಿಸಿ ಮುಖ್ಯ ರಸ್ತೆ ಪಕ್ಕ ಹಾಕಿ ಅದಕ್ಕೆ ಬೆಂಕಿ ಇಡುತ್ತಿದ್ದು ಅದರಿಂದ ಬರುವ ಹೊಗೆ ವಾಸನೆಗೆ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು,ಶಾಲಾ ಮಕ್ಕಳು ಮತ್ತು ರೈತರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಹೀಗೆ ಹಾಕಿದ ಕಸ ಕೊಳೆತು ದುರ್ನಾತ ಬೀರುತ್ತಿರುವ ಈ ತ್ಯಾಜ್ಯವು ಹಿಂದಿನ ವರ್ಷ ಮಳೆಯ ನೀರಿನೊಂದಿಗೆ ಬೆರೆತು ರಸ್ತೆಯಲ್ಲಿ ಎಲ್ಲೆಂದರಲ್ಲಿ ಹರಿಯುತ್ತಿದ್ದು ಇದೆ ತ್ಯಾಜ್ಯದ ಕಲುಷಿತ ನೀರು ಪಕ್ಕದಲ್ಲೇ ಇರುವ ಸಣ್ಣ ಕೆರೆಗೂ ಕೂಡ ಸೇರಿತ್ತು. ಇದರಿಂದ ಗ್ರಾಮದ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಎದುರಿಸುವಂತಾಗಿದೆ. ಗ್ರಾಮ ಪಂಚಾಯತಿಯಲ್ಲಿ ಸ್ವಚ್ಛತೆಯ ಬಗ್ಗೆ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದೇ ಇರುವುದರಿಂದ ಸ್ಥಳೀಯರು ಈ ತ್ಯಾಜ್ಯದಿಂದ ರಾಶಿಯಿಂದ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಕುರುವಳ್ಳಿ-ಹರಳಿಮಠ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಹೆಗ್ಗೆಬೈಲು ಸಮೀಪ ಬೀಟೆ ಮರದ ಹತ್ತಿರ ಮೂಟೆಗಟ್ಟಲೆ ರಾಶಿ ರಾಶಿ ತ್ಯಾಜ್ಯವು ರಸ್ತೆಯ ಮೇಲೆಲ್ಲಾ ಹರಿದಾಡುತ್ತಿದೆ.
ಬಾಕ್ಸ್:ಗ್ರಾಮಸ್ಥರ ಶಿಕ್ಷಣ ಮತ್ತು ಜಾಗೃತಿ ಮೂಲಕ ಜನರ ಸಹಭಾಗಿತ್ವದಲ್ಲಿ ಘನ ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಮಾಡಿ ತ್ಯಾಜ್ಯ ಮುಕ್ತ ಗ್ರಾಮಗಳ ನಿರ್ಮಾಣಕ್ಕೆ ಅಗತ್ಯ ಸಿದ್ಧತೆ ಮತ್ತು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು.ಸ್ವಚ್ಛ ಗ್ರಾಮಗಳ ನಿರ್ಮಾಣ ಮತ್ತು ನಿರಂತರ ನಿರ್ವಹಣೆ ನಮ್ಮೆಲ್ಲರ ಹೊಣೆ ಎಂಬ ಭಾವನೆಯನ್ನು ಗ್ರಾಮಸ್ಥರಲ್ಲಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಆಗಬೇಕಾಗಿದೆ.
ರುದ್ರಗೌಡ ಪಾಟೀಲ್ (ಜಿಲ್ಲಾದ್ಯಕ್ಷ ನೇಗಿಲಯೋಗಿ ರೈತ ಸುರಕ್ಷಾ ಸಂಘ)