ಕೊಪ್ಪಳ ಏಪ್ರಿಲ್ 22:- ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಗೆ ಈಗಾಗಲೇ ಆಗಮಿಸಿ ಕಾರ್ಯಪ್ರವೃತ್ತರಾಗಿರುವ ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರ ಸಮ್ಮುಖದಲ್ಲಿ, ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರ ಅಧ್ಯಕ್ಷತೆಯಲ್ಲಿ ಏಪ್ರೀಲ್ 21ರಂದು ವಿಶೇಷ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರಾದ ಯಲಬುರ್ಗಾ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಗಳ ವಿ.ಸಂಪತ್, ಕುಷ್ಟಗಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರಗಳ ಸ್ವಪ್ನಿಲ್ ಎಂ ನಾಯಕ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಭಾನಾ ಪ್ರಕಾಶ ಯಾತರಾ, ಚುನಾವಣಾ ವೆಚ್ಚ ವೀಕ್ಷಕರಾದ ಕುಷ್ಟಗಿ ಮತ್ತು ಕನಕಗಿರಿ ವಿಧಾನಸಭಾ ಕ್ಷೇತ್ರಗಳ ಜಿ.ವಿವೇಕಾನಂದ, ಯಲಬುರ್ಗಾ ಮತ್ತು ಕೊಪ್ಪಳ ವಿಧಾನಸಭಾ ಕ್ಷೇತ್ರಗಳ ಎಸ್.ಆರ್.ನೆಡುಮಾರನ್, ಗಂಗಾವತಿ ವಿಧಾನಸಭಾ ಕ್ಷೇತ್ರದ ಡಾ ಎ.ವೆಂಕಟೇಶ ಬಾಬಾ, ಅದೇ ರೀತಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೊಲೀಸ್ ವೀಕ್ಷಕರಾದ ಮನೋಜ್ ತಿವಾರಿ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ಸ್ವೀಪ್ ಕಾರ್ಯಕ್ರಮಗಳು, ಮತಗಟ್ಟೆಗಳು ಮತ್ತು ಮತ ಎಣಿಕಾ ಕೇಂದ್ರದ ಸಿದ್ಧತೆ, ವಿವಿಧ ತಂಡಗಳ ಕಾರ್ಯವೈಖರಿ, ಮಾದರಿ ನೀತಿ ಸಂಹಿತೆ ಅನುಷ್ಠಾನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಮಗ್ರ ಮಾಹಿತಿ ಪಡೆದರು.
ಮಾದರಿ ನೀತಿ ಸಂಹಿತೆ ಅನುಷ್ಠಾನ ಮತ್ತು ಇತರೆ ಕಾರ್ಯಗಳನ್ನು ಜಿಲ್ಲಾಡಳಿತವು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ ಎಂದು ಚುನಾವಣಾ ವೀಕ್ಷಕರುಗಳು ಪ್ರಶಂಶಿಸಿದರು. ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತರೀತಿಯಿಂದ ನಡೆಸಲು ಅಗತ್ಯ ಕ್ರಮವಹಿಸಿ ಯಶಸ್ವಿಗೊಳಿಸಲು ಸಲಹೆ ಮಾಡಿದರು.
ಕಳೆದ ಚುನಾವಣೆಗಳಲ್ಲಿ ಕಡಿಮೆ ಮತದಾನವಾದ ಮತಗಟ್ಟೆಗಳನ್ನು ಗುರುತಿಸಿ ಆ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನದ ಕುರಿತು ಅರಿವು ಮೂಡಿಸಲು ಕಾರ್ಯಕ್ರಮ ವೇಳಾಪಟ್ಟಿ ರೂಪಿಸಲಾಗಿದ್ದು, ವೇಳಾಪಟ್ಟಿಯಂತೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ರೀತಿ ನಗರ ಪ್ರದೇಶಗಳಲ್ಲಿ ಸಹ ಕಡಿಮೆ ಪ್ರಮಾಣದಲ್ಲಿ ಮತದಾನವಾದ ವಾರ್ಡಗಳಲ್ಲಿ ಮತದಾರರಲ್ಲಿ ಮತದಾನದ ಕುರಿತು ಆಸಕ್ತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳಲು ಕ್ರಮವಹಿಸುವುದಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸ್ವೀಪ್ ನೋಡಲ್ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ತಿಳಿಸಿದರು.
ಚುನಾವಣೆ ಘೋಷಣೆಯಾದ ನಂತರ ಮಾದರಿ ನೀತಿ ಸಂಹಿತೆ ತಂಡಗಳು, ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆಯಿಂದ ಉತ್ತಮ ರೀತಿಯಲ್ಲಿ ಕಾರ್ಯಾಚರಣೆ ನಡೆದಿದೆ. ಮಾರ್ಚ 29ರಿಂದ ಏಪ್ರಿಲ್ 21ರವರೆಗೆ 73,65,400 ರೂ.ನಗದು, 42,40,957.07 ರೂ. ಮೌಲ್ಯದ ಮದ್ಯೆ, 7,40,000 ರೂ.ಮೌಲ್ಯದ ಬಂಗಾರ, 1,36,500 ರೂ.ಮೌಲ್ಯದ 2.395 ಕೆ.ಜಿ ಮಾದಕ ದ್ರವ್ಯ, 13,61,100 ರೂ.ಮೌಲ್ಯದ ವಿವಿಧ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣೆ ಸಂಬಂಧ 24 ಎಫ್.ಐ.ಆರ್‌ಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಅವರು ಸಭೆಗೆ ತಿಳಿಸಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ವಿಕಲಚೇತನ ಮತದಾರರರು, ಕೋವಿಡ್-19 ಸೋಂಕಿತ ಮತದಾರರು ಮತ್ತು 80+ ವಯಸ್ಸಿನ ಮತದಾರರಿಗೆ ಹಾಗೂ ಅಗತ್ಯ ಸೇವೆಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಗೆ ಅಂಚೆ ಮತಪತ್ರದ ವ್ಯವಸ್ಥೆ ಕಲ್ಪಿಸಿದ್ದು, ಈವರೆಗೂ ಜಿಲ್ಲೆಯಲ್ಲಿ 6,269 ಮತದಾರರಿಂದ ಅಂಚೆ ಮತಪತ್ರ ಒದಗಿಸಲು ಅರ್ಜಿಗಳು ಸ್ವೀಕೃತವಾಗಿರುತ್ತವೆ ಎಂದು ಅಪರ ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಏಪ್ರೀಲ್ 10ರವರೆಗೆ ನೋಂದಣಿಗಾಗಿ ಸ್ವೀಕೃತಿಯಾದ ಅರ್ಜಿಗಳನ್ನು ನಿಯಮಾನುಸಾರ ವಿಲೇಗೊಳಿಸಿದ ನಂತರ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 5,66,381 ಪುರುಷರು, 5,70,407 ಮಹಿಳೆಯರು ಮತ್ತು 50 ಇತರೆ ಸೇರಿ ಒಟ್ಟು 11,36,838 ನೋಂದಾಯಿತ ಮತದಾರರಿದ್ದಾರೆ. ಮತದಾರರ ಪಟ್ಟಿಗಳ ಪರಿಷ್ಕರಣಾ ಅವಧಿಯಿಂದ ಏಪ್ರೀಲ್ 10ರವರೆಗೆ ನೋಂದಾಯಿತ ಮತದಾರರಿಗೆ ಹಾಗೂ ತಿದ್ದುಪಡಿ, ಸ್ಥಳಾಂತರ ಮತ್ತು ಮತದಾರರ ಗುರುತಿನ ಚೀಟಿ ನೀಡಲು ಅರ್ಜಿ ಸಲ್ಲಿಸಿದ 76,070 ಮತದಾರರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿ ನೀಡಲು ಕ್ರಮವಹಿಸಲಾಗಿದ್ದು, ಈಗಾಗಲೇ 68,363 ಮತದಾರರಿಗೆ ಶೀಘ್ರ ಅಂಚೆಯ ಮೂಲಕ ರವಾನಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಚುನಾವಣೆ ಸಂಬಂಧ ಎಲ್ಲಾ 1,322 ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ವ್ಯವಸ್ಥೆ, ವಿಕಲಚೇತನರಿಗೆ ರ‍್ಯಾಂಪ್ ವ್ಯವಸ್ಥೆ ಕಲ್ಪಿಸಲಾಗಿದೆ. ಕುಷ್ಟಗಿ ಕ್ಷೇತ್ರದಲ್ಲಿ ಸ್ವೀಕೃತಿಯಾದ 37 ನಾಮಪತ್ರಗಳ ಪೈಕಿ 34 ನಾಮಪತ್ರಗಳನ್ನು ಅಂಗೀಕರಿಸಲಾಗಿದ್ದು 3 ನಾಮಪತ್ರಗಳು ತಿರಸ್ಕೃತವಾಗಿವೆ. ಕನಕಗಿರಿ ಕ್ಷೇತ್ರದಲ್ಲಿ ಸ್ವೀಕೃತಿಯಾದ 32 ನಾಮಪತ್ರಗಳ ಪೈಕಿ 24 ನಾಮಪತ್ರಗಳನ್ನು ಅಂಗೀಕರಿಸಲಾಗಿದ್ದು 8 ನಾಮಪತ್ರಗಳು ತಿರಸ್ಕೃತವಾಗಿವೆ. ಗಂಗಾವತಿ ಕ್ಷೇತ್ರದಲ್ಲಿ ಸ್ವೀಕೃತಿಯಾದ 33 ನಾಮಪತ್ರಗಳ ಪೈಕಿ 31 ನಾಮಪತ್ರಗಳನ್ನು ಅಂಗೀಕರಿಸಲಾಗಿದ್ದು 2 ನಾಮಪತ್ರಗಳು ತಿರಸ್ಕೃತವಾಗಿವೆ. ಯಲಬುರ್ಗಾ ಕ್ಷೇತ್ರದಲ್ಲಿ ಸ್ವೀಕೃತಿಯಾದ 25 ನಾಮಪತ್ರಗಳ ಪೈಕಿ 23 ನಾಮಪತ್ರಗಳನ್ನು ಅಂಗೀಕರಿಸಲಾಗಿದ್ದು 2 ನಾಮಪತ್ರಗಳು ತಿರಸ್ಕೃತವಾಗಿವೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸ್ವೀಕೃತಿಯಾದ 22 ನಾಮಪತ್ರಗಳ ಪೈಕಿ 21 ನಾಮಪತ್ರಗಳು ಅಂಗೀಕರಿಸಲಾಗಿದ್ದು 1 ನಾಮಪತ್ರ ತಿರಸ್ಕೃತವಾಗಿದೆ ಎಂದು ಆಯಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ನಾಮಪತ್ರಗಳ ಪರಿಶೀಲನೆಯ ನಂತರದ ಮಾಹಿತಿಯನ್ನು ಸಭೆಗೆ ತಿಳಿಸಿದರು.
ಕೊಪ್ಪಳ ಜಿಲ್ಲೆಯಲ್ಲಿ ಸಿ-ವಿಜಿಲ್ ಆಪ್ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ಐದು ವಿಧಾನಸಭಾ ಕ್ಷೇತ್ರಗಳಲ್ಲಿ 108 ದೂರುಗಳು ಸ್ವೀಕೃತವಾಗಿದ್ದು ಎಲ್ಲವನ್ನು ವಿಲೇವಾರಿ ಮಾಡಲಾಗಿದೆ ಎಂದು ಸಿ-ವಿಜಿಲ್ ನೋಡಲ್ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಮಾತನಾಡಿ, ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯಕ್ರಮಗಳು, ರ‍್ಯಾಲಿ ಮತ್ತು ಇತರೆ ಕಾರ್ಯಕ್ರಮಗಳ ಮೇಲೆ ನಿಗಾವಹಿಸಲು ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಗತ್ಯ ಕ್ರಮವಹಿಸಲು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಸೂಚಿಸಿದರು. ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ನಿಗದಿತ ಅವಧಿಯೊಳಗಡೆ ನಿಯಮಾನುಸಾರ ಪರಿಶೀಲಿಸಿ, ಅನುಮತಿ ನೀಡಲು ಕ್ರಮಕೈಗೊಳ್ಳಲು ಚುನಾವಣಾಧಿಕಾರಿಗಳಿಗೆ ಸೂಚಿಸಿದರು. ಮಾದರಿ ನೀತಿ ಸಂಹಿತೆ ತಂಡಗಳಾದ ಫ್ಲೈಯಿಂಗ್ ಸ್ಕ್ವಾಡ್ ತಂಡಗಳು ಚೆಕ್‌ಪೋಸ್ಟ್ಗಳನ್ನು ಚುರುಕುಗೊಳಿಸಲು ಮತ್ತು ಹಣ, ಮದ್ಯೆ ಮತ್ತು ಮತದಾರರಿಗೆ ಆಮಿಷ ಒಡ್ಡುವಂತಹ ಸಾಮಗ್ರಿಗಳ ಸಾಗಣೆ ಹಾಗೂ ಹಂಚಿಕೆ ಮೇಲೆ ನಿಗಾವಹಿಸಲು ಸೂಚಿಸಿದರು. ಸಭೆಯಲ್ಲಿ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಮತ್ತು ಇನ್ನೀತರರು ಇದ್ದರು.
Gadi Kannadiga > State > ಸಾಮಾನ್ಯ, ವೆಚ್ಚ, ಪೊಲೀಸ್ ವೀಕ್ಷಕರ ಸಮ್ಮುಖದಲ್ಲಿ ವಿಶೇಷ ಸಭೆ — ವಿಧಾನಸಭಾ ಚುನಾವಣೆ: ಜಿಲ್ಲಾಡಳಿತದ ಕಾರ್ಯವೈಖರಿಗೆ ಪ್ರಶಂಸೆ
ಸಾಮಾನ್ಯ, ವೆಚ್ಚ, ಪೊಲೀಸ್ ವೀಕ್ಷಕರ ಸಮ್ಮುಖದಲ್ಲಿ ವಿಶೇಷ ಸಭೆ — ವಿಧಾನಸಭಾ ಚುನಾವಣೆ: ಜಿಲ್ಲಾಡಳಿತದ ಕಾರ್ಯವೈಖರಿಗೆ ಪ್ರಶಂಸೆ
sharanappa22/04/2023
posted on

More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023