ಖಾನಾಪೂರ: ವಿಶೇಷ ಚೇತನರಿಗೆ ಮನರೇಗಾ ಯೋಜನೆಯಡಿ ತಮ್ಮ ಗ್ರಾಮದಲ್ಲೇ ಕೂಲಿ ಕೆಲಸ ಪಡೆಯಲು ಅವಕಾಶವಿದ್ದು, ಎಲ್ಲರೂ ಇದರ ಸದುಪಯೋಗ ಪಡೆಯಬೇಕು ಎಂದು ಎಂಆರ್ ಡಬ್ಲ್ಯೂ (ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತೆ) ಸಮೀನಾ ಖಾನಾಪುರೆ ಹೇಳಿದರು.
ಇಲ್ಲಿನ ತಾಲೂಕ ಪಂಚಾಯತ ಸಭಾಭವನದಲ್ಲಿ ಮಂಗಳವಾರ ನರೇಗಾ ಯೋಜನೆಯಡಿ ವಿಶೇಷ ಚೇತನರ ಪಾಲ್ಗೊಳ್ಳುವಿಕೆ ಕುರಿತು ತಾಲೂಕಿನ ವಿಆರ್ ಡಬ್ಲ್ಯೂ (ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು) ಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶೇ.40 ರಷ್ಟು ವಿಕಲತೆ ಹೊಂದಿರುವ ವಿಶೇಷ ಚೇತನರು ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಕೆಲಸ ಮಾಡಬಹುದಾಗಿದ್ದು, ಕೆಲಸದಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು ಎಂದರು.
ತಾಲೂಕಾ ಐಇಸಿ ಸಂಯೋಜಕರಾದ ಮಹಾಂತೇಶ ಜಾಂಗಟಿ ಮಾತನಾಡಿ, ನರೇಗಾ ಕಾಮಗಾರಿ ಸ್ಥಳದಲ್ಲಿ ವಿಶೇಷ ಚೇತನರು ಕೂಲಿಕಾರರಿಗೆ ಕುಡಿಯುವ ನೀರು ತಂದುಕೊಡುವುದು, ಕೂಲಿಕಾರರ ಮಕ್ಕಳನ್ನು ನೋಡಿಕೊಳ್ಳುವುದು, ಸಸಿಗಳಿಗೆ ನೀರು ಹಾಕುವುದು, ಕಟ್ಟಡಗಳಿಗೆ ನೀರು ಹೊಡೆಯುವುದು ಸೇರಿದಂತೆ ಇನ್ನಿತರೇ ಸಾಧ್ಯವಾಗುವಂತ ಕೆಲಸಗಳನ್ನು ಮಾತ್ರ ಮಾಡಬಹುದಾಗಿದೆ. ಹೀಗಾಗಿ, ವಿಶೇಷ ಚೇತನರು ಯೋಜನೆಯಡಿ ಕೆಲಸ ಪಡೆದುಕೊಂಡು, ಆರ್ಥಿಕವಾಗಿ ಏಳ್ಗೆ ಹೊಂದಬೇಕು ಎಂದು ತಿಳಿಸಿದರು.
ವಿಶೇಷ ಚೇತನರಿಗೂ ಸಹ ಸಮಾನ ಕೂಲಿ ನೀಡಲಾಗುತ್ತಿದ್ದು, ಏ.1 ರಿಂದ ಕೂಲಿ ಮೊತ್ತವನ್ನು ಕೂಡ ಹೆಚ್ಚಿಸಲಾಗಿದೆ. ಸಧ್ಯ ಪ್ರತಿದಿನಕ್ಕೆ 309 ರೂ. ಕೂಲಿ ನೀಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ತಮ್ಮ ಗ್ರಾಪಂ ವ್ಯಾಪ್ತಿಯಲ್ಲೇ ನಿರಂತರವಾಗಿ ಕೆಲಸ ನೀಡಲಾಗುತ್ತಿದ್ದು, ಎಲ್ಲರೂ ಇದರ ಪ್ರಯೋಜನ ಪಡೆಯಬೇಕೆಂದು ಹೇಳಿದರು.
ಜಾಬ್ ಕಾರ್ಡ್ ಪಡೆಯುವುದು, ಕೂಲಿ ಬೇಡಿಕೆ ಸಲ್ಲಿಸುವುದು, ನರೇಗಾ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳು, ಇ-ಶ್ರಮ್ ಹಾಗೂ ಆಯುಷ್ಮಾನ್ ಕಾರ್ಡ್ ಪಡೆದುಕೊಳ್ಳುವುದು ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಕೂಡ ಮಾಹಿತಿ ನೀಡಲಾಯಿತು.ತಾಲೂಕಿನ ಎಲ್ಲ ವಿಆರ್ ಡಬ್ಲ್ಯೂ ಗಳು ಹಾಜರಿದ್ದರು.