ಕೊಪ್ಪಳ ಜುಲೈ ೦೩ : ಕೊಪ್ಪಳ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಜುಲೈ ೦೩ರಂದು ನಗರದ ಸಾಹಿತ್ಯ ಭವನದಲ್ಲಿ ನಡೆಯಿತು.
ಉಪನಿಭಾಗಾಧಿಕಾರಿಗಳಾದ ಬಸವಣ್ಣಪ್ಪ ಕಲಶೆಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಬಸವಣ್ಣನವರ ನೇತೃತ್ವದ ಕಲ್ಯಾಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು. ಅಪ್ಪಣ್ಣನವರ ಜೀವನ, ತತ್ವಸಿದ್ಧಾಂತಗಳನ್ನು ಎಲ್ಲರಿಗೂ ತಿಳಿಸಲು ಜಯಂತಿ ಆಚರಣೆ ಮಾಡಲಾಗುತ್ತಿದೆ. ಶರಣರ ವಚನಗಳನ್ನು ಆದರ್ಶವಾಗಿಟ್ಟುಕೊಂಡು ಬದುಕು ರೂಪಿಸಿಕೊಳ್ಳಬೇಕು. ಅಪ್ಪಣ್ಣನವರು ನಡೆದು ಬಂದ ದಾರಿಯಲ್ಲಿ ಸಾಗಿದರೆ ಜೀವನ ಯಶಸ್ಸು ಜೊತೆಗೆ ಅವರ ಜಂಯತಿ ಕಾರ್ಯಕ್ರಮಕ್ಕೂ ಅರ್ಥ ಬರುತ್ತದೆ ಎಂದರು.
ನಗರಸಭೆ ಅಧ್ಯಕ್ಷರಾದ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಅವರು ಮಾತನಾಡಿ, ಹಡಪದ ಅಪ್ಪಣ್ಣನವರು ಸಾರ್ಥಕ ಬದುಕನ್ನು ನಡೆಸಿದವರು. ಇಂತಹ ಶರಣರ ಕಾಯಕ ಧರ್ಮವನ್ನು ಆದರ್ಶವಾಗಿಟ್ಟುಕೊಂಡು, ಸನ್ಮಾರ್ಗದಲ್ಲಿ ನಾವು ನಡೆಯಬೇಕು. ಇಂದಿನ ದಿನಗಳಲ್ಲಿ ಕುಲಕಸುಬಿನೊಂದಿಗೆ ಶಿಕ್ಷಣವೂ ಅತ್ಯವಶ್ಯಕವಾಗಿದೆ. ಶಿಕ್ಷಣಕ್ಕಾಗಿ ಸರ್ಕಾರವು ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಭಾಗ್ಯಜೋತಿ ಅವರು ಹಡಪದ ಅಪ್ಪಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿ, ವಚನ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನಮಾನವಿದೆ. ವಚನ ಸಾಹಿತ್ಯಕ್ಕೆ ಶಿವಶರಣರ ಕೊಡುಗೆ ಅಪಾರವಾಗಿದೆ. ಶರಣರು ತಮ್ಮ ಕಾಯಕದ ಜೊತೆಗೆ ವಚನಗಳ ಮೂಲಕ ಸಾಮಾಜ ಸುಧಾರಣೆಗೆ ಶ್ರಮೀಸಿದ್ದಾರೆ. ಇಂತಹ ಮಹನೀಯರಲ್ಲಿ ಅಪ್ಪಣ್ಣನವರು ಒಬ್ಬ ಸೇವಾಯೋಗಿ, ಕಾಯಕ ಶರಣರಾಗಿದ್ದಾರೆ. ಹಡಪದ ಅಪ್ಪಣ್ಣನವರ ಬಗ್ಗೆ ಮಾಹಿತಿ ಹುಡುಕುವುದಾದರೆ, ಅವರು ಚನ್ನವೀರ ಮತ್ತು ದೇವಕ್ಕ ಎಂಬ ದಂಪತಿಗಳಿಗೆ ೧೧೩೪ರಲ್ಲಿ ವಿಜಯಪು ಜಿಲ್ಲೆಯ ಮಸಬಿನಾಳ ಗ್ರಾಮದಲ್ಲಿ ಜನಿಸಿದರು ಹಾಗೂ ಸುಮಾರು ೨೫೬ ವಚನಗಳನ್ನು ರಚಿಸಿದ್ದರು ಎಂದು ತಿಳಿದು ಬರುತ್ತದೆ. ತಮ್ಮದೇ ಆದ ಆದರ್ಶಗಳೊಂದಿಗೆ ಅನುಭವಮಂಟಪ ಮಹಾ ಮನೆಯ ಸದಸ್ಯರಾಗಿದ್ದ ಅಪ್ಪಣ್ಣನವರು, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದರು. ಹಡಪದ ಅಪ್ಪಣ್ಣನವರು ಭಕ್ತಿ ದಾಸೋಹ, ಕಾಯಕ ತತ್ವವನ್ನು ಪಾಲಿಸಿ ಬಸವಣ್ಣನವರ ಅನುಯಾಯಿಯಾಗಿ ಶರಣ ತತ್ವದಲ್ಲಿ ಬದುಕಿ ಆತ್ಮಾಭಿಮಾನದ ಸಂಕೇತರಾಗಿದ್ದಾರೆ ಎಂದು ಹೇಳಿದರು.
ಹಡಪದ ಸಮಾಜದ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ ಹಂದ್ರಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕೊಟ್ರೇಶ ಮರಬನಳ್ಳಿ, ಗಣ್ಯರಾದ ನಿರ್ಮಲಾ ಬಳ್ಳೊಳ್ಳಿ, ಸಾವಿತ್ರಿ ಮುಜುಮದಾರ, ಜಿ.ಎಸ್.ಗೋನಾಳ, ಕೋಮಲಾ, ಸಮಾಜದ ಮುಖಂಡರಾದ ಬಸಪ್ಪ ಹಲಗೇರಿ, ಶರಣಪ್ಪ ಹಡಪದ, ನಿಂಗಪ್ಪ ಹಂದ್ರಾಳ, ರಮೇಶ, ಮಾರ್ಕಂಡೆಪ್ಪ, ಗವಿಸಿದ್ದಪ್ಪ ಗುಡದಳ್ಳಿ, ಕಲ್ಲೇಶ, ಎಸ್.ಎಸ್ ಮಂಜುನಾಥ, ಮಂಗಳಪ್ಪ, ಶರಣಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಸನ್ಮಾನ: ಕಾರ್ಯಕ್ರಮದಲ್ಲಿ ಪ್ರಸಕ್ತ ಎಸ್ಸೆಸ್ಸೆಲ್ಸಿ ಪರಿಕ್ಷೇಯಲ್ಲಿ ಉತ್ತಮ ಅಂಕಪಡೆದ ವಿದ್ಯಾರ್ಥಿಗಳಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನಾ ಹಡಪದ ಅಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ಕೋಟೆ ರಸ್ತೆಯ ಅಕ್ಕಮಹಾದೇವಿ ದೇವಸ್ಥಾನದಿಂದ ಪ್ರಾರಂಭಗೊಂಡು, ಗಡಿಯಾರ ಕಂಬದ ಮಾರ್ಗವಾಗಿ ಜವಾಹರ ರಸ್ತೆ ಮೂಲಕ ಸಾಹಿತ್ಯ ಭವನದವರೆಗೆ ಅದ್ದೂರಿಯಾಗಿ ಜರುಗಿತು.
Gadi Kannadiga > State > ಕಲ್ಯಾಣ ಕ್ರಾಂತಿಗೆ ಶ್ರಮೀಸಿದ ಪ್ರಮುಖರು ಹಡಪದ ಅಪ್ಪಣ್ಣ
ಕಲ್ಯಾಣ ಕ್ರಾಂತಿಗೆ ಶ್ರಮೀಸಿದ ಪ್ರಮುಖರು ಹಡಪದ ಅಪ್ಪಣ್ಣ
Suresh03/07/2023
posted on

More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023