ಬೆಳಗಾವಿ: ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆಯು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ, ಹಿಂದುಳಿದವರ, ನಿರ್ಗತಿಕರ ಹಾಗೂ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ಹಿಂಡಲಗಾ ವಿಠ್ಠಲ ಮಂದಿರ ಹತ್ತಿರ, ಬಾಜಿ ಪ್ರಭು ದೇಶಪಾಂಡೆ ಚೌಕ್ ನ ಜಿಲ್ಲಾ ಕಚೇರಿಯಲ್ಲಿ ಶನಿವಾರ(ಏಪ್ರಿಲ್ 2) ರಂದು ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೂತನವಾಗಿ ಸ್ಥಾಪನೆಯಾದ ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆಯು ಮಾನವ ಹಕ್ಕಗಳ ರಕ್ಷಕನಾಗಿ ಕಾರ್ಯನಿರ್ವಹಿಸಬೇಕು. ಮಾನವ ಹಕ್ಕುಗಳ ಉಲಂಘನೆಯನ್ನು ತಡೆಯಲು ಮುಂದಿರಬೇಕು ಎಂದು ಜಾರಕಿಹೊಳಿ ಅವರು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಸಿದ್ದಾರೂಡ ಮಠದ ಪೀಠಾಧಿಪತಿಗಳಾದ ಶಿವಪುತ್ರ ಮಹಾಸ್ವಾಮಿಗಳು ಮಾತನಾಡಿ ಸಂಸ್ಥೆಯ ಬಗ್ಗೆ ತಿಳಿವಳಿಕೆ ನೀಡುವುದರೊಂದಿಗೆ, ಆಶೀರ್ವಾದ ನೀಡಿದರು.
ಕಾರ್ಯಕ್ರಮದಲ್ಲಿ ವಡಗಾಂವ ಗ್ರಾಮೀಣ ಪೊಲೀಸ್ ಠಾಣೆಯ ಸಿ.ಪಿ.ಐ ಸುನೀಲಕುಮಾರ ನಂದೇಶ್ವರ, ಹಿಂಡಲಗಾ ಕಾರಾಗೃಹದ ಮುಖ್ಯ ಅಧಿಕ್ಷಕರಾದ ಕೃಷ್ಣಕುಮಾರ, ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಗೋಕಾಕ ವಿಶ್ರಾಂತಿ ಕೃಷಿ ಅಧಿಕಾರಿಗಳಾದ ಶಂಕರಗೌಡ ಬಿ. ಪಾಟೀಲ, ಅಖಿಲ ಭಾರತ ಮಾನವ ಹಕ್ಕುಗಳ ಸಲಹೆಗಾರರು ಹಾಗೂ ಜಿಲ್ಲಾ ನ್ಯಾಯವಾದಿಗಳಾದ ಚಿದಾನಂದ ನಾಯಕ, ಬೆಂಗಳೂರಿನ ಅಖಿಲ ಭಾರತ ಮಾನವ ಹಕ್ಕುಗಳ ಸಂಸ್ಥೆಯ ರಾಜ್ಯ ಕಾರ್ಯದರ್ಶಿಗಳಾದ ಸದಾನಂದ ಎಮ್. ಪಾಟೀಲ ಮತ್ತು ಸಂಘಟಕರಾದ ರಾಜೇಂದ್ರ ಬಿ. ಪಾಟೀಲ ಅವರು ಉಪಸ್ಥಿತರಿದ್ದರು.