ಕುಷ್ಟಗಿ: ಸುಮಾರು ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದೋಟಿಹಾಳ ಹಾಗೂ ಕೇಸೂರು ಮಧ್ಯದ ಮುಖ್ಯ ರಸ್ತೆಯನ್ನು ದುರಸ್ಥಿಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಹೈದರಾಬಾದ್ ಕರ್ನಾಟಕ ಯುವಶಕ್ತಿ (ರಿ),ಕುಷ್ಟಗಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ ಅವರು ಆಕ್ರೋಶವನ್ನು ಹೊರಹಾಕಿದರು.
ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಮೂರು ಅಂಶಗಳ ಹಕ್ಕೋತ್ತಾಗಳನ್ನು ಈಡೇರಿಸುವಂತೆ, ಹೈದರಾಬಾದ್-ಕರ್ನಾಟಕ ಯುವಶಕ್ತಿ ಹಾಗೂ ಕೃಷಿಕ ಸಮಾಜ,ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ
ಸೇರಿದಂತೆ ಪ್ರಗತಿ ಪರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು
ದೋಟಿಹಾಳ ಗ್ರಾಮವು ತಾಲೂಕಿನಲ್ಲೇ ಅಭಿವೃದ್ಧಿ ಹೊಂದುತ್ತಿರುವ ಗ್ರಾಮವಾಗಿದ್ದು ಈ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಅನೇಕ ತೊಂದರೆಗಳು ಕಾಡುತ್ತಿದ್ದೂ ಅದರಲ್ಲಿ ದೋಟಿಹಾಳ ಹಾಗೂ ಕೇಸೂರು ನಡುವೆ ರಸ್ತೆಯ ಕಾಮಗಾರಿ ಅರ್ಧಕೆ ನಿಂತು ಸಂಚಾರಕ್ಕೆ ತೊಂದರೆ ಆಗಿದೆ, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಬೇಕು, ಹಾಗೂ ದೋಟಿಹಾಳ ಗ್ರಾಮವನ್ನು ಹೋಬಳಿ ಎಂದು ಘೋಷಣೆ ಮಾಡಲು ಸರಕಾರ ಹಾಗೂ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ ಆದ ಕಾರಣ ಈ ಮೂರು ಬೇಡಿಕೆಗಳನ್ನು ಈಡೇರಿಸುವ ತನಕ ಪ್ರತಿಭಟನೆ ಹಿಂದಕ್ಕೆ ತೆಗೆದುಕೊಳ್ಳುವ ಮಾತು ಇಲ್ಲ ಎಂದರು.
*ವಿನೂತನ ಜನ ಜಾಗೃತಿ ಜಾಥಾ* : ತಾಲೂಕಿನ ದೋಟಿಹಾಳ ಗ್ರಾಮದಲ್ಲಿನ ಮೂರು ಬೇಡಿಕೆಗಳನ್ನು ಈಡೇರಿಸಲು ಗೋತಗಿ ಗ್ರಾಮದಲ್ಲಿನ ಮಾಜಿ ಶಾಸಕ ದಿ. ಕಾಂತರಾವ್ ದೇಸಾಯಿ ಅವರ ಮನೆಯಿಂದ ದೋಟಿಹಾಳದ ಅವಧೂತ ಶುಖಮುನಿ ಸ್ವಾಮಿ ದೇವಸ್ಥಾನದವರೆಗೂ ಸುಮಾರು ಹತ್ತು ಕಿಲೋಮೀಟರ್ ಪಾದಯಾತ್ರೆಯನ್ನು ಮಾಡಿಕೊಂಡು ಬಂದು ವಿಶೇಷ ಪೂಜೆಯನ್ನು ನೆರವೇರಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಪ್ರತಿಭಟನೆಯನ್ನು ಮಾಡಲು ಮುಂದಾಗಿದ್ದಾರೆ.
*ಮುಂದುವರೆದ ಪ್ರತಿಭಟನೆ* : ಮೊದಲನೇ ದಿನದ ಪ್ರತಿಭಟನೆಯ ಸಾಯಂಕಾಲ ಅವಧಿವರೆಗೂ ಯಾವುದೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡದ ಹಿನ್ನಲೆಯಲ್ಲಿ ಪ್ರತಿಭಟನೆ ಮುಂದುವರಿದಿದೆ.
*ಶಾಸಕರು ಮನಸ್ಸು ಮಾಡಬೇಕು* : ಕುಷ್ಟಗಿ ವಿಧಾನಸಭಾ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ ಭಯ್ಯಾಪುರು ಅವರು ನಮ್ಮ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳ ಅಭಿವೃದ್ಧಿಯ ಬಗ್ಗೆ ಗಮನ ಕೊಟ್ಟು ಕೆಲಸ ಮಾಡಬೇಕು ಹಾಗೂ ದೋಟಿಹಾಳ ಹೋಬಳಿ ಕೇಂದ್ರಕ್ಕಾಗಿ ವರದಿಯು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಡಿಸಿ ಅವರು ಕಳುಹಿಸಲಾಗಿದ್ದು ಅದನ್ನು ಸರಕಾರ ಮಟ್ಟದಲ್ಲಿ ಹೋರಾಟ ಮಾಡಿ ನಮ್ಮ ಗ್ರಾಮದ ಅಭಿವೃದ್ಧಿಯತ್ತ ಗಮನ ನೀಡಬೇಕು ಎಂದು ಒತ್ತಾಯ ಮಾಡಿದರು.
ಈ ಸಂದರ್ಭದಲ್ಲಿ ಹೈ-ಕ ಯುವಶಕ್ತಿ ಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕಿರಣ ಜ್ಯೋತಿ, ಸಂಚಾಲಕ ಪರಶುರಾಮ ಬೋದೂರ, ದೋಟಿಹಾಳ ಹೋಬಳಿ ಘಟಕದ ಅಧ್ಯಕ್ಷ ಪರಶುರಾಮ ಈಳಗೇರ, ಕೃಷಿಕ ಸಮಾಜ ನವದೆಹಲಿಯ ಜಿಲ್ಲಾಧ್ಯಕ್ಷ ಪ್ರಕಾಶ ಪಟ್ಟೇದ, ಬಸವರಾಜ ಕಡಿವಾಲ, ನಾಗನಗೌಡ ಗೌಡ್ರ, ಮಹೇಬೂಬ ನಡುಲಮನಿ, ಹನಮಗೌಡ ಗೌಡ್ರ, ವೆಂಕಟೇಶ ರಾಠೋಡ, ಮಂಜೂರ್ ಅಲಿ ಬನ್ನು, ಕೇಸೂರು ಗ್ರಾ.ಪಂ ಸದಸ್ಯ ಉಮೇಶ ಮಡಿವಾಳ, ಬಸವರಾಜ ಶೆಟ್ಟರ, ಕಲ್ಲಯ್ಯ ಸರಗಣಾಚಾರ ಸೇರಿದಂತೆ ಸಾರ್ವಜನಿಕ ಪ್ರಯಾಣಿಸುವ ವಾಹನಗಳ ಮಾಲಕರು ಮತ್ತು ಚಾಲಕರು ಬೆಂಬಲ ವ್ಯಕ್ತಪಡಿಸಿದರು.