ಜಿಲ್ಲಾ ಮಟ್ಟದ ಪಿ.ಸಿ & ಪಿ.ಎನ್.ಡಿ.ಟಿ ಕಾರ್ಯಗಾರ
ಭ್ರೂಣ ಪತ್ತೆ ಮಾಡಿದರೆ ಕಠಿಣ ಶಿಕ್ಷೆ: ನ್ಯಾ. ಬಿ.ಎಸ್ ರೇಖಾ
ಕೊಪ್ಪಳ ಮಾರ್ಚ್ 27:-ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಎಸ್ ಪವಾರ್ ಹೋಟೆಲ್ ಸಭಾಂಗಣದಲ್ಲಿ ಮಾರ್ಚ್ 23 ರಂದು ಜಿಲ್ಲಾ ಮಟ್ಟದ ಪಿ.ಸಿ & ಪಿ.ಎನ್.ಡಿ.ಟಿ ಕಾರ್ಯಗಾರ ನಡೆಯಿತು.
ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್ ರೇಖಾ ಅವರು ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಗಾರಕ್ಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಭಾರತದಲ್ಲಿ ಇತ್ತಿಚಿಗೆ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣ ಗಂಡು ಮಗುವಿನ ಅಂಬಲ, ವಂಶೋದ್ದಾರಕ, ಹೆಣ್ಣು ಮಕ್ಕಳ ಬಗ್ಗೆ ನಿರ್ಲಕ್ಷತನ, ಪುರುಷ ಪ್ರಧಾನ ಕುಟುಂಬ ಹಾಗೂ ತಂತ್ರಜ್ಞಾನ ಬೆಳವಣಿಗೆಯಿಂದ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತಲ್ಲಿವೆ. ಇದೆ ರೀತಿ ಮುಂದುವರೆದರೆ ಮುಂದೆ ಸಮಸ್ಯೆ ಹೆದರಿಸಬೇಕಾಗುತ್ತದೆ. ಹೆಣ್ಣು ಭ್ರೂಣ ಪತ್ತೆ ಮಾಡಿದವರಿಗೆ ಮೊದಲಿನ ಅಪರಾಧಕ್ಕೆ 3 ವರ್ಷ ಜೈಲು ಶಿಕ್ಷೆ ಹಾಗೂ ರೂ. 10,000 ದಂಡ, ಎರಡನೇ ಅಪರಾಧಕ್ಕೆ 05 ವರ್ಷ ಜೈಲು ಶಿಕ್ಷೆ ಹಾಗೂ ರೂ. 50,000 ದಂಡ, ಅಪರಾಧ ದೃಢಪಟ್ಟರೆ ಮೊದಲನೇ ಅಪರಾಧಕ್ಕೆ ಐದು ವರ್ಷಗಳವರೆಗೆ ವೈದ್ಯಕೀಯ ವೃತ್ತಿ ಮಾಡದಂತೆ ಮತ್ತು ನಂತರ ಅಪರಾದಕ್ಕೆ ಶಾಶ್ವತವಾಗಿ ವೈದ್ಯಕೀಯ ಮಂಡಳಿಯಿಂದ ಅವರ ಹೆಸರನ್ನು ತೆಗೆದುಹಾಕಲು ಅವಕಾಶವಿರುತ್ತದೆ ಎಂದು ಹೇಳಿದರು.
ನಂತರ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾದೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಮಾತನಾಡಿ, ವಿಶ್ವದಲ್ಲಿ ಜನಸಂಖ್ಯೆಯು ಅತೀ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಅಜ್ಞಾನ, ಮೂಡನಂಬಿಕೆ, ಅನಕ್ಷರತೆ, ಬಾಲ್ಯವಿವಾಹ, ಜನನಗಳ ನಡುವೆ ಅಂತರವಿಲ್ಲದಿರುವುದು. ಮಾಹಿತಿ ಕೊರತೆ, ಗಂಡು ಮಗು ಬೇಕೇಂಬ ಹಂಬಲ, ಇವು ಎಲ್ಲ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಕೊಪ್ಪಳ ಜಿಲ್ಲೆಯ ಲಿಂಗಾನುಪಾತದ ಅಂಕಿ ಅಂಶ 2021ನೇ ಇಸವಿಯಲ್ಲಿ 1000 ಪುರುಷರಿಗೆ 986 ಮಹಿಳೆಯರು, 2020-21ರಲ್ಲಿ ಜನಿಸಿದ ಮಕ್ಕಳ ಲಿಂಗಾನುಪಾತ 941 ಇರುತ್ತದೆ. ಸರ್ಕಾರ ನಿಗದಿ ಪಡಿಸಿದ ವಯಸ್ಸಿಗೆ ಪಾಲಕರು ಮದುವೆ ಮಾಡಬೇಕು. ತಮ್ಮ ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿಸಲು ಅವರಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಹೆಣ್ಣು ಮಕ್ಕಳನ್ನು ರಕ್ಷಿಸಬೇಕು. ಭಾರತದ ಸಂವಿಧಾನದ ಬಗ್ಗೆ ಪ್ರತಿಯೊಬ್ಬ ಯುವಕರು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಅರಿವು ಇರಬೇಕು. ಬಾಲ್ಯವಿವಾಹ ಮಾಡಿದರೆ ಕಾನೂನಿನ ಪ್ರಕಾರ ಜೈಲುಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಯಾರು ಬಾಲ್ಯವಿವಾಹ ಮಾಡಿಕೊಳ್ಳಬಾರದು. ಇಂದಿನ ವಿದ್ಯಾರ್ಥಿಗಳು ನಾಳಿನ ಭಾವಿ ಪ್ರಜೆಗಳು. ಈ ದೇಶವನ್ನು ಮುನ್ನಡೆಸುವವರು. ಜನಸಂಖ್ಯೆ ಸ್ಥಿರತೆಗಾಗಿ ಎಲ್ಲರೂ ಜಾಗೃತರಾಗಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಡಿ ಮಳಗಿ ಅವರು, ಹೆಣ್ಣು ಮಕ್ಕಳ ರಕ್ಷಣೆ ಮತ್ತು ಆರೋಗ್ಯ ಇಲಾಖೆಯಿಂದ ಸಿಗುವ ಸೇವಾ ಸೌಲಭ್ಯಗಳ ಕುರಿತು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರವೀಂದ್ರನಾಥ್ ಎಂ.ಹೆಚ್., ಜಿಲ್ಲಾ ಮಟ್ಟದ ಎಲ್ಲಾ ಕಾರ್ಯಕ್ರಮ ಅನುಷ್ಠನಾಧಿಕಾರಿಗಳಾದ ಡಾ.ನಂದಕುಮಾರ, ಡಾ.ವೆಂಕಟೇಶ, ಡಾ.|ಶಶಿಧರ, ಡಾ.ರಮೇಶ ಮೂಲಿಮನಿ, ಎಲ್ಲಾ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ರಾಮಾಂಜನೇಯ, ಡಾ.ಆನಂದ, ಡಾ.ಶರಣಪ್ಪ, ಡಾ.ಸುಮಾ, ರೆಡಿಯಾಲೋಜಿಸ್ಟ್ ಡಾ.ದಯಾನಂದ, ಖಾಸಗಿ ಆಸ್ಪತ್ರೆ ತಜ್ಞವೈದ್ಯರುಗಳಾದ ಡಾ.ಜಂಬುನಾಥಗೌಡ, ಡಾ.ಚಂದ್ರಕಲಾ ಮತ್ತು ವಿವಿಧ ಆಸ್ಪತ್ರೆಯ ತಜ್ಞವೈದ್ಯರು, ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ