This is the title of the web page
This is the title of the web page

Please assign a menu to the primary menu location under menu

State

ರೈತನ ಮಗ ರೈತನಾಗಲು ಹಿಂಜರಿಯುವ ದೇಶದಲ್ಲಿ…


ಮೊನ್ನೆ ನಟ ಅನಂತ್‌ನಾಗ್‌ ಮಾತಾಡುತ್ತಾ ಗಂಭೀರವಾದ ಪ್ರಶ್ನೆಯೊಂದನ್ನು ಮುಂದಿಟ್ಟರು. ನಮ್ಮ ದೇಶದಲ್ಲಿ ಮಂತ್ರಿಗಳ ಮಕ್ಕಳು ಮಂತ್ರಿಗಳೇ ಆಗಲು ಬಯಸುತ್ತಾರೆ. ನಟರ ಮಕ್ಕಳು ನಟರಾಗಲು ಇಚ್ಚಿಸುತ್ತಾರೆ. ಉದ್ಯಮಿಗಳ ಮಕ್ಕಳು ಉದ್ಯಮಿಗಳಾಗುತ್ತಾರೆ. ಆದರೆ ರೈತರ ಮಕ್ಕಳು ರೈತರಾಗೋದಕ್ಕೆ ಹಿಂಜರಿಯುತ್ತಿದ್ದಾರೆ. ನಾನು ರೈತನಾಗಲಾರೆ ಅಂತ ಹೇಳುತ್ತಿದ್ದಾರೆ. ರೈತರ ಸಮಸ್ಯೆಗಳು, ತಾಪತ್ರಯಗಳು, ಒಂದರ ಹಿಂದೊಂದರಂತೆ ಎದುರಾಗುವ ತೊಂದರೆಗಳು, ಕೈಗೆ ಹತ್ತದ ಬೆಳೆ, ಏರುವ ಬಡ್ಡಿ, ತೀರಿಸಲಾಗದ ಸಾಲ ಎಲ್ಲವೂ ಸೇರಿಕೊಂಡು ರೈತನನ್ನು ಅಕ್ಷರಶಃ ಕಂಗಾಲು ಮಾಡಿಬಿಟ್ಟಿದೆ. ರೈತನಾಗಿ ಹುಟ್ಟುವುದು ಮತ್ತು ರೈತನಾಗಿಯೇ ಬದುಕುವುದು ಒಂದು ದೌರ್ಭಾಗ್ಯ ಎಂದು ರೈತರೇ ಅಂದುಕೊಳ್ಳುವ ಮಟ್ಟಕ್ಕೆ ಅವರನ್ನು ದೇಶ ತಂದಿಟ್ಟಿದೆ.

ಸ್ಮಾರ್ಟ್‌ಸಿಟಿಗಳನ್ನು ಕಟ್ಟಲು ಹೊರಡುವವರು, ವಿದೇಶಗಳ ಮಾದರಿಯನ್ನು ತಂದು ಮುಂದಿಡುವವರು, ಅನ್ನಭಾಗ್ಯ ಮುಂತಾದ ಯೋಜನೆಗಳನ್ನು ಘೋಷಿಸುವವರು ಇಲ್ಲಿ ಬೇಕಾದಷ್ಟು ಮಂದಿ ಸಿಗುತ್ತಾರೆ. ನಮ್ಮ ಬಹುತೇಕ ರಾಜಕೀಯ ನಾಯಕರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ ಅನ್ನುವುದನ್ನು ಅವರು ಆರಂಭಿಸುವ ಯೋಜನೆಗಳೇ ಹೇಳುತ್ತವೆ.

ಕತ್ರಿಗುಪ್ಪೆಯಲ್ಲಿ ಒಬ್ಬ ಇಪ್ಪತ್ತು ವರುಷದ ತರುಣ ತನ್ನ ಬೆನ್ನಿಗೆ ಬಹುರಾಷ್ಟ್ರೀಯ ಕಂಪೆನಿಯೊಂದರ ಹೆಸರಿರುವ ಹಲಗೆಯನ್ನು ಕಟ್ಟಿಕೊಂಡು ರಸ್ತೆಗಳಲ್ಲಿ ಅಡ್ಡಾಡುತ್ತಿದ್ದ. ಅದೇ ಸಂಸ್ಥೆಯವರು ಕೊಟ್ಟ ಟೀಶರ್ಟು, ಪ್ಯಾಂಟು, ಸಾಕಷ್ಟು ದುಬಾರಿಯಾದ ಶೂ ಹಾಕಿಕೊಂಡಿದ್ದ ಆ ಹುಡುಗನನ್ನು ಮಾತಾಡಿಸಿದರೆ, ಅವನು ನಾಗಮಂಗಲದ ರೈತನ ಮಗ ಅನ್ನುವುದು ಗೊತ್ತಾಯಿತು. ಆರೇಳು ಎಕರೆ ಜಮೀನಿದ್ದ ಕಾಲದಲ್ಲಿ ತಿರುಗನಹಳ್ಳಿ ಸಣ್ಣಕ್ಕಿಯನ್ನು ಅವನ ತಾತಂದಿರ ಕಾಲದಲ್ಲಿ ಬೆಳೆಯುತ್ತಿದ್ದರಂತೆ. ಆಮೇಲೆ ರಾಗಿ, ಹುರುಳಿ ಬೆಳೆಯಲು ಶುರುಮಾಡಿದರಂತೆ. ಇವನ ಕಾಲಕ್ಕೆ ಆಸ್ತಿ ಪಾಲಾಗಿ ಒಂದೆಕರೆ ಹದಿನೆಂಟು ಗುಂಟೆ ಇವನ ಪಾಲಿಗೆ ಬಂದಿತ್ತಂತೆ.

ಅಷ್ಟು ನೆಲದಲ್ಲಿ ಏನಾದರೂ ಬೆಳೆಯೋದಕ್ಕಾಗಲ್ಲವಾ? ತರಕಾರಿ ಬೆಳೆಯಬಹುದಲ್ಲ ಅಂತ ಕೇಳಿದರೆ ಅವನು ಅದು ಮರಳುಮಿಶ್ರಿತ ಮಣ್ಣಿರುವ ನೆಲ. ಮಳೆ ಬಿದ್ದರೆ ಮಾತ್ರ ನೀರು. ಬಾವಿ ತೋಡಿಸಿದರೆ ನೀರು ಸಿಗುತ್ತೆ ಅಂತ ಖಾತ್ರಿಯಿಲ್ಲ ಅಂತೆಲ್ಲ ಕತೆ ಹೇಳತೊಡಗಿದ. ಒಟ್ಟಿನಲ್ಲಿ ಆತನಿಗೆ ಊರಲ್ಲಿರಲು ಇಷ್ಟವಿಲ್ಲ, ನಗರಕ್ಕೆ ಬಂದು ಸೇರಬೇಕು ಅನ್ನುವುದು ಅವನ ಮಾತಿನಲ್ಲೇ ಮತ್ತೆ ಮತ್ತೆ ವ್ಯಕ್ತವಾಗುತ್ತಿತ್ತು. ಹೀಗೊಂದು ಬೋರ್ಡು ಬೆನ್ನಿಗೆ ಕಟ್ಟಿಕೊಂಡು ರಸ್ತೆಯಲ್ಲಿ ಅಲೆಯೋದು ಆತ್ಮಗೌರವದ ಕೆಲಸ ಹೌದಾ ಅಲ್ಲವಾ ಅನ್ನುವ ಬಗ್ಗೆ ಗೊಂದಲಗಳಿದ್ದವು. ಬೆಂಗಳೂರಲ್ಲಿ ಕೆಲಸ ಅಂತ ಹೇಳಿಕೊಳ್ಳುವುದು ನಾಗಮಂಗಲದ ರೈತ ಎಂದು ಹೇಳಿಕೊಳ್ಳುವುದಕ್ಕಿಂತ ಗೌರವದ್ದು ಎಂದು ಅವನ ಪರಿಸರ ಅವನಿಗೆ ಕಲಿಸಿಕೊಟ್ಟಿತ್ತೇನೋ?

ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ? ನಮ್ಮ ದೇಶದಲ್ಲಿ ಸಹಕಾರಿ ಚಳವಳಿಗಳು ಸತ್ತೇ ಹೋದಂತಿವೆ. ಒಂದು ಕಾಲದಲ್ಲಿ ರೈತರ ಸಹಕಾರಿ ಸಂಘಗಳು, ಸಂಸ್ಥೆಗಳು ರೈತನ ಬೆನ್ನಿಗೆ ನಿಲ್ಲುತ್ತಿದ್ದವು. ಬೆಳೆಗಾರರ ಸಹಕಾರಿ ಸಂಘಗಳು ರೈತನ ಹಿತರಕ್ಷಣೆ ಮಾಡುತ್ತಿದ್ದವು. ಅಕ್ಕಿ ಮಿಲ್ಲುಗಳು ಕೂಡ ರೈತನಿಗೆ ಆಪತ್ಕಾಲಕ್ಕೆ ನೆರವಾಗುತ್ತಿದ್ದವು. ಇವತ್ತು ಅಂಥ ಯಾವ ವ್ಯವಸ್ಥೆಯೂ ರೈತನ ಹಿತ ಕಾಯುತ್ತಿಲ್ಲ. ಅದಕ್ಕೆ ಕಾರಣ ರೈತನೂ ಅಲ್ಲ, ಸಹಕಾರಿ ಸಂಘಗಳೂ ಅಲ್ಲ. ಮಹಾನಗರದಲ್ಲಿ ತಲೆಯೆತ್ತಿರುವ ಶಾಪಿಂಗ್‌ ಮಾಲ್‌ಗ‌ಳು. ಅವುಗಳ ಕಾರ್ಯವಿಧಾನ, ಅವುಗಳ ನಡುವಿನ ಪೈಪೋಟಿ. ರೈತನಿಗೆ ತನ್ನ ಉತ್ಪನ್ನವನ್ನು ಎಲ್ಲಿಗೆ ತಲುಪಿಸಬೇಕು ಅನ್ನುವುದೇ ಗೊತ್ತಾಗದ ಸ್ಥಿತಿ.

ಕರ್ನಾಟಕ ಹಾಲು ಮಹಾಮಂಡಲದ ಕಾರ್ಯವೈಖರಿಯನ್ನೇ ನೋಡಿ. ಅದು ಎಷ್ಟು ಅಚ್ಚುಕಟ್ಟಾಗಿ, ಸಮಾನತೆ ಮತ್ತು ಸಹಕಾರ ತತ್ವವನ್ನು ಪಡಿಮೂಡಿಸಿಕೊಂಡು ನಡೆಯುತ್ತಿದೆ. ಅಲ್ಲೇನಾದ್ರೂ ತೊಂದರೆಗಳಾದರೆ, ಅದು ಅಧಿಕಾರ ಹಿಡಿದವರ ದುರಾಸೆಯಿಂದಲೋ ಅಧಿಕಾರ ಲಾಲಸೆಯಿಂದಲೋ ಆಗಬೇಕೇ ಹೊರತು, ರೈತರಿಂದಲೋ ವ್ಯವಸ್ಥೆಯ ಲೋಪದಿಂದಲೋ ಅಲ್ಲ. ಅಂಥದ್ದೇ ಒಂದು ವ್ಯವಸ್ಥೆಯನ್ನು ಅಕ್ಕಿ, ಬೇಳೆ, ತರಕಾರಿ, ಟೊಮ್ಯಾಟೋ- ಇವುಗಳಿಗೂ ಕಲ್ಪಿಸುವುದು ಕಷ್ಟವೇ? ಒಂದು ದಿನ ಇಟ್ಟರೆ ಹಾಳಾಗಿ ಹೋಗುವಂಥ ಹಾಲನ್ನೇ ಶೇಖರಿಸಿ, ಸರಬರಾಜು ಮಾಡುವುದು ಸಾಧ್ಯವಾಗಿರುವಾಗ ಅಂಥದ್ದೇ ಒಂದು ಅಚ್ಚುಕಟ್ಟಾದ ವ್ಯವಸ್ಥೆಯನ್ನು ಬೇರೆ ಬೆಳೆಗಾರರಿಗೂ ಯಾಕೆ ಕಲ್ಪಿಸಿಕೊಡಬಾರದು. ಒಂದು ಅಕ್ಕಿ ಮಹಾಮಂಡಲ, ಬೇಳೆ ಮಹಾಮಂಡಲ, ತರಕಾರಿ ಮಹಾಮಂಡಲ ಆರಂಭವಾಗಿ, ಲಾಭದಾಸೆಯಿಲ್ಲದೇ, ನಷ್ಟವೂ ಆಗದಂತೆ ಅದು ರೈತರಿಂದ ಗ್ರಾಹಕರಿಗೆ ಅಕ್ಕಿ, ಬೇಳೆ, ತರಕಾರಿಗಳನ್ನು ಹಸ್ತಾಂತರ ಮಾಡುವ ಕೆಲಸ ಮಾಡಬಾರದು. ನೀಟಾಗಿ ಪ್ಯಾಕ್‌ ಆಗಿರುವ ವೈವಿಧ್ಯಮಯ ತರಕಾರಿಗಳು ಬೆಳಗ್ಗೆ ಮನೆಗೇ ಬಂದು ಬೀಳುತ್ತವೆ ಅಂದರೆ ಯಾರು ತಾನೇ ಬೇಡ ಅನ್ನುತ್ತಾರೆ.

ರೈತರಿಗೆ ಇರುವ ಶಕ್ತಿಯೇ ಅದು. ಗೆಳೆಯರೊಬ್ಬರು ಹೇಳುವಂತೆ ನಮ್ಮ ದೇಶದಲ್ಲಿ ಶೇಕಡಾ 90ರಷ್ಟು ರೈತರಿದ್ದಾರೆ. ಅವರೆಲ್ಲ ಸೇರಿ ಒಂದು ರೈತರ ಪಕ್ಷ ಕಟ್ಟಿದರೆ, ರೈತರೆಲ್ಲ ಜಾತಿ ಮತಗಳ ಬೇಧವಿಲ್ಲದೇ, ನಾವು ರೈತರ ಜಾತಿ ಅಂದುಕೊಂಡು ಮತಹಾಕಿದರೆ, ಇಲ್ಲಿ ರೈತನೊಬ್ಬ ಪ್ರಧಾನ ಮಂತ್ರಿಯೂ ಮುಖ್ಯಮಂತ್ರಿಯೂ ಆಗಬಲ್ಲ. ಇಡೀ ಕ್ಯಾಬಿನೆಟ್ಟಿಗೆ ಕ್ಯಾಬಿನೆಟ್ಟೇ ರೈತರು ತುಂಬಿಕೊಂಡರೆ ನಮ್ಮ ದೇಶದಲ್ಲೊಂದು ಬಹುದೊಡ್ಡ ಕ್ರಾಂತಿಯೇ ಆಗಿಬಿಡಬಹುದು. ಈ ಪ್ರಚಾರದ ರಾಜಕಾರಣ, ಭಾಗ್ಯದ ರಾಜಕಾರಣಗಳನ್ನೆಲ್ಲ ಮೂಲೆಗೆ ತಳ್ಳಿ ಶ್ರಮಸಂಸ್ಕೃತಿಯ ಗೆಲುವು ಕಣ್ಣಿಗೆ ಕಟ್ಟಬಹುದು.

ಕಳೆದೊಂದೆರಡು ತಿಂಗಳ ಹಿಂದೆ ಸರ್ಕಾರಿ ಬಸ್ಸಿನಡಿಗೆ ಸಿಕ್ಕಿ ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ ಸರ್ಕಾರ ಒಂದು ಲಕ್ಷವೋ ಐದು ಲಕ್ಷವೋ ಪರಿಹಾರ ಘೋಷಿಸಿತು. ಆ ಊರಿನ ರೈತರೊಬ್ಬರು ಅದನ್ನು ನೋಡಿ ಹೇಳಿದ್ದಿಷ್ಟು: ಆ ಹುಡುಗ ಹೆಲ್ಮೆಟ್‌ ಹಾಕಿರಲಿಲ್ಲ.
ಅವನಿಗೆ ಲೈಸೆನ್ಸ್‌ ಇರಲಿಲ್ಲ. ಕಂಠ ಪೂರ್ತಿ ಕುಡಿದಿದ್ದ. ಅಡ್ಡಾದಿಡ್ಡಿಯಾಗಿ ವಾಹನ ಓಡಿಸುತ್ತಿದ್ದ. ಅಷ್ಟೆಲ್ಲ ತಪ್ಪುಗಳನ್ನು ಮಾಡಿ ಬಸ್ಸಿನಡಿಗೆ ಬಿದ್ದು ಸತ್ತ. ಅದರಲ್ಲಿ ಡ್ರೈವರನ ಯಾವ ತಪ್ಪೂ ಇರಲಿಲ್ಲ. ಜನರೆಲ್ಲ ಸೇರಿ ಡ್ರೈವರನಿಗೆ ಹೊಡೆದರು. ಆ ಹುಡುಗನ ಕುಟುಂಬಕ್ಕೆ ಪರಿಹಾರ ಕೊಡಿಸಿದರು. ಮೂವತ್ತು ವರುಷಗಳ ಕಾಲ ಒಂದೇ ಒಂದು ಅಪಘಾತ ಮಾಡದೇ, ಒಂದೇ ಒಂದು ಸಲ ಕಾನೂನು ಭಂಗ ಮಾಡದೇ, ಕೊಟ್ಟ ಸಂಬಳ ತೆಗೆದುಕೊಂಡು, ರಗಳೆ ಮಾಡದೇ, ನಿಯತ್ತಿನಿಂದ ಕೆಲಸ ಮಾಡಿದವನಿಗೆ ಸಿಕ್ಕಿದ್ದು ಧರ್ಮದೇಟು ಮತ್ತು ಶಿಕ್ಷೆ. ಎಲ್ಲಾ ತಪ್ಪುಗಳನ್ನು ಮಾಡಿದವನಿಗೆ ದೊಡ್ಡ ಮೊತ್ತದ ಪರಿಹಾರ. ಇದು ನಮ್ಮ ದೇಶದ ರಾಜಕೀಯ ಸ್ಥಿತಿ ಮತ್ತು ಗತಿ.
.
ಇವತ್ತು ಗ್ರಾಮೀಣ ಭಾರತವನ್ನು ಕೀಳರಿಮೆಗೆ ತಳ್ಳುತ್ತಿರುವುದು ನಮ್ಮ ಮನರಂಜನಾ ಉದ್ಯಮ. ಅದು ಎಲ್ಲಾ ಬದಲಾವಣೆಗಳ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಬಟ್ಟೆ, ಮಾತಿನ ಶೈಲಿ, ಕೆಲಸ ಮಾಡುವ ಕ್ರಮ, ನಿಲುವು, ಒಲವು, ದೃಷ್ಟಿಕೋನ ಎಲ್ಲವನ್ನೂ ಎಂಟರ್‌ಟೇನ್‌ಮೆಂಟ್‌ ಹೆಸರಿನಲ್ಲಿ ಬದಲಾಯಿಸಲಾಗುತ್ತಿದೆ. ಅದರಲ್ಲಿ ಜಾಹೀರಾತುಗಳ ಪಾತ್ರವೂ ಉಂಟು. ಬಟ್ಟೆ ಬಿಳುಪಾಗಿರಬೇಕು, ಮುಖ ಬಿಳುಪಾಗಿರಬೇಕು, ಟಾಯ್ಲೆಟ್ಟು ಅಡುಗೆ ಮನೆಯಂತಿರಬೇಕು, ಮನೆ ಅರಮನೆಯಂತೆ ಇರಬೇಕು ಎಂಬಿತ್ಯಾದಿ ಸಂಗತಿಗಳನ್ನು ಎಷ್ಟು ಸೊಗಸಾಗಿ ಹೇರಲಾಗುತ್ತಿದೆ ಎಂದರೆ ಹಳ್ಳಿಯ ಹುಡುಗ ಹುಡುಗಿಯರು ಕೂಡ ಬಟ್ಟೆಗಳಲ್ಲಿ ಆಧುನಿಕರಾಗುತ್ತಿದ್ದಾರೆ. ಇವತ್ತು ಕೆಲಸ ಇದೆಯೋ ಇಲ್ಲವೋ ಆದಾಯ ಇದೆಯೋ ಇಲ್ಲವೋ ಚೆಂದದ ಬಟ್ಟೆ ಮತ್ತು ಟಚ್‌ಸ್ಕ್ರೀನ್‌ ಮೊಬೈಲು ಅನಿವಾರ್ಯ ಎಂಬ ನಂಬಿಕೆ ಬಂದುಬಿಟ್ಟಿದೆ.

ಶಿಕ್ಷಣ ನಮ್ಮೆಲ್ಲರನ್ನೂ ಹೆಚ್ಚು ಹೆಚ್ಚು ಬುದ್ಧಿವಂತರನ್ನಾಗಿ ಮಾಡಬೇಕಾಗಿತ್ತು. ಆದರೆ ಶಿಕ್ಷಣವೇ ಅತ್ಯಂತ ದಡ್ಡತನದ ಕೆಲಸ ಆದಂತಿದೆ. ವಿದ್ಯೆ ಎಂದರೆ ಮಗು ಮತ್ತು ಒಂದು ಲಕ್ಷ ರೂಪಾಯಿಯನ್ನು ಒಂದು ಕಟ್ಟಡದೊಳಗೆ ಎಸೆಯುವುದು ಎಂದಷ್ಟೇ ಆಗಿಬಿಟ್ಟಿದೆ.

ಇದೆಲ್ಲವನ್ನೂ ಹೇಳಬಾರದು. ಆದರೆ ಹೇಳದೇ ವಿಧಿಯಿಲ್ಲ. ಇದು ಬದಲಾಗುತ್ತದೆ ಅಂತೇನೂ ಖಾತ್ರಿಯಿಲ್ಲ. ಒಂದು ಮನೆಯಿದ್ದರೂ ಮತ್ತೊಂದು ಮನೆ, ಒಂದು ಸೈಟಿದ್ದರೂ ಮತ್ತೊಂದು ಸೈಟು, ಒಂದಿದ್ದರೂ ಮತ್ತೊಂದು ಕೊಂಡುಕೊಂಡು ಸುಭದ್ರರಾಗುವ ಭಾವನೆಯಲ್ಲೇ ನಮ್ಮ ದುರಂತದ ಬೀಜ ಇದ್ದಂತಿದೆ.

(ವಾಟ್ಸಪ್ ನಲ್ಲಿ ಯಾರೊ ಕಳಿಸಿದ್ದು )


Gadi Kannadiga

Leave a Reply