ಕೊಪ್ಪಳ ಜುಲೈ ೦೪ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಜುಲೈ ೪ರಂದು ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಗಂಗಾವತಿ ತಾಲೂಕಿಗೆ ಭೇಟಿ ನೀಡಿದರು.
ಗಂಗಾವತಿ ನಗರದ ಕಲ್ಯಾಣ ನಗರದಲ್ಲಿನ ಶ್ರೀ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ, ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳ ಪರಿಶೀಲಿಸಿದರು. ನಿಲಯದ ಮಕ್ಕಳ ಸಂಖ್ಯೆ, ಹಾಸ್ಟೆಲ್ ಸಿಬ್ಬಂದಿಯ ಕಾರ್ಯವೈಖರಿ, ಹಾಸ್ಟೆಲ್‌ನಿಂದ ಸಿಗುವ ಸೌಲಭ್ಯಗಳು, ಕ್ರೀಡಾ ಸಾಮಗ್ರಿ, ಕಂಪ್ಯೂಟರ್ ಶಿಕ್ಷಣ, ಊಟ- ಉಪಾಹಾರದ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ದವಸ ಧಾನ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ರಿಜಿಸ್ಟರ್ ಪರಿಶೀಲಿಸಿದರು.
ಇದೆ ವೇಳೆ ಸಿಇಓ ಅವರು ಹಾಸ್ಟೆಲ್ ಮಕ್ಕಳೊಂದಿಗೆ ಸಂವಾದ ನಡೆಸಿ, ವಿದ್ಯಾರ್ಥಿಗಳು ಮೊಬೈಲು ಗೀಳು ಬೆಳೆಸಿಕೊಳ್ಳದೇ ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳಬೇಕು. ನಿತ್ಯ ಪತ್ರಿಕೆ ಹಾಗೂ ಗ್ರಂಥಾಲಯದ ಪುಸ್ತಕಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ನಂತರ ಕೆಕೆಆರ್‌ಡಿಬಿ ಅನುದಾನದಲ್ಲಿ ವಿಪ್ರ ಗ್ರಾಮ ಹಾಗೂ ನೀಲಕಂಠೇಶ್ವರ ನಗರದ ಸಕಿಪ್ರಾ ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ಕೊಠಡಿಗಳ ಗುಣಮಟ್ಟ ಪರಿಶೀಲಿಸಿದರು. ಕಾಮಗಾರಿಗೆ ಬಳಸುವ ಮರಳು ಹಾಗೂ ಸಿಮೆಂಟ್‌ನ ಗುಣಮಟ್ಟ ಪರಿಶೀಲಿಸಿದರು. ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಮಕ್ಕಳಿಗೆ ಚಾಕ್‌ಲೆಟ್ ನೀಡಿದರು: ವಿಪ್ರ ಗ್ರಾಮದಲ್ಲಿ ಶಾಲಾ ಕೊಠಡಿಯ ಕಾಮಗಾರಿ ವೀಕ್ಷಣೆ ಮಾಡುತ್ತಿದ್ದಾಗ ಪಕ್ಕದ ಅಂಗನವಾಡಿಗೆ ಸಿಇಓ ಅವರು ತೆರಳಿ, ಅಂಗನವಾಡಿ ಚಿಣ್ಣರ ಕಲಿಕೆ ಪರಿಶೀಲಿಸಿದರು. ಮಕ್ಕಳಿಗೆ ತಮ್ಮ ಕಾರಲ್ಲಿ ಇದ್ದ ಚಾಕ್‌ಲೆಟ್ ನೀಡಿ ಮಕ್ಕಳ ಪ್ರೀತಿಗೆ ಪಾತ್ರರಾದರು.
ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತಗೌಡ ಪಾಟೀಲ್, ಪಂಚಾಯತ್ ರಾಜ್ಯ ಎಂಜನಿಯರಿಂಗ್ ವಿಭಾಗದ ಅಭಿಯಂತರರಾದ ಪಲ್ಲವಿ, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಸುದೇಶಕುಮಾರ್, ಬಿಸಿಎಂ ತಾಲೂಕು ಅಧಿಕಾರಿಗಳಾದ ಉಷಾ ಮುಜಮದಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶರಣಪ್ಪ, ಪರಿಶಿಷ್ಟ ವರ್ಗಗಳ ಇಲಾಖೆ ತಾಲೂಕು ಅಧಿಕಾರಿಗಳಾದ ಗ್ಯಾನನಗೌಡ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ನಾಗೇಶ ಕುರಡಿ ಸೇರಿದಂತೆ ತಾಪಂ ಸಿಬ್ಬಂದಿ ಇದ್ದರು.
**