ಕೊಪ್ಪಳ ಮೇ ೧೫ : ೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿನ ಮೊದಲನೇ ಪೂರ್ವ ಸಿದ್ಧತಾ ಸಭೆಯು ಮೇ ೧೫ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಹಯೋಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಾಗುವಳಿಗೆ ಲಭ್ಯವಿರುವ ಭೂಮಿ, ಕೃಷಿ, ತೋಟಗಾರಿಕಾ, ರೇಷ್ಮೆ ಬೆಳೆಗಳು, ಹಿಂಗಾರು ಹಾಗೂ ಮುಂಗಾರು ಮತ್ತು ಬೇಸಿಗೆ, ನೀರಾವರಿ, ಖುಷ್ಕಿ ಕೃಷಿ ಕ್ಷೇತ್ರ ಹಾಗೂ ಸಣ್ಣ, ಅತಿ ಸಣ್ಣ ಮತ್ತು ದೊಡ್ಡ ಸೇರಿದಂತೆ ಒಟ್ಟು ಹಿಡುವಳಿದಾರರು, ವಾರ್ಷಿಕ ಮಳೆ ಮತ್ತು ಮಳೆಮಾಪನ ಕೇಂದ್ರಗಳು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳು ಪ್ರಾತ್ಯಕ್ಷಿಕೆಯ ಮೂಲಕ ಸಭೆಗೆ ಸಮಗ್ರ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ೨೦೨೩ರ ಧೀರ್ಘಕಾಲಿನ ಮುಂಗಾರು ಮಳೆ ಮೂನ್ಸೂಚನೆ ಅನ್ವಯ ರಾಜ್ಯದಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆಯ ಪ್ರಮಾಣ ೮೫.೨ರಷ್ಟಿದ್ದು ಕರ್ನಾಟಕ ರಾಜ್ಯವು ಸೇರಿದಂತೆ ದಕ್ಷಿಣ ಭಾಗದ ಭೂಪ್ರದೇಶಗಳಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳು ಅಗತ್ಯ ಮುಂಜಾಗ್ರತೆ ವಹಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಸಕ್ತ ೨೦೨೩-೨೪ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜಕ್ಕೆ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಬಿತ್ತನೆ ಬೀಜ ವಿತರಣೆ ಮಾಡುವ ಕೇಂದ್ರಗಳು ಹಾಗೂ ಹೆಚ್ಚುವರಿ ಕೇಂದ್ರಗಳ ಪಟ್ಟಿ ಮಾಡಿಕೊಂಡು ಆಯಾ ಕೇಂದ್ರಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ರೈತರಿಗೆ ಜಾಗೃತಿ ಮೂಡಿಸಿ: ಬೀಜದಿಂದ ಹರಡುವ ರೋಗಗಳನ್ನು ತಡೆ ಹಿಡಿಯಲು ಪ್ರತಿ ಹೋಬಳಿ ಮಟ್ಟದಲ್ಲಿ ಬಿತ್ತನೆ ಬೀಜಗಳ ಉಪಚಾರ ಮಾಡಿ ಬಿತ್ತನೆ ಮಾಡುವಂತೆ ರೈತರಿಗೆ ಜಾಗೃತಿ ಮೂಡಿಸಬೇಕು. ಮೇ ೨೨ ರಿಂದ ಬೀಜೋಪಚಾರ ಆಂದೋಲನ ಕೈಗೊಳ್ಳಬೇಕು ಜಿಲ್ಲಾಧಿಕಾರಿಗಳು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೊಪ್ಪಳ ಜಿಲ್ಲೆಗೆ ಮಾಹೇವಾರು ರಸಗೊಬ್ಬರ ಬೇಡಿಕೆಯ ಮಾಹಿತಿಯನ್ನು ಸಲ್ಲಿಸಿ, ಯಾವುದೇ ರೀತಿಯ ಕೊರೆತೆಯಾಗದಂತೆ ರಸಗೊಬ್ಬರದ ದಾಸ್ತಾನುಕರಿಸಲು ಒತ್ತು ಕೊಡಬೇಕು. ರೈತರಿಗೆ ಸಕಾಲಕ್ಕೆ ಬೀಜ ಮತ್ತು ಗೊಬ್ಬರ ವಿತರಿಸಲು ಅಗತ್ಯ ಕ್ರಮ ವಹಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು, ಸಂಬಂಧಪಟ್ಟ ಬೀಜ ಪೂರೈಕೆ ಕಂಪನಿಗಳು, ರಸಗೊಬ್ಬರ ವಿತರಕರು ಸರಿಯಾಗಿ ಸಮನ್ವಯ ವಹಿಸಿ, ಬಿತ್ತನೆ ಬೀಜ, ರಸಗೊಬ್ಬರ ವಿತರಣೆಯಲ್ಲಿ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೆಳೆಗಳ ಬಿತ್ತನೆ ವಾಡಿಕೆ ಮೇ ೧೫ರಿಂದ ಜೂನ್ ೧೫ರವರೆಗೆ ಇದ್ದು, ಪೂರ್ವ ಮುಂಗಾರಿನಲ್ಲಿ ಹೆಸರು ಹಾಗೂ ಎಳ್ಳು ಬಿತ್ತನೆ ಮಾಡಲಾಗುತ್ತದೆ. ಮುಂಗಾರು ಹಂಗಾಮು ವಾಡಿಕೆ ಜೂನ್ ೦೧ರಿಂದ ಆಗಸ್ಟ್ ೧೫ರವರೆಗೆ ಇದ್ದು ಈ ವೇಳೆಯಲ್ಲಿ ಮೆಕ್ಕೆಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಈ ಎಲ್ಲಾ ಪ್ರಮುಖ ಬೆಳೆಗಳ ಬೆತ್ತನೆ ಬೀಜಗಳನ್ನು ಜಿಲ್ಲೆಯ ೨೦ ರೈತ ಸಂಪರ್ಕ ಕೇಂದ್ರಗಳ ಜೊತೆಗೆ ೮ ಹೆಚ್ಚುವರಿ ಕೇಂದ್ರಗಳಲ್ಲಿ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ, ತೊಗರಿ, ಹುರುಳಿ, ಹೆಸರು, ಅಲಸಂದಿ, ಅವರೆ, ಮಡಿಕೆ, ಶೇಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಔಡಲ, ಹತ್ತಿ ಮತ್ತು ಕಬ್ಬು ಸೇರಿದಂತೆ ೩,೦೮,೦೦೦ ಬಿತ್ತನೆ ಕ್ಷೇತ್ರದ ಗುರಿಯನುಸಾರ ಒಟ್ಟು ೪೧೬೭೧.೭೪ ಕ್ವಿಂಟಲ್‌ನಷ್ಟು ಬೀಜದ ಬೇಡಿಕೆ ಇರುತ್ತದೆ. ಅದೇ ರೀತಿ ೨೦೨೩-೨೪ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಏಪ್ರೀಲ್‌ನಿಂದ ಸೆಪ್ಟೆಂಬರ್ ಮಾಹೆವರೆಗೆ ಯೂರಿಯಾ ೩೩,೨೬೩, ಡಿಎಪಿ ೧೬,೮೮೦, ಎಂಓಪಿ ೩೩೬೮, ಕಾಂಪ್ಲೆಕ್ಸ್ ೩೫,೯೧೬ ಹಾಗೂ ಎಸ್ಸೆಸ್ಸೆಪಿ ೩೨೩೯ ಸೇರಿ ಒಟ್ಟು ೯೨,೬೬೬ ಟನ್‌ನಷ್ಟು ರಸಗೊಬ್ಬರದ ಬೇಡಿಕೆ ಇರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ಸಭೆಗೆ ಮಾಹಿತಿ ನೀಡಿದರು.
ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ತಿಳಿಸಲು ಕೃಷಿ ಇಲಾಖೆ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಭಾಗೀತ್ವದಲ್ಲಿ ಪ್ರತಿ ಹೋಬಳ್ಳಿಯಲ್ಲಿ ೩ ದಿನಗಳ ಪ್ರಚಾರ ಕೈಗೊಳ್ಳಲಾಗುವುದು. ಕೃಷಿ ಸಂಜೀವಿನಿ ವಾಹನಗಳ ಮೂಲಕ ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಇಲಾಖೆಯ ಯೋಜನೆಗಳು, ಬೆಳೆಗಳ ಮಾಹಿತಿ, ರೋಗ ಮತ್ತು ಕೀಟ ಹತೋಟಿ ಕ್ರಮಗಳ ಬಗ್ಗೆ ಕೃಷಿ ಇಲಾಖೆಯ ಸಿಬ್ಬಂದಿ ಹಾಗೂ ವಿಜ್ಞಾನಿಗಳೊಂದಿಗೆ ಪ್ರಚಾರ
ಕಾರ್ಯಕ್ರಮಗಳನ್ನು ಜೂನ್ ೧ರಿಂದ ಕೈಗೊಳ್ಳಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ರವಿ, ಉಪ ಕೃಷಿ ನಿರ್ದೇಶಕರಾದ ಸಹದೇವ ಯರಗುಪ್ಪ ಸೇರಿದಂತೆ ತಾಲ್ಲೂಕು ಎಲ್ಲಾ ಸಹಾಯಕ ಕೃಷಿ ನಿರ್ದೇಶಕರು, ಬೀಜ ಪೂರೈಕೆ ಕಂಪನಿಗಳ ಪ್ರತಿನಿಧಿಗಳು, ರಸಗೊಬ್ಬರ ವಿತರಕರ ಕಂಪನಿಗಳ ಮ್ಯಾನೇಜರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Gadi Kannadiga > State > ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ವ್ಯವಸ್ಥೆಯಾಗಲಿ
ಮುಂಗಾರು ಹಂಗಾಮಿನ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ವ್ಯವಸ್ಥೆಯಾಗಲಿ
Suresh15/05/2023
posted on

More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023