ಕೊಪ್ಪಳ ಮೇ ೦೫ : ಚುನಾವಣಾ ಕರ್ತವ್ಯದ ಜೊತೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆಯ ಕ್ರಮದ ವ್ಯವಸ್ಥೆಗೂ ಹೆಚ್ಚಿನ ಗಮನ ಕೊಡಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರಸಭೆ ಪೌರಾಯುಕ್ತರು, ವಿವಿಧ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗದ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಮೇ ೫ರಂದು ಜಿಲ್ಲಾಡಳಿತ ಭವನದ ಕೇಶ್ವಾನ್ ಹಾಲ್-೨ರಲ್ಲಿ ಮತ್ತೊಂದು ಸುತ್ತಿನ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಜೀವಜಲವು ಪ್ರತಿಯೊಬ್ಬರಿಗೂ ಪ್ರತಿದಿನ ಅತವಶ್ಯಕವಾಗಿ ಬೇಕಾಗುತ್ತದೆ. ದಿನ ಬೆಳಗಾದರೆ ನೀರಿನಿಂದಲೇ ಬದುಕು ಆರಂಭವಾಗುತ್ತದೆ. ಬೀದಿ ದೀಪ, ರಸ್ತೆ ಸೌಕರ್ಯದಷ್ಡೇ ನೀರು ಸಹ ಸಾರ್ವಜನಿಕರಿಗೆ ಅತ್ಯವಶ್ಯವಾಗಿ ಬೇಕಾಗುತ್ತದೆ. ಅಧಿಕಾರಿಗಳು ಇದನ್ನು ಅರಿಯಬೇಕು. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ದೂರು ಹೇಳಿದಾಗ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸ್ಪಂದನೆ ನೀಡಬೇಕು ಎಂದು ತಿಳಿಸಿದರು.
ಬೇಸಿಗೆಯ ಮಧ್ಯೆಯು ಈಗಾಗಲೇ ಮಳೆ ಬೀಳಲು ಆರಂಭವಾಗಿದೆ. ಮಳೆಯಿಂದ ಜನ-ಜಾನುವಾರುಗಳಿಗೆ ಹಾನಿಯಾದ ಬಗ್ಗೆ ಗೊತ್ತಾದಲ್ಲಿ ನಿಗದಿಪಡಿಸಿದ ಅವಧಿಯೊಳಗೆ ಪರಿಹಾರಕ್ಕೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಾನುವಾರುಗಳಿಗೆ ಮೇವಿನ ಮತ್ತು ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಬೇಸಿಗೆಯ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಲವಾರು ಸುತ್ತಿನಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಹಿಂದಿನ ಸಭೆಗಳಲ್ಲಿ ನಿರ್ದೇಶನ ನೀಡಿದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಗ್ರಾಮಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನರೇಗಾ ಕಾಮಗಾರಿಗಳು ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ತಾಲೂಕುಮಟ್ಟದಲ್ಲಿ ಸಹ ಸಭೆ ನಡೆಸಿ ಚರ್ಚಿಸಿ ಜನತೆಗೆ ಸ್ಪಂದನೆ ನೀಡಬೇಕು ಎಂದು ತಿಳಿಸಿದರು.
ವಿದ್ಯುತ್ ನಿಲುಗಡೆಯ ಕಾರಣಕ್ಕೆ ಕುಡಿಯುವ ನೀರು ಸಿಗುತ್ತಿಲ್ಲ ಎನ್ನುವ ದೂರುಗಳು ಬರಕೂಡದು. ವಿದ್ಯುತ್ ತಂತಿ, ಕಂಬಗಳು ದುರಸ್ತಿಯಿದ್ದಲ್ಲಿ ಬೇಗನೆ ಸರಿಪಡಿಸಿ ಕುಡಿವ ನೀರು ಪೂರೈಕೆಗೆ ಸಮರ್ಪಕ ವಿದ್ಯುತ್ ವ್ಯವಸ್ಥೆಯಾಗಬೇಕು ಎಂದು ಜಿಲ್ಲಾಧಿಕಾರಿಗಳು ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆದ್ಯತೆಯ ಮೇರೆಗೆ ಜಲಜೀವನ್ ಮಿಷನ್ ಮತ್ತು ಡಿಬಿಓಟಿ ದುರಸ್ತಿಗೆ ಒತ್ತು ಕೊಡಬೇಕು. ಜನರಿಗೆ ಸಾಕಷ್ಟು ಅನುಕೂಲಕರವಾದ ಜೆಜೆಎಂ ಮತ್ತು ಡಿಬಿಓಟಿ ಮೂಲಕವೇ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
Gadi Kannadiga > State > ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಕುಡಿವ ನೀರು: ದೂರುಗಳು ಬಾರದ ಹಾಗೆ ಜನತೆಗೆ ಸ್ಪಂದಿಸಿ
ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಕುಡಿವ ನೀರು: ದೂರುಗಳು ಬಾರದ ಹಾಗೆ ಜನತೆಗೆ ಸ್ಪಂದಿಸಿ
Suresh05/05/2023
posted on
More important news
ಪ್ರತಿಬಂಧಕಾಜ್ಞೆ ಜಾರಿ
08/06/2023