This is the title of the web page
This is the title of the web page

Please assign a menu to the primary menu location under menu

State

ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮಳೆಗಾಲ ಹಿನ್ನೆಲೆ: ನಾನಾಕ್ರಮಕ್ಕೆ ಅಧಿಕಾರಿಗಳು ಸನ್ನದ್ಧರಾಗಿರಲಿ


ಕೊಪ್ಪಳ ಜುಲೈ ೨೧ : ಜಿಲ್ಲೆಯಲ್ಲಿ ಇದೀಗ ಉತ್ತಮಮವಾಗಿ ಮಳೆ ಬೀಳುತ್ತಿವೆ. ನಿರಂತರ ಮಳೆಯಿಂದಾಗಿ ಮನೆ ಅಥವಾ ಆಸ್ತಿಗೆ ಹಾನಿಯಾದಲ್ಲಿ ತಕ್ಷಣ ವರದಿ ಮಾಡಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಹೇಳಿದರು.
ಜಿಲ್ಲಾಡಳಿತ ಭವನದ ಕೇಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜುಲೈ ೨೧ರಂದು ನಡೆದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೀಗ ಮಳೆಗಳು ನಿರಂತರ ಸುರಿಯುತ್ತಿರುವುದರಿಂದ ಕೃಷಿ ವಲಯದಲ್ಲಿ ವಿವಿಧ ಚಟುವಟಿಕೆಗಳು ಬಿರುಸಾಗಿ ನಡೆದಿವೆ. ಕುಡಿಯುವ ನೀರಿಗೆ ಬಹುತೇಕ ಕಡೆಗಳಲ್ಲಿ ಅನುಕೂಲವಾಗಿದೆ. ನಿರಂತರ ಮಳೆಯಿಂದಾಗಿ ಮನೆಗಳಿಗೆ ಹಾನಿಯಾದಲ್ಲಿ ತ್ವರಿತ ಪರಿಹಾರ ಕಲ್ಪಿಸಬೇಕು. ಬೆಳೆ ಹಾನಿಯಾದಲ್ಲಿ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಬೇಕು. ವಿಪರೀತ ಮಳೆ ಸುರಿದು ಸಾರ್ವಜನಿಕ ತೊಂದರೆಯಾದಲ್ಲಿ ಘಟನಾ ಸ್ಥಳಕ್ಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಸ್ಪಂದನೆ ನೀಡಬೇಕು. ಈ ಹಿಂದೆ ನಿರ್ದೇಶನ ನೀಡಿದಂತೆ ಕ್ಷಿಪ್ರ ಕಾರ್ಯಾಚರಣೆ ತಂಡಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು.
ಮಳೆಯಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗದ ಹಾಗೆ ತಗ್ಗು ಪ್ರದೇಶ ಸೇರಿದಂತೆ ಯಾವುದೇ ಕಡೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಗಟಾರುಗಳಲ್ಲಿ ನೀರು ನಿಲ್ಲದ ಹಾಗೆ ಶುಚಿತ್ವ ಕಾರ್ಯ ನಡೆಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಮೀನುಗಳನ್ನು ಬಿಟ್ಟು ಲಾರ್ವಾಗಳನ್ನು ನಿಯಂತ್ರಿಸಬೇಕು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಪರೀಕ್ಷೆಯನ್ನು ನಿಯಮಿತವಾಗಿ ನಡೆಸಬೇಕು. ಡಿಬಿಓಟಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಳೆಯಿಂದಾಗಿ ಯಾವುದೇ ಕಡೆಗಳಲ್ಲಿ ಜಾನುವಾರುಗಳ ಜೀವಕ್ಕೆ ಹಾನಿಯಾದಲ್ಲಿ ರೈತರು ಕೂಡಲೇ ಮಾಹಿತಿ ನೀಡಬೇಕು. ಸಂಬಂಧಿಸಿದ ಅಧಿಕಾರಿಗಳು ಕಾಲಮಿತಿಯೊಳಗೆ ಜಾನುವಾರು ಪರಿಹಾರಕ್ಕೆ ಕ್ರಮ ವಹಿಸಬೇಕು. ಜಾನುವಾರುಗಳಿಗೆ ಮೇವಿನ ಮತ್ತು ನೀರಿನ ಕೊರತೆಯಾಗದ ಹಾಗೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೆ ವೇಳೆ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಮಳೆಯಿಂದಾಗಿ ಯಾವುದೇ ಕಡೆಗಳಲ್ಲಿ ವಿದ್ಯುತ್ ತಂತಿಗಳು ಹರಿದು ಬಿದ್ದಲ್ಲಿ ಕೂಡಲೇ ಬದಲಿ ವ್ಯವಸ್ಥೆ ಮಾಡಬೇಕು. ಕೊರತೆಯಾಗದ ಹಾಗೆ ಅಗತ್ಯ ಪ್ರಮಾಣದಲ್ಲಿ ವಿದ್ಯುತ್ ಪರಿವರ್ತಕಗಳ ಲಭ್ಯತೆಗೆ ಗಮನ ಹರಿಸಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ರತ್ನಂ ಪಾಂಡೆ ಅವರು ಮಾತನಾಡಿ, ಜಿಲ್ಲೆಯ ಯಾವುದೇ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂಬುದರ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಂಡು ಸಮರ್ಪಕ ನೀರು ಪೂರೈಕೆಗೆ ಒತ್ತು ಕೊಡಬೇಕು. ಮನೆಗಳಲ್ಲಿನ ನೀರಿನ ಸ್ಯಾಂಪಲಗಳನ್ನು ಪಡೆದುಕೊಂಡು ಸಹ ನೀರಿನ ಪರೀಕ್ಷೆ ನಡೆಸಿ ಜನರಿಗೆ ಶುದ್ಧ ಕುಡಿಯುವ ನೀರು ಸಿಗುವ ಹಾಗೆ ಎಲ್ಲಾ ರೀತಿಯ ಅಗತ್ಯ ಕ್ರಮ ವಹಿಸಬೇಕು ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಕುಷ್ಟಗಿ, ಕುಕನೂರ, ಯಲಬುರ್ಗಾ, ಕೊಪ್ಪಳ ಮತ್ತು ಗಂಗಾವತಿ ತಾಲೂಕುಗಳಲ್ಲಿ ವರದಿಯಾದ ೫ ಸಿಡಿಲಿನಿಂದ ಮೃತಪಟ್ಟ ಪ್ರಕರಣಗಳಿಗೆ ಹಾಗೂ ಕನಕಗಿರಿ ತಾಲೂಕಿನಲ್ಲಿ ವರದಿಯಾದ ಮನೆಕುಸಿದು ಮೃತಪಟ್ಟ ೨ ಪ್ರಕರಣಗಳಿಗೆ ತಲಾ ೫ ಲಕ್ಷ ರೂ.ಗಳಂತೆ ಮಾನವ ಜೀವ ಹಾನಿ ಪ್ರಕರಣಗಳಿಗೆ ೩೫,೦೦,೦೦೦ ರೂ.ಪರಿಹಾರ ವಿತರಿಸಲಾಗಿದೆ. ಏಪ್ರಿಲ್‌ನಿಂದ ಜುಲೈ ಮಾಹೆವರೆಗೆ ಕೊಪ್ಪಳ ತಾಲೂಕಿನಲ್ಲಿ ೧೩, ಕುಷ್ಟಗಿ ತಾಲೂಕಿನಲ್ಲಿ ೧೦, ಕುಕನೂರ ತಾಲೂಕಿನಲ್ಲಿ ೦೯, ಯಲಬುರ್ಗಾ ತಾಲೂಕಿನಲ್ಲಿ ೨೪ ಮತ್ತು ಗಂಗಾವತಿ ತಾಲೂಕಿನಲ್ಲಿ ೫ ಸೇರಿ ಒಟ್ಟು ಒಟ್ಟು ೬೧ ಮನೆಹಾನಿ ಪ್ರಕರಣಗಳಿಗೆ ಪೂರ್ಣಪ್ರಮಾಣದಲ್ಲಿ ಪರಿಹಾರ ವಿತರಿಸಲಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಏಪ್ರಿಲ್‌ದಿಂದ ಇಲ್ಲಿಯವರೆಗೆ ಕೊಪ್ಪಳ ತಾಲೂಕಿನಲ್ಲಿ ೧೬, ಕುಷ್ಟಗಿ ತಾಲೂಕಿನಲ್ಲಿ ೧೨, ಕನಕಗಿರಿ ತಾಲೂಕಿನಲ್ಲಿ ೧, ಕಾರಟಗಿ ತಾಲೂಕಿನಲ್ಲಿ ೩, ಕೂಕನೂರ ತಾಲೂಕಿನಲ್ಲಿ ೪ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೫ ಸೇರಿ ಒಟ್ಟು ೪೧ ಜಾನುವಾರುಗಳು ಸಾವಿಗೀಡಾಗಿದ್ದು, ಈ ಎಲ್ಲಾ ಜಾನುವಾರಗಳ ಪರಿಹಾರ ಮೊತ್ತವನ್ನು ಸಂಬಂಧಪಟ್ಟ ಸಂತ್ರಸ್ಥರಿಗೆ ವಿತರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜುಲೈ ೦೧ರಿಂದ ೨೦ರವರೆಗೆ ವಾಡಿಕೆ ಮಳೆ ೩೭.೮೦ ಮಿಮಿ ಇದ್ದು ವಾಸ್ತವಿಕವಾಗಿ ೬೩.೨೦ ಮಿಮಿ ಸುರಿದು ಶೇ.೬೭.೨೦ರಷ್ಟು ಹೆಚ್ಚಿನ ಮಳೆಯಾಗಿದೆ. ಜುಲೈ ೧ ರಿಂದ ಜುಲೈ ೨೦ರವರೆಗೆ ಗಂಗಾವತಿ, ಕೊಪ್ಪಳ, ಯಲಬುರ್ಗಾ, ಕುಕನೂರ, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಗಂಗಾವತಿ ತಾಲೂಕಿನಲ್ಲಿ ವಾಡಿಕೆ ಮಳೆ ೪೫.೫೦ ಮಿಮಿ ಇದ್ದು, ವಾಸ್ತವಿಕವಾಗಿ ೮೦.೨೦ ಮಿಮಿ ಸುರಿದು ಶೇ.೭೬.೨೬ರಷ್ಟು, ಕೊಪ್ಪಳ ತಾಲೂಕಿನಲ್ಲಿ ವಾಡಿಕೆ ಮಳೆ ೩೮.೮೦ ಮಿಮಿ ಇದ್ದು ವಾಸ್ತವಿಕವಾಗಿ ೭೪.೬೦ ಮಿಮಿ ಸುರಿದು ಶೇ.೯೨.೨೭ರಷ್ಟು, ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ ೩೬.೨೦ ಮಿಮಿ ಇದ್ದು ವಾಸ್ತವಿಕವಾಗಿ ೭೩.೬೦ ಮಿಮಿ ಮಳೆ ಸುರಿದು ಶೇ.೧೦೩.೩೧ರಷ್ಟು, ಕಾರಟಗಿ ತಾಲೂಕಿನಲ್ಲಿ ವಾಡಿಕೆ ಮಳೆ ೪೧ ಮಿಮಿ ಇದ್ದು ವಾಸ್ತವಿಕವಾಗಿ ೪೮.೮೦ ಮಿಮಿ ಸುರಿದು ಶೇ.೧೯.೦೨ರಷ್ಟು, ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ ೩೬.೭೦ ಮಿಮಿ ಇದ್ದು ವಾಸ್ತವಿಕವಾಗಿ ೬೯.೩೦ ಮಿಮಿ ಮಳೆ ಸುರಿದು ಶೇ.೮೮.೮೩ರಷ್ಟು, ಕನಕಗಿರಿ ತಾಲೂಕಿನಲ್ಲಿ ವಾಡಿಕೆ ಮಳೆ ೨೫.೧೦ ಮಿಮಿ ಇದ್ದು, ವಾಸ್ತವಿಕವಾಗಿ ೭೩.೧೦ ಮಿಮಿ ಸುರಿದು ಶೇ.೧೯೧.೨೪ರಷ್ಟು ಹೆಚ್ಚಿಗೆ ಮಳೆ ಸುರಿದಿದೆ. ಕುಷ್ಟಗಿ ತಾಲೂಕಿನಲ್ಲಿ ವಾಡಿಕೆ ಮಳೆ ೩೯.೬೦ ಮಿಮಿ ಇದ್ದು ವಾಸ್ತವಿಕವಾಗಿ ೩೭.೪೦ ಮಿಮಿ ಮಳೆ ಸುರಿದು ಶೇ.೫.೫೬ರಷ್ಟು ಮಳೆ ಕೊರತೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮಳೆಗಳು ನಿರಂತರ ಸುರಿಯುತ್ತಿರುವುದರಿಂದ ಆರೋಗ್ಯ ಇಲಾಖೆಯಿಂದ ಎಲ್ಲಾ ರೀತಿಯ ಮುಂಜಾಗ್ರತೆ ವಹಿಸಲಾಗಿದೆ. ಕಾಯಿಸಿ ಆರಿಸಿದ ನೀರು ಕುಡಿಯಲು, ಬಿಸಿಯಾದ ಆಹಾರ ಸೇವನೆ ಮಾಡಲು, ಬೆಚ್ಚಗಿನ ಬಟ್ಟೆ ಧರಿಸಲು, ಸೊಳ್ಳೆ ಪರದೆಗಳನ್ನು ಬಳಸುವುದು ಸೇರಿದಂತೆ ಹಲವಾರು ಸಲಹೆಗಳನ್ನು ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಲಿಂಗರಾಜ ಟಿ. ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಸಭೆ ಪೌರಾಯುಕ್ತರು, ತೋಟಗಾರಿಕೆ, ಪಶುಪಾಲನಾ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ವಿವಿಧ ತಾಲೂಕುಗಳ ತಹಶೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.


Leave a Reply