ಬೆಳಗಾವಿ, ಡಿ.೨೧ : ವಿದ್ಯಾರ್ಥಿ ಜೀವನ ಬಹಳ ಮಹತ್ವ ಹಾಗೂ ಅಮೂಲ್ಯವಾದ ಜೀವನ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿ ಜೀವನ ಸಿಗುವುದಿಲ್ಲ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದು ಸಮಯದ ಸದುಪಯೋಗ ಪಡೆದುಕೊಂಡು ನಿರಂತರ ಪ್ರಯತ್ನದಿಂದ ಸಾಧನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಶ್ರೀ ನಗರದ ಸಂಗೋಳ್ಳಿ ರಾಯಣ್ಣ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ (ಡಿ.೨೧) ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಬೇಕು. ಯಾವುದೇ ವಿಷಯ ಎದುರಾದಾಗ ಚಿಂತನೆ ನಡೆಸಿ ನಿಮ್ಮ ಯೋಚನಾ ಶಕ್ತಿಯ ಮೂಲಕ ಏಕಾಗ್ರತೆಯಿಂದ ವಿದ್ಯಾಭ್ಯಾಸಕ್ಕೆ ಗಮನ ಕೊಡಬೇಕು. ಕಲಿಕೆ ನಿರಂತರ, ಪ್ರತಿ ನಿತ್ಯ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಪಾಠಗಳನ್ನು ಕಲಿಯುತ್ತೇವೆ. ಜೀವನದಲ್ಲಿ ಯಾವುದು ಅಸಾಧ್ಯವಲ್ಲ ನಿರಂತರ ಶ್ರಮ ಪ್ರಯತ್ನದಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಧನೆಗೆ ಪೂರಕವಾಗಿ ಶ್ರಮ ವಹಿಸಿ: ಪ್ರತಿ ವಿಷಯದಲ್ಲಿ ಸಮರ್ಪಕ ಪ್ರತಿಕ್ರಿಯೆ ನೀಡುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಆಗಲಿದೆ ಅದನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು. ಸಾಧನೆ ಸರಳವಾಗಿ ದೊರೆಯುವುದಿಲ್ಲ ನಿರಂತರ ಪ್ರಯತ್ನ, ದಿಟ್ಟತನ ಶ್ರಮ ಎಲ್ಲವೂ ಸಾಧನೆಗೆ ಪೂರಕ ಆಗಲಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ನಿಮ್ಮ ಕನಸು ನನಸಾಗಿಸಲು ಆತ್ಮ ವಿಶ್ವಾಸ ಬಹಳ ಮುಖ್ಯ, ಸಂಗೊಳ್ಳಿ ರಾಯಣ್ಣ ದೇಶ ಪ್ರೇಮ, ತ್ಯಾಗ ಬಲಿದಾನ ಎಲ್ಲವೂ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಬೇಕು ಎಂದು ಹೇಳಿದರು.
ನಂದಗಡದಲ್ಲಿ ಮ್ಯೂಸಿಯಂ ನಿರ್ಮಾಣ: ಈಗಾಗಲೇ ಸಂಗೊಳ್ಳಿಯಲ್ಲಿ ೨೨೧ ಕೋಟಿ ವೆಚ್ಚದಲ್ಲಿ ಸೈನಿಕ ಶಾಲೆ ನಿರ್ಮಾಣವಾಗಿದೆ. ಅದೇ ರೀತಿಯಲ್ಲಿ ೭೫ ಕೋಟೆ ವೆಚ್ಚದಲ್ಲಿ ನಂದಗಡದಲ್ಲಿ ಮ್ಯೂಸಿಯಂ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಸುವರ್ಣ ವಿಧಾನ ಸೌಧದ ಆವರಣದಲ್ಲಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಮೂರ್ತಿ ಪ್ರತಿಷ್ಠಾಪನೆಗೆ ಮುಂದಿನ ವಾರದಲ್ಲಿ ಅಡಿಗಲ್ಲು ಸಮಾರಂಭ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಉನ್ನತ ಶಿಕ್ಷಣ ಸಚಿವರಾದ ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ೧೦ ಕೋಟಿ ರೂ ಅನುದಾನ ಬಳಸಿ ಬೃಹತ ಕಟ್ಟಡ ನಿರ್ಮಿಸಲಾಗಿದೆ. ಇಲ್ಲಿ ನಿರ್ಮಿಸಲಾದ ಮಹಾವಿದ್ಯಾಲಯದಲ್ಲಿ ಇನ್ನೂ ಹೆಚ್ಚು ವಿಧ್ಯಾರ್ಥಗಳು ವ್ಯಾಸಂಗ ಮಾಡುವದಕ್ಜೆ ಸರ್ವ ಕ್ರಮಗಳನ್ನು ತೆಗೆದುಕೊಂಡು ಹೆಚ್ಚಿನ ತಂತ್ರಜ್ಞಾನ ಬಳಸಿಕೊಳ್ಳಬೇಕು. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವದೆ ನಮ್ಮೆಲ್ಲರ ಆಶಯವಾಗಿದೆ. ಬೆಳಗಾವಿಯ ಬಾಗೇವಾಡಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಶ್ವ ವಿದ್ಯಾಲಯದ ಕ್ಯಾಂಪಸ ನಿರ್ಮಾಣಕಾರ್ಯ ತ್ವರಿತಗತಿಯಲ್ಲಿ ನಿರ್ವಹಿಸಲು ಸರ್ವಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಶಾಸಕರಾದ ಅನಿಲ ಬೆನಕೆ ಮಾತನಾಡಿ ಸದರಿ ಮಹಾವಿದ್ಯಾಲಯಕ್ಕೆ ಬೇಕಾದ ಹೆಚ್ಚುವರಿ ಒಂದು ಎಕರೆ ಜಮೀನು ಒದಗಿಸಲು ಕ್ರಮ ವಹಿಸಲಾಹಿಸಲಾಗುವದು ಅಲ್ಲದೇ ಮಹಾವಿದ್ಯಾಲಯದ ವಿಧ್ಯಾರ್ಥಿಗಳಿಗೆ ಅಗತ್ಯದ ಬಸ ಸೌಲಭ್ಯ ಒದಗಿಸುವದರ ಜೊತೆಗೆ ಕಾಲೇಜಿಗೆ ಬೇಕಾದ ಮೂಲಭೂತ ಸೌಯಕರ್ಯ ಒದಗಿಸಲಾಗುವದು ಎಂದರು.
ಶಿಲಾ ಫಲಕ ಅನಾವರಣ: ಇದಕ್ಕೂ ಮುಂಚೆ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಸಹಯೋಗದ ಸಂಗೊಳ್ಳಿ ರಾಯಣ್ಣ ಕಾಲೇಜಿನ ನೂತನ ಕಟ್ಟಡ ಶೀಲಾಫಲಕ ಅನಾವರಣ ಗೊಳಿಸಲಯಿತು.
ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಉನ್ನತ ಶಿಕ್ಷಣ, ಐಟಿ ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಅಶ್ವತನಾರಾಯಣ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ವಾಯುವ್ಯ ಪದವೀಧರರ ಮತ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ವಾಯುವ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಶಿವಾನಂದ ಗೊರನಾಳೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.. ರಾಮಚಂದ್ರ ಗೌಡ ಅವರು ನಿರೂಪಿಸಿದರು.
Gadi Kannadiga > Local News > ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಳ್ಳಿ: ಬಸವರಾಜ ಬೊಮ್ಮಾಯಿ
ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ ಸಮಾರಂಭ ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಳ್ಳಿ: ಬಸವರಾಜ ಬೊಮ್ಮಾಯಿ
Suresh21/12/2022
posted on
