ಕೊಪ್ಪಳ ಮಾರ್ಚ್ ೧೬: ರಾಜ್ಯ ಸರ್ಕಾರದ ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮವು ರೈತರಿಗೆ ತುಂಬಾ ಅನುಕೂಲವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಬಸಪ್ಪ ಆಚಾರ ಅವರು ಹೇಳಿದರು.
ಜಿಲ್ಲೆಗೊಂದು ಗೋಶಾಲೆಯ ಕಾರ್ಯಕ್ರಮದಡಿ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮದ ಸರ್ವೇ ನಂ. ೧೫೧ ರಲ್ಲಿ ೧೦ ಎಕರೆ ಸರ್ಕಾರಿ ಜಮೀನಿನಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಗೋಶಾಲೆಯನ್ನು ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿದಯಾ ಸಂಘ ಕೊಪ್ಪಳ ಇವರ ಸಹಯೋಗದಲ್ಲಿ ಮಾರ್ಚ್ ೧೬ ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವರು ಗೋವಿಗೆ ಪೂಜೆ ಸಲ್ಲಿಸಿ, ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಜಾನುವಾರುಗಳ ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ ೨೦೨೦ ಜಾರಿಗೊಳಿಸಿರುವುದರಿಂದ ವಯಸ್ಸಾದ, ಅನುತ್ಪಾದಕ, ರೋಗಗ್ರಸ್ಥ, ಪ್ರಕೃತಿ ವಿಕೋಪಗಳಿಂದ ಅಂಗವಿಕಲತೆಗೆ ಒಳಗೊಂಡ ಹಾಗೂ ಬಿಡಾಡಿ ಜಾನುವಾರುಗಳ ಪುನರ್ವಸತಿಗಾಗಿ ರಾಜ್ಯ ಸರ್ಕಾರದಿಂದ ಗೋಶಾಲೆಗಳನ್ನು ಸ್ಥಾಪಿಸಲು ತಿರ್ಮಾನಿಸಿ, ರಾಜ್ಯದಲ್ಲಿ ಗೋಸಂಪತ್ತಿನ ರಕ್ಷಣೆಗಾಗಿ ೨೦೨೧-೨೨ನೇ ಸಾಲಿನ ಬಜೆಟ್ನಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಗೋಶಾಲೆಗಳನ್ನು ಸ್ಥಾಪಿಸಲು ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಗೆ ಮಂಜೂರಾದ ಗೋಶಾಲೆಯನ್ನು ಯಲಬುರ್ಗಾ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.
ಬೇವೂರು ಗೋಶಾಲೆಯಲ್ಲಿ ಸದ್ಯ ೫೦ ಜಾನುವಾರುಗಳ ಶೆಡ್ ನಿರ್ಮಿಸಲಾಗಿದ್ದು, ನರೇಗಾದಡಿ ಮತ್ತೊಂದು ಶೆಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಈ ಗೋಶಾಲೆಯ ಬಗ್ಗೆ ರೈತರಿಗೆ ಹೆಚ್ಚು ಅರಿವು ಮೂಡಿಸಲು ಪಶು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕೊಪ್ಪಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ ಹೆಚ್.ನಾಗರಾಜ ಅವರು ಮಾತನಾಡಿ, ಗೋಶಾಲೆಯ ಮೂಲಭೂತ ಸೌಕರ್ಯಗಳಾದ ಕೊಟ್ಟಿಗೆ ನಿರ್ಮಾಣ, ಮೇವಿನ ಸಂಗ್ರಹಣೆಗಾಗಿ ಶೇಡ್, ನೀರಿನ ತೊಟ್ಟಿಗಳ ನಿರ್ಮಾಣ, ಬೋರ್ ವೆಲ್ ಕೊರೆಸುವುದು, ಸೆಕ್ಯೂರಿಟಿ ರೂಮ್, ಚೈನ್ ಲೈನ್ ಫೆನ್ಸಿಂಗ್, ವಿದ್ಯುತ್ ಸಂಪರ್ಕ ಹಾಗೂ ಇನ್ನಿತರೇ ಅವಶ್ಯಕ ಕಾಮಗಾರಿಗಳನ್ನು ವೆಚ್ಚ ರೂ. ೫೪ ಲಕ್ಷಗಳಲ್ಲಿ ಕೊಪ್ಪಳ ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಬೇವೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸೋಮಲಿಂಗಪ್ಪ ಮುದಿಯಪ್ಪ ಕೊಳಜಿ, ಯಲಬುರ್ಗಾ ತಹಶೀಲ್ದಾರರಾದ ವಿಠ್ಠಲ್ ಚೌಗಲಾ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದಾರ, ರಾಯಚೂರು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ (ರಾಜ್ಯ ವಲಯ) ಜಂಟಿ ನಿರ್ದೇಶಕರಾದ ಡಾ ವಿ.ಕೃಷ್ಣಮೂರ್ತಿ, ಕೊಪ್ಪಳ ಪಶು ಆಸ್ಪತ್ರೆಯ (ಆಡಳಿತ) ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ ಡಿ.ಮೊಹನ, ಯಲಬುರ್ಗಾ ಪಶು ಆಸ್ಪತ್ರೆಯ ಪ್ರಭಾರಿ ಸಹಾಯಕ ನಿರ್ದೇಶಕರು ಮತ್ತು ಬೇವೂರು ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿಗಳಾದ ಡಾ ಪ್ರಕಾಶ ಚೂರಿ ಸೇರಿದಂತೆ ಹಲವು ಗಣ್ಯರು, ಜನಪ್ರತಿನಿಧಿಗಳು, ಪಶು ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > State > ಬೇವೂರಿನಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಗೋಶಾಲೆ ಉದ್ಘಾಟನೆ ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮ ರೈತರಿಗೆ ಅನುಕೂಲ : ಹಾಲಪ್ಪ ಆಚಾರ್
ಬೇವೂರಿನಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಗೋಶಾಲೆ ಉದ್ಘಾಟನೆ ಜಿಲ್ಲೆಗೊಂದು ಗೋಶಾಲೆ ಕಾರ್ಯಕ್ರಮ ರೈತರಿಗೆ ಅನುಕೂಲ : ಹಾಲಪ್ಪ ಆಚಾರ್
Suresh16/03/2023
posted on

More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023