ಕುಷ್ಟಗಿ :- ಪಟ್ಟಣದ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಗಣೇಶ ಚತುರ್ಥಿಯ ಹಬ್ಬದ ಸಲುವಾಗಿ ವಿದ್ಯಾನಗರದ ಮಕ್ಕಳಿಗೆ ಪರಿಸರ ಸ್ನೇಹಿ ಗಣೇಶನ (ಮಣ್ಣಿನ ಗಣೇಶನ) ಮೂರ್ತಿ ವಿತರಣೆ ಕಾರ್ಯಕ್ರಮವು ಭಾನುವಾರ ನಡೆಯಿತು.
ಗಣೇಶ ವಿಗ್ರಹ ವಿತರಿಸಿ ಮಾತನಾಡಿದ ಇನ್ನರ್ ವ್ಹೀಲ್ ಅಧ್ಯಕ್ಷೆ ಶಾರದಾ ಶೆಟ್ಟರ್, ಜಲಚರ ಸಂರಕ್ಷಣೆ, ಪರಿಸರ ಕಾಳಜಿ ಇಂದಿನ ಮಕ್ಕಳಿಗೆ ಬೆಳೆಯಲಿ. ಪಿಓಪಿ ಗಣೇಶ ವಿಗ್ರಹ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಅನೇಕ ರಾಸಾಯನಿಕ ಬಣ್ಣಗಳಿಂದ ಮಾಡಲ್ಪಟ್ಟ ಪಿಓಪಿ ವಿಗ್ರಹ ನೀರಲ್ಲಿ ಕರಗದೇ ತ್ಯಾಜ್ಯವಾಗುತ್ತದೆ. ಆದ್ದರಿಂದ ಮಣ್ಣಿನ ವಿಗ್ರಹ ಬಳಸಿ ಎಂದು ತಿಳಿಸುವುದರ ಮೂಲಕ ಈ ಪರಂಪರೆ ಉಳಿಸಲಿ ಎನ್ನುವ ಉದ್ದೇಶದಿಂದ ನೀಡಲಾಗಿದೆ. ಪೂಜೆಗೆ ಬಣ್ಣದ ಆಕರ್ಷಣೆ ಬೇಕಿಲ್ಲ ಶ್ರದ್ಧೆ, ಭಕ್ತಿ ಇದ್ದರೆ ಸಾಕು ಎಂದು ಮಕ್ಕಳಿಗೆ ಅರಿವು ಮೂಡಿಸಲಾಯಿತು. ಈ ರೀತಿ ಪ್ರತೀ ಮನೆಯಲ್ಲೂ ಅನುಸರಿಸಿದರೆ ಪರಿಸರ ಮಾತೆಗೆ ನಾವು ಮತ್ತೊಂದು ಉಡುಗೊರೆ ನೀಡುವುದು ಬೇಕಿಲ್ಲ…. “ನಿಸರ್ಗ ರಕ್ಷಣೆ ನಮ್ಮಲ್ಲರ ಹೊಣೆ” ಆಗಬೇಕಿದೆ ಎಂದರು
ಈ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಂದನಾ ಗೋಗಿ, ಉಪಾಧ್ಯಕ್ಷರು ಸುವರ್ಣ ಬಳೂಟಗಿ, ಸಹ ಕಾರ್ಯದರ್ಶಿ ಶಿಲ್ಪಾ ಸುಂಕದ್ ಹಾಗೂ ISO ಶರಣಮ್ಮ ಅಂಗಡಿ ಭಾಗವಹಿಸಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ