This is the title of the web page
This is the title of the web page

Please assign a menu to the primary menu location under menu

State

ಶ್ರೀ ಹುಲಿಗೆಮ್ಮ ದೇವಿ ಜಾತ್ರೋತ್ಸವ: ಸಕಲ ಸಿದ್ಧತೆ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಸೂಚನೆ


ಕೊಪ್ಪಳ ಮೇ ೧೦ : ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ೨೦೨೩ರ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರ ಅಧ್ಯಕ್ಷತೆಯಲ್ಲಿ ಮೇ ೦೯ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈ ವೇಳೆ ಅವರು ಮಾತನಾಡಿ, ಮೇ ೧೨ರಿಂದ ಮೇ ೧೬ರವರೆಗೆ ನಡೆಯಲಿರುವ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಬೇಕು ಹಾಗೂ ಹುಲಿಗಿ ಗ್ರಾಮದ ರಸ್ತೆ ಸೇರಿದಂತೆ ಪ್ರಮುಖ ಸ್ಥಳಗಳ ಸ್ವಚ್ಛತೆಗೂ ಸಹ ಗ್ರಾಪಂನಿಂದ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಕುಡಿವ ನೀರಿನ ವ್ಯವಸ್ಥೆ ಮಾಡಿ: ಜಾತ್ರೆಗೆ ಆಗಮಿಸಲಿರುವ ಭಕ್ತಾಧಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಈ ನಿಟ್ಟಿನಲ್ಲಿ ದೇವಸ್ಥಾನದಲ್ಲಿ ಟ್ಯಾಂಕರ್‌ಗಳ ಜೊತೆಗೆ ಬಾಡಿಗೆ ರೂಪದಲ್ಲಿ ಟ್ಯಾಂಕರ್‌ಗಳನ್ನು ಪಡೆದು ಜನರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆಯಾಗದಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಹುಲಿಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದರು.
ನಿರಂತರ ವಿದ್ಯುತ್ ಸರಬರಾಜು ಆಗಲಿ: ಜಾತ್ರಾ ಕಾಲದಲ್ಲಿ ಹೆಚ್ಚುವರಿ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ಒಂದು ವಿಶೇಷ ತಂಡ ರಚಿಸಬೇಕು. ೨ ರಿಂದ ೩ ಟಿಸಿಗಳನ್ನು ಕಾಯ್ದಿರಿಸಿಕೊಳ್ಳಬೇಕು. ನೀರಿನ ಸರಬರಾಜಿಗೆ ಹಾಗೂ ಬೆಳಕಿನ ವ್ಯವಸ್ಥೆಗೆ ಅಡಚಣೆಯಾಗದಂತೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ರಾತ್ರಿ ಸಮಯದಲ್ಲಿ ವಿದ್ಯುತ್ ಸ್ಥಗಿತಗೊಳ್ಳದಂತೆ ಜೆಸ್ಕಾಂ ಮತ್ತು ದೇವಸ್ಥಾನದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಹೇಳಿದರು.
ಆರೋಗ್ಯ ಕೇಂದ್ರದ ವ್ಯವಸ್ಥೆ ಮಾಡಿ: ಜಾತ್ರೆಗೆ ಆಗಮಿಸಲಿರುವ ಭಕ್ತಾಧಿಗಳ ಆರೋಗ್ಯದ ಹಿತದೃಷ್ಠಿಯಿಂದ ಜಾತ್ರೆ ಸಮಯದಲ್ಲಿ ಔಷಧಿಗಳೊಂದಿಗೆ ಎರಡು ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸುವುದಲ್ಲದೇ ಎರಡು ಆಂಬುಲೆನ್ಸಗಳನ್ನು ಕಾಯ್ದಿರಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಹುಲಿಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.
ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಿ: ಜಾತ್ರಾಗೆ ಆಗಮಿಸುವ ಭಕ್ತಾಧಿಗಳ ವಾಹನಗಳ ನಿಲುಗಡೆಗಾಗಿ ದ್ವಿಚಕ್ರ, ನಾಲ್ಕು ಚಕ್ರ ಹಾಗೂ ಭಾರಿ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಗಾಗಿ ಪೊಲೀಸ್ ಅಧಿಕಾರಿಗಳೊಂದಿಗೆ ಕೂಡಿ ದೇವಸ್ಥಾನದ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.
ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತೆರಳಿದ್ದು, ಲಭ್ಯವಿರುವ ಪೊಲೀಸ್ ಸಿಬ್ಬಂದಿಗಳೊಂದಿಗೆ ಗೃಹರಕ್ಷ ದಳದವರನ್ನು ನೇಮಿಸಿ ಜಾತ್ರೆಗೆ ಅಗತ್ಯ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ನದಿಗೆ ನೀರು ಒದಗಿಸಿ: ಹುಲಿಗೆ ಜಾತ್ರಾ ಸಮಯದಲ್ಲಿ ತುಂಗಭದ್ರ ಜಲಾಶಯದಿಂದ ನದಿಗೆ ನೀರು ಬಿಡುವಂತೆ ತುಂಗಭದ್ರ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಬಸ್ ವ್ಯವಸ್ಥೆ ಕಲ್ಪಿಸಿ: ಜಾತ್ರೆಗೆ ವಿವಿಧೆಡೆಯಿಂದ ಭಕ್ತಾಧಿಗಳು ಆಗಮಿಸಲಿದ್ದು, ಕೆ.ಕೆ.ಆರ್.ಟಿ.ಸಿ ಯವರು ಹೆಚ್ಚಿನ ಸಂಖ್ಯೆಯ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ರೈಲು ನಿಲುಗಡೆಗೆ ಕ್ರಮ ವಹಿಸಿ: ಜಾತ್ರಾ ಸಮಯದಲ್ಲಿ ತಡೆ ರಹಿತ ರೈಲುಗಳನ್ನು ಮುನಿರಾಬಾದ್ ರೈಲು ನಿಲ್ದಾಣದಲ್ಲಿ ನಿಲುಗಡೆ ಮತ್ತು ಗೂಡ್ಸ್ ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ತಡೆ ಕುರಿತಂತೆ ದೇವಸ್ಥಾನದ ಅಧಿಕಾರಿಗಳು ಹುಬ್ಬಳ್ಳಿ ರೈಲ್ವೆಗೆ ಪತ್ರ ಬರೆದು ಕ್ರಮ ಕೈಗೊಳ್ಳಬೇಕು ಎಂದರು.
ಪ್ರಾಣಿ ಬಲಿ ನಿಷೇಧ: ಕ್ಷೇತ್ರದಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದ್ದು, ಜಾತ್ರಾ ಅವಧಿಯಲ್ಲಿ ಯಾವುದೇ ರೀತಿಯ ಪ್ರಾಣಿಬಲಿಯಾಗದಂತೆ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೊಪ್ಪಳ ಪೊಲೀಸ್ ಉಪ ಅಧೀಕ್ಷಕರು, ತಹಶೀಲ್ದಾರರು, ಆರಕ್ಷಕ ಉಪ ನಿರೀಕ್ಷಕರು, ಪಶು ಸಂಗೋಪನೆ ಇಲಾಖೆ ಮತ್ತು ದೇವಸ್ಥಾನದ ಅಧಿಕಾರಿಗಳ ತಂಡವು ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮದ್ಯಪಾನ ನಿಷೇಧ: ಜಾತ್ರಾ ಸಮಯದಲ್ಲಿ ಹುಲಿಗಿ ಗ್ರಾಮದಲ್ಲಿ ಮದ್ಯಪಾನ, ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಈ ನಿಟ್ಟಿನಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಕ್ರಮಕ್ಕೆ ಸೂಚನೆ: ದೇವಸ್ಥಾನದ ಮಹಾರಥಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅರ್ಹತಾ ಪ್ರಮಾಣಪತ್ರ ಪಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಜಾತ್ರಾ ಸಮಯದಲ್ಲಿ ಅಗ್ನಿಶಾಮಕ ವಾಹನವನ್ನು ಕಾಯ್ದಿರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ದೇವಸ್ಥಾನದ ಆಡಳಿತಾಧಿಕಾರಿಗಳು ಆಗಿರುವ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಡಿಎಸ್ಪಿ ಶರಣಬಸಪ್ಪ, ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಸುತಗುಂಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply