ಬೆಳಗಾವಿ; ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಳೆದ ಹಲವು ದಿನಗಳಿಂದ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡು ಬರುತ್ತಿದೆ. ಉಪಜಾತಿಗಳನ್ನು ಒಗ್ಗೂಡಿಸುವುದರ ಜೊತೆಗೆ ಎಲ್ಲಾ ವೀರಶೈವ ಲಿಂಗಾಯತ ಸಮುದಾಯದ ಉಪಜಾತಿಗಳ ಮಕ್ಕಳಿಗೆ, ಬಡವರಿಗೆ ಶಿಕ್ಷಣ, ಉದ್ಯೋಗ ಮತ್ತು ಸರ್ಕಾರದ ಸವಲತ್ತುಗಳು ಸಿಗುವಂತಾಗಲಿ ಎಂಬುವುದು ಅಖಂಡ ವೀರಶೈವ ಲಿಂಗಾಯತರ ಸಂಕಲ್ಪ ಆಗಿದೆ. ಈ ನಿಟ್ಟಿನಲ್ಲಿ ಮಠಾಧೀಶರು, ರಾಜಕೀಯ ಮುಖಂಡರು ರಾಜ್ಯ ಸರ್ಕಾರದ ಮೇಲೆ ಒತ್ತಡ ತರಬೇಕು ಮತ್ತು ಬೆಳಗಾವಿ ಚಳಿಗಾಲದ ಅಧಿವೇಶನ ಸಂಧರ್ಬದಲ್ಲಿ 2ಎ ಮೀಸಲಾತಿ ಘೋಷಣೆ ಮಾಡಬೇಕು ಎನ್ನುವುದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಮನವಿ ಮಾಡಿಕೊಳ್ಳುತ್ತದೆ.
ಈ ಸಂಬಂಧ ವೇದಿಕೆಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಅವರು ಸರ್ಕಾರಕ್ಕೆ ಮನವಿ ಒಂದನ್ನು ಸಲ್ಲಿಸಿದ್ದಾರೆ.
ಸಮಾಜದಲ್ಲಿ ಹಿಂದೆ ನಡೆದ ಹಲವಾರು ತಪ್ಪುಗಳಲ್ಲಿ ಒಂದಾದ ಉಪಜಾತಿಗಳನ್ನು ಒಡೆದು ಆಳಿದ ಬಗ್ಗೆ ಪ್ರತಿಯೊಬ್ಬರೂ ಅರಿತು ಕೊಂಡಿದ್ದು ಮುಂದೆ ಯಾವುದೇ ತಪ್ಪುಗಳು ಆಗದಂತೆ ಈಗಿನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು, ವೀರಶೈವ ಲಿಂಗಾಯತ ಶಾಸಕರು ಮತ್ತು ಮಂತ್ರಿಗಳು ಅಖಂಡ ವೀರಶೈವ ಲಿಂಗಾಯತ ಸಮುದಾಯದ ಬೆಂಬಲಕ್ಕೆ ನಿಲ್ಲಬೇಕಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.