ಬೆಳಗಾವಿ: ಬಸವಣ್ಣನವರ ವಚನ ಸಂದೇಶ ಸಾರುವ ಉದ್ದೇಶದಿಂದ ಬಸವ ಜಯಂತಿ ನಿಮಿತ್ತ ಚನ್ನಮ್ಮ ವೃತ್ತದಿಂದ ನಗರದ ವಿವಿಧ ಗಲ್ಲಿಯಲ್ಲಿ ಜಗಜ್ಯೋತಿ ಬಸವೇಶ್ವರ ಉತ್ಸವ ಜ್ಯೋತಿ ಮೆರವಣಿಗೆಯನ್ನು ಭಾನುವಾರ 4 ರಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ .
ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಬಸವ ಉತ್ಸವ ಸಮಿತಿ ಸದಸ್ಯರು ವಿಶ್ವದಲ್ಲಿ ಅಶಾಂತಿ ಮೂಡುತ್ತಿದೆ, ಯುದ್ಧ ಸನ್ನಿವೇಶಗಳು ಎದುರಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಬಸವ ಸಂದೇಶಗಳು ಪ್ರಸಾರ ವಾಗಬೇಕಿದೆ. ಜಗತ್ತಿನಲ್ಲಿ ಆ ಮೂಲಕ ಶಾಂತಿ ನೆಲೆಸಬೇಕು ಎಂಬ ಉದ್ದೇಶದಿಂದ ಬಸವಣ್ಣನವರ ಉತ್ಸವದ ನಿಮಿತ್ತ ಕಳೆದ ಒಂದು ವಾರದಿಂದ ವಿವಿಧ ಸಂಘಟನೆಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು. ಈಗ ಈ ಬೃಹತ್ ಮೆರವಣಿಗೆಯನ್ನು ಎಲ್ಲ ಸಂಘಟನೆಗಳು ಕೂಡಿ ಹಮ್ಮಿಕೊಳ್ಳಲಾಗಿದೆ ಎಂದರು.
ಜಗಜ್ಯೋತಿ ಬಸವೇಶ್ವರ ಉತ್ಸವ ಜ್ಯೋತಿ ಮೆರವಣಿಗೆಗೆ ವಿವಿಧ ಮಠಾದೀಶರು ಚಾಲನೆ ನೀಡಲಿದ್ದಾರೆ. ಸಾಂಸ್ಕೃತಿಕ ನಾಯಕ ಬಸವಣ್ಣನವರ ಮತ್ತು ಬಸವಾದಿ ಶರಣರ ವಚನ ಸಂದೇಶ ಸಾರುವ ಪ್ರಚುರಪಡಿಸುವದೇ ಮೆರವಣಿಗೆಯ ಉದ್ದೇಶವಾಗಿದೆ.
ಸಂಸ್ಕೃತಿ ಕಲಾ ವಾದ್ಯ, ಮಕ್ಕಳ ಮೂಲಕ ಬಸವಣ್ಣನವರ ವಚನಗಳ ಸಂದೇಶದ ಘೋಷ ವಾಕ್ಯಗಳು, ವಾದ್ಯಮೇಳ , ವಚನ ಸಂಗೀತ ಮೆರವಣಿಗೆಯ ಆಕರ್ಷಣೆ ಆಗಲಿವೆ. ಚನ್ನಮ್ಮ ವೃತ್ತದಿಂದ ಬಸವಣ್ಣನವರ ಮೂರ್ತಿ ರೂಪಕ ವಾಹನ ಹೊರಡಲಿದೆ. 30 ಕ್ಕೂ ಹೆಚ್ಚು ಮಠಾದೀಶರು, ವಿವಿಧ ಪಕ್ಷಗಳ ಜನಪ್ರತಿನಿಧಿಗಳು, 15 ಕ್ಕೂ ಹೆಚ್ಚು ಸಂಘ- ಸಂಸ್ಥೆಗಳು, ಬೆಳಗಾವಿ ಸೇರಿದಂತೆ ಗ್ರಾಮೀಣ ಭಾಗದ ಬಸವ ಭಕ್ತರು ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ ಮತ್ತು ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ರತ್ನಪ್ರಭಾ ಬೆಲ್ಲದ ಅವರುಗಳು ಮಾತನಾಡಿ ಸರಳ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದವರು ವಚನಕಾರ ಬಸವಣ್ಣನವರು, ಬಸವ ಸಂದೇಶ ಜಗತ್ತಿಗೆ ತಿಳಿಸಬೇಕಿದೆ. ಹೀಗಾಗಿ ಎಲ್ಲಾ ಲಿಂಗಾಯತ ಸಂಘಟನೆಗಳು ಹಾಗೂ ಒಳಪಂಗಡಗಳು ಜತೆಗೂಡಿ ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ಆಚರಣೆ ಮೂಲಕ ವಚನ ಸಂದೇಶ ಸಾರುವ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಲಿಂಗಾಯತ ಸಂಘಟನೆಗಳು, ಒಳಪಂಗಡಗಳು ಬೇರೆಯಾಗಿವೆ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡಿದೆ. ಹೀಗಾಗಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸಬೇಕಿದೆ. ಬಸವಾದಿ ಶರಣರ ಹಾದಿಯಲ್ಲಿ ಸಾಗಿದ ಶರಣ ಪಂಗಡಗಳು ಜತೆಗೂಡಿ ಈ ಉತ್ಸವ ಮಾಡುತ್ತಿದ್ದೆವೆ. ಮಠಾದೀಶರು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ 25000 ಕ್ಕೂ ಹೆಚ್ಚು ಬಸವ ಭಕ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಳಲಿದ್ದಾರೆ ಎಂದು ತಿಳಿಸಿದರು.
ಕೆಎಲ್ ಇ ಕಾರ್ಯಾಧ್ಯಕ್ಷರಾದ ಪ್ರಭಾಕರ್ ಕೋರೆ ಅವರು ಈ ಮೆರವಣಿಗೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ಸುದ್ಧಿಗೋಷ್ಠಿಯಲ್ಲಿ ಈರಣ್ಣ ದಯನ್ನವರ, ಅಶೋಕ್ ಮಳಗಲಿ, ಮಲಗೌಡ ಪಾಟೀಲ , ಮುರುಘೇಂದ್ರ ಪಾಟೀಲ, ಶಂಕರ ಗುಡಸ , ಕಿರಣ ಅಗಡಿ, ಗುಂಡು ಪಾಟೀಲ, ಆರ್.ಪಿ. ಪಾಟೀಲ,ರಮೇಶ ತುಬಚಿ, ಮುರಿಗೆಪ್ಪ ಬಾಳಿ,ಪ್ರಭು ಪಾಟೀಲ, ಸತೀಶ ಚೌಗಲಾ ಸೇರಿ ಲಿಂಗಾಯತ ಮುಖಂಡರು ಹಾಗೂ ಇತರರು ಇದ್ದರು.