ಕೊಪ್ಪಳ ಫೆ.27 (ಕರ್ನಾಟಕ ವಾರ್ತೆ): ಪತ್ರಕರ್ತ ಪರಿವಾರದಿಂದ ಬಂದಿರುವ ನಾನು ಭಾರತದ ಆಡಳಿತ ಸೇವೆಗೆ ಸೇರಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರು ಹೇಳಿದರು.
ಜಿಪಂನ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿ ಫೆ. 27ರಂದು ಜಿಲ್ಲೆಯ ಪತ್ರಕರ್ತರೊಂದಿಗೆ ಮೊದಲನೇ ಭಾರಿಗೆ ಸಂವಾದ ನಡೆಸಿ ಮಾತನಾಡಿದ ಅವರು,
ನಮ್ಮ ತಂದೆಯವರು ಹಿಂದಿ ಭಾಷೆಯ ಪತ್ರಿಕೆಯೊಂದರಲ್ಲಿ ಹಲವಾರು ದಶಕಗಳ ಕಾಲ ಜರ್ನಲಿಸ್ಟ್ ಆಗಿ ಸೇವೆ ಸಲ್ಲಿಸಿದ್ದಾರೆ. ಆಗಿನ ಪತ್ರಿಕಾರಂಗದ ಪರಿಸ್ಥಿತಿಯಂತೆ
ಅತಿ ಕಡಿಮೆ ಸಂಬಳವಿದ್ದರು ಸಹ ನಮ್ಮ ತಂದೆಯವರು ಸಾಮಾಜಿಕ ಕಾಳಜಿಯೊಂದಿಗೆ, ಬದ್ಧತೆಯೊಂದಿಗೆ ಕೆಲಸ ಮಾಡಿದರು. ಅವರ ಸಮಾಜಮುಖಿ ಗುಣಗಳು, ಅವರು ಜೀವನದಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯಗಳು ನನಗೆ ಈಗಲೂ ದಾರಿದೀಪವಾಗಿವೆ ಎಂದರು.
ಸದಾಕಾಲ ಸುದ್ದಿ ಸಮಾಚಾರದಲ್ಲಿ ಮಗ್ನರಾಗಿರುತ್ತಿದ್ದ ನಮ್ಮ ತಂದೆಯವರ ಪಾಡನ್ನು ಮನೆಯಲ್ಲಿ ಹತ್ತಿರದಿಂದ ಕಂಡಿರುವ ನನಗೆ ಪತ್ರಕರ್ತರ ಬದುಕು-ಭಾವನೆಗಳ ಬಗ್ಗೆ ಸದಾಕಾಲ ಗೌರವ ಇದೆ, ಇರುತ್ತದೆ ಎಂದು ತಿಳಿಸಿದರು.
ವಿದ್ಯಾಭ್ಯಾಸಕ್ಕಾಗಿ ತಾವು
ಡೆಹ್ರಾಡೂನದಲ್ಲಿದ್ದಾಗ 10 ಜನ ಪತ್ರಕರ್ತರೊಂದಿಗೆ ಒಡನಾಟ ಹೊಂದಿದ್ದಾಗಿ ಸಹ ತಿಳಿಸಿದರು. ಸುದ್ದಿಗಾಗಿ ಪ್ರತಿ ನಿತ್ಯ ಒಂದಿಲ್ಲೊಂದು ಒತ್ತಡದಲ್ಲಿರುವ ಪತ್ರಕರ್ತರ ದಿನಚರಿಯನ್ನು ಹತ್ತಿರದಿಂದ ನೋಡಿದ್ದಾಗಿ ಸಿಇಓ ಅವರು ಹೇಳಿದರು.
ಪ್ರತಿ ತಿಂಗಳು ಸಭೆ:- ಪತ್ರಿಕಾರಂಗವು ಸಂವಿಧಾನದ ನಾಲ್ಕನೆಯ ಪ್ರಮುಖ ಅಂಗವಾಗಿದ್ದು, ಈ ಹಿನ್ನೆಲೆಯಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚಿದೆ. ಸದಾಕಾಲ ಜನರ ಮಧ್ಯೆನೇ ಇದ್ದು, ಕಾಣುವ ಜನರ ನೋವು ನಲಿವನ್ನು ಜಿಲ್ಲೆಯ ಪತ್ರಕರ್ತರು ತಮಗೆ ಮುಕ್ತವಾಗಿ ತಿಳಿಸಬಹುದು ಎಂದರು. ತಮ್ಮ ಮೊಬೈಲ್ ಸಂಖ್ಯೆಗೆ ಯಾವುದೇ ಸಮಯದಲ್ಲಿ ಕರೆ ಮಾಡಿ ಸಲಹೆ ಮಾಡಬಹುದಾಗಿದೆ ಎಂದರು. ಪತ್ರಕರ್ತರು ಸಹಮತ ಸೂಚಿಸಿದಲ್ಲಿ ಪ್ರತಿ ತಿಂಗಳು ಪತ್ರಕರ್ತರೊಂದಿಗೆ ಸಂವಾದ ಏರ್ಪಡಿಸುವುದಾಗಿ ಅವರು ಹೇಳಿದರು.
ಅಭಿವೃದ್ದಿಗೆ ಸಹಕಾರವಿರಲಿ:- ಸಂವಾದದಲ್ಲಿ ಪತ್ರಕರ್ತರು ಜಿಲ್ಲೆಯ ಕೆಲವು ಸಮಸ್ಯೆಗಳ ಬಗ್ಗೆ ಸಿಇಓ ಅವರಿಗೆ ತಿಳಿಸಿದರು. ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಿಇಓ ಅವರು, ಜಿಲ್ಲೆಯಲ್ಲಿ ಏನೇ ಸಮಸ್ಯೆ ಇದ್ದರು ಅದನ್ನು ಸರಿಪಡಿಸಲು
ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು. ಜಿಲ್ಲೆಯ ಅಭಿವೃದ್ದಿ ವಿಷಯಗಳಿಗೆ ಪತ್ರಕರ್ತರ ಸಹಕಾರವಿರಲಿ ಎಂದರು.
ನಾನಾ ಯೋಜನೆಗಳು:- ಮಾರ್ಚ 8ರ ಮಹಿಳಾ ದಿನದಂದು ಜಿಪಂನಿಂದ ವಿಭಿನ್ನವಾಗಿ ಕಾರ್ಯಕ್ರಮ ಮಾಡುವ ಯೋಚನೆ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಸ್ವೀಪ್ ಚಟುವಟಿಕೆಗಳನ್ನು ಚುರುಕುಗೊಳಿಸಲಾಗುವುದು ಎಂದು ಸಿಇಓ ಅವರು ತಿಳಿಸಿದರು. ಇಂತಹ ಇನ್ನು ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಸಮೀರ್ ಮುಲ್ಲಾ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಇದ್ದರು.