ಕೊಪ್ಪಳ ಜನವರಿ ೩೦ : ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ನಿಮಿತ್ತ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ನ್ಯಾಯಾಂಗ ಇಲಾಖೆ ನೌಕರರ ಸಂಘ ಮತ್ತು ನಗರಸಭೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜನವರಿ ೩೦ ರಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಜಿಲ್ಲಾ ನ್ಯಾಯಾಲಯದ ಸ್ವಚ್ಛತೆಗೆ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ನ್ಯಾಯಾಲಯದ ನೌಕರರು ಕೈಜೋಡಿಸಿದರು.
ಸ್ವಚ್ಛತಾ ಕಾರ್ಯಕ್ರಮಕ್ಕೆ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್. ರೇಖಾ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನ್ಯಾಯಾಲಯ ಆವರಣ ಸ್ವಚ್ಛವಾಗಿರಬೇಕು. ಸಾರ್ವಜನಿಕರು ಮತ್ತು ಕಕ್ಷಿದಾರರೊಂದಿಗೆ ನೇರ ಸಂಪರ್ಕ ಹೊಂದಿರುವ ನ್ಯಾಯಾಲಯ ಆವರಣ ಮಾದರಿಯಾಗಿರಬೇಕು. ನಗರಸಭೆ, ಪುರಸಭೆ ಅಥವಾ ಸಾರ್ವಜನಿಕ ಸಿಬ್ಬಂದಿಗಳಷ್ಟೆ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು ಎಂದು ಕಾಯುವುದು ಸರಿಯಲ್ಲ. ಪ್ರತಿಯೊಬ್ಬರೂ ತಮ್ಮ ಮನೆ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ಮಾತನಾಡಿ, ಪರಿಸರ ನಾಶದಿಂದ ಜೀವ ಸಂಕುಲ ನಾಶವಾಗುತ್ತದೆ. ಪ್ರತಿಯೊಬ್ಬರು ಪರಿಸರ ಕಾಳಜಿ ಜೊತೆ ಅರಣ್ಯ ಸಂರಕ್ಷಣೆ, ನೈರ್ಮಲ್ಯವನ್ನು ಕಾಪಾಡುವುದು ಅತ್ಯವಶ್ಯಕವಾಗಿದ್ದು, ನಾವು ವಾಸಿಸುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ದಿಸೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ಪ್ರತಿದಿನ ನಡೆಯಬೇಕು. ಇಂತಹ ಸ್ವಚ್ಛತಾ ಕಾರ್ಯಕ್ರಮಗಳು ಪ್ರತಿದಿನ ನಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎ.ವಿ ಕಣವಿ, ಕಾರ್ಯದರ್ಶಿಗಳಾದ ಬಿ.ವಿ ಸಜ್ಜನ ಸೇರಿದಂತೆ ವಕೀಲರ ಸಂಘದ ಮತ್ತು ನ್ಯಾಯಾಂಗ ಇಲಾಖೆ ನೌಕರರ ಸಂಘದ ಸರ್ವ ಸದಸ್ಯರು ಹಾಗೂ ನ್ಯಾಯಾಲಯದ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Gadi Kannadiga > State > ಜಿಲ್ಲಾ ನ್ಯಾಯಾಲಯದ ಸ್ವಚ್ಛತೆಗೆ ಕೈಜೋಡಿಸಿದ ನ್ಯಾಯಾಧೀಶರು ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ
ಜಿಲ್ಲಾ ನ್ಯಾಯಾಲಯದ ಸ್ವಚ್ಛತೆಗೆ ಕೈಜೋಡಿಸಿದ ನ್ಯಾಯಾಧೀಶರು ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ
Suresh30/01/2023
posted on
