ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಪಥದತ್ತ: ನಲಿನ್ ಅತುಲ್
ಕೊಪ್ಪಳ ಸೆಪ್ಟೆಂಬರ್ 17 :- ಕೊಪ್ಪಳ ಜಿಲ್ಲೆ ಸೇರಿದಂತೆ ಸುತ್ತಲಿನ ವಿವಿಧ ಕೆಲವು ಜಿಲ್ಲೆಗಳನ್ನೊಳಗಂಡ ಈ ಕಲ್ಯಾಣ ಕರ್ನಾಟಕ ಪ್ರದೇಶವು ಶೈಕ್ಷಣಿಕ ಮತ್ತು ಔದ್ಯೋಗಿಕ ಸೇರಿದಂತೆ ಬೇರೆ ಬೇರೆ ರಂಗಗಳಲ್ಲಿ ದಿನೇದಿನೆ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
76ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೆಪ್ಟೆಂಬರ್ 17ರಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಈ ಪ್ರದೇಶವು ಹೈದ್ರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು. 1956ರವರೆಗೆ ಹೈದ್ರಾಬಾದ್ ರಾಜ್ಯದ ವ್ಯಾಪ್ತಿಗೆ ಒಳಪಟ್ಟಿತ್ತು. ಸಂವಿಧಾನದ 371ಜೆ ವಿಶೇಷ ಸೌಲಭ್ಯ ದೊರೆತ ನಂತರ ಈ ಭಾಗದಲ್ಲಿ ಹೊಸ ಆಶಾಕಿರಣ ಮೂಡಿತು. 2013ರ ನಂತರ ಉದ್ಯೋಗ ಮತ್ತು ಶಿಕ್ಷಣದಲ್ಲಿ ವಿಶೇಷ ಮೀಸಲು ಸೌಲಭ್ಯ ದೊರೆಯಿತು. 2013ರಿಂದ ಇಲ್ಲಿವರೆಗೆ ಶೈಕ್ಷಣಿಕವಾಗಿ ಈ ಪ್ರದೇಶವು ಹೊಸತನ ಕಂಡಿದೆ. ಮೀಸಲು ಸೌಕರ್ಯ ಪಡೆದುಕೊಂಡು ಸಾವಿರಾರು ವಿದ್ಯಾರ್ಥಿಗಳು ನೌಕರಿ ಗಿಟ್ಟಿಸಿ ಅನೇಕ ಕುಟುಂಬಗಳು ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ತಿಳಿಸಿದರು.
ಕಾಯಕ ಸಂಸ್ಕೃತಿಗೆ ಹೆಸರಾದ ಪ್ರದೇಶ ಇದಾಗಿದೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದುಡಿಯುವ ವರ್ಗದ ಜನರ ಶ್ರಮ ಸಂಸ್ಕೃತಿಯು ಮಾದರಿಯಾಗಿದೆ. ಮಸಾರಿ, ಕಪ್ಪು, ಕೆಂಪು, ಗುಡ್ಡ, ಮಡ್ಡೆ ಹೀಗೆ ಭೌಗೋಳಿಕವಾಗಿ ಸಹ ಈ ಪ್ರದೇಶವು ವಿಶಿಷ್ಟವಾಗಿದೆ. ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಈ ಕಲ್ಯಾಣ ಕರ್ನಾಟಕ ಪ್ರದೇಶವು ಅಭಿವೃದ್ಧಿಯಲ್ಲಿ ದಾಪುಗಾಲಿಡುತ್ತಿದೆ. 371ಜೆ ವಿಶೇಷ ಸೌಲಭ್ಯ ಜಾರಿಯಾಗಿ ಕಳೆದ 10 ವರ್ಷಗಳಲ್ಲಿ ಆಗಿರುವ ನಾನಾ ಅಭಿವೃದ್ಧಿ ಕಾರ್ಯಗಳು ಮುಂದಿನ ದಿನಗಳಲ್ಲಿ ಆಗುವ ಇನ್ನು ಸಾಕಷ್ಟು ಬದಲಾವಣೆಗಳಿಗೆ ಮುನ್ನುಡಿಯಂತಿವೆ ಎಂದು ತಿಳಿಸಿದರು.
ನೈಸರ್ಗಿಕ ಸಂಪತ್ತಿನ ಸಂರಕ್ಷಣೆ, ಅರಣ್ಯ ಪ್ರದೇಶದ ವಿಸ್ತರಣೆ, ಪೂರ್ಣ ಪ್ರಮಾಣದ ಸಾಕ್ಷರತೆ, ಉದ್ಯೋಗವಕಾಶ ಸೃಷ್ಟಿ, ನೈರ್ಮಲ್ಯೀಕರಣ, ಪರಿಸರ ಕಾಳಜಿಯಂತಹ ಕಾರ್ಯಗಳು ಎಲ್ಲಾ ಕಡೆಗಳಲ್ಲಿ ನಿತ್ಯನಿರಂತರ ನಡೆಯಬೇಕು. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಹ ಈ ಕಾರ್ಯಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಪ್ರಾಮಾಣಿಕವಾಗಿ ಶ್ರಮಿಸಬೇಕು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಉಪ ವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ, ಯೋಜನಾ ನಿರ್ದೇಶಕರಾದ ಟಿ.ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕಾವ್ಯರಾಣಿ, ಜಂಟಿ ಕೃಷಿ ನಿರ್ದೇಶರಾದ ರುದ್ರೇಶಪ್ಪ ಟಿ.ಎಸ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಸೇರಿದಂತೆ ಇತರರಿದ್ದರು.
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ