This is the title of the web page
This is the title of the web page

Please assign a menu to the primary menu location under menu

State

ಕಾಯಕ ಯೋಗಿ ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು


ಗದಗ ಅಗಸ್ಟ ೩೧: ಕಾಯಕ ಯೋಗಿ ನುಲಿಯ ಚಂದಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಗುರುವಾರದಂದು ಬೆಳಿಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸತ್ಯ, ಶುದ್ಧ, ನಡೆನುಡಿಗಳ ಮೂಲಕ ನುಲಿಯ ಚಂದಯ್ಯನವರು ಸಮಾಜದಲ್ಲಿ ಓರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ನುಲಿಯ ಚಂದಯ್ಯನವರು ಕಾಯಕ ನಿಷ್ಟೆಯ ಕುರಿತ ಸಂದೇಶಗಳನ್ನು ವಚನಗಳ ಮೂಲಕ ಸಾರಿದ್ದು ಅವುಗಳು ಸಾರ್ವಕಾಲಿಕವಾಗಿವೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಲಿಂಗಧಾಳ ಸರಕಾರಿ ಪ್ರೌಢಶಾಲೆಯ ಶಿಕ್ಷಕರಾದ ಡಾ.ಶಾಂತಕುಮಾರ್ ಭಜಂತ್ರಿ ಅವರು ನುಲಿಯ ಚಂದಯ್ಯನವರ ಜೀವನ ಮತ್ತು ಸಂದೇಶಗಳ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ ನುಲಿಯ ಚಂದಯ್ಯನವರು ೧೨ನೇ ಶತಮಾನದ ಬಸವಣ್ಣನವರ, ಮಡಿವಾಳ ಮಾಚಿದೇವರ ಸಮಕಾಲೀನರು. ಇವರು ವಿಜಯಪುರದ ಶಿವಣಗಿಯಲ್ಲಿ ಹುಟ್ಟಿದರು. ತಮ್ಮ ಕಾಯಕದಿಂದ ಬಂದ ಹಣದಿಂದ ದಾಸೋಹ ಮಾಡುತ್ತಿದ್ದರು. ನುಲಿಯ ಚಂದಯ್ಯನವರು ತಮ್ಮ ವಚನಗಳ ಮೂಲಕ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕೆಲಸವನ್ನು ಮಾಡಿದ ಶರಣರಾಗಿದ್ದಾರೆ. ಇವರು ಹುಲ್ಲು ನಾರುಗಳನ್ನು ಬಳಸಿ ಹಗ್ಗ ತಯಾರಿಸುವ ಕಾಯಕ ಹೊಂದಿದ್ದರು. ಚಂದಯ್ಯನವರು ಕಾಯಕದಿಂದ ಬಂದ ಹಣವನ್ನೇ ಸ್ವೀಕರಿಸುತ್ತಿದ್ದರು. ಅನ್ಯರ ದ್ರವ್ಯಕ್ಕೆ ಆಸೆ ಪಡುತ್ತಿರಲಿಲ್ಲ. ನುಲಿಯ ಚಂದಯ್ಯನವರ ೪೮ ವಚನಗಳು ಪ್ರಸ್ತುತ ಲಭ್ಯ ಇವೆ. ಕಾಯಕದ ಬಗ್ಗೆ ವಿಶೇಷ ಆಸಕ್ತಿ ಇದ್ದ ಇವರು ವಚನಗಳ ಮೂಲಕ ನಾಡಿಗೆ ಮಹತ್ವಪೂರ್ಣ ಸಂದೇಶ ಸಾರಿದ್ದಾರೆ.ಚಂದೇಶ್ವರ, ಚಂದೇಶ್ವರಲಿಂಗ ಹೀಗೆ ವಿವಿಧ ರೀತಿಯ ಅಂಕಿತಗಳನ್ನು ಇವರ ವಚನಗಳಲ್ಲಿ ಬಳಸಲಾಗಿದೆ. ಅತಿಯಾಸೆ ಬೇಡ ಎನ್ನುವುದು ಇವರ ತತ್ವವಾಗಿತ್ತು. ಗುರುವೇ ಆಗಲಿ, ಜಂಗಮರೇ ಆಗಲಿ ಎಲ್ಲರೂ ತಮ್ಮ ತಮ್ಮ ಕಾಯಕವನ್ನು ನಿಷ್ಟೆಯಿಂದ ಮಾಡಬೇಕೆಂದು ಹೇಳುತ್ತಿದ್ದರು.ಕಾಯಕದಿಂದ ಬಂದ ದ್ರವ್ಯ ಲಿಂಗಾರ್ಪಿತವಾಗುತ್ತದೆ. ಬಂದ ದ್ರವ್ಯವನ್ನು ಭಕ್ತಿಯಿಂದ ಲಿಂಗಕ್ಕೆ ಸಮರ್ಪಣೆ ಮಾಡಬೇಕು ಎಂದು ತಿಳಿಸಿಕೊಟ್ಟರು. ಇವರು ನುಲೇನೂರು ಎಂಬ ಗ್ರಾಮದಲ್ಲಿ ಲಿಂಗೈಕ್ಯರಾದರು ಎಂದು ಅವರ ಜೀವನ ಚರಿತ್ರೆಯನ್ನು ಹಾಗೂ ಅವರ ವಚನಗಳನ್ನು ಅರ್ಥಸಹಿತ ವಿವರಿಸಿದರು.
ಮಾರುತಿ ಕಟ್ಟಿಮನಿ ಅವರು ಮಾತನಾಡಿ ನೂಲು ಹುಣ್ಣಿಮೆಯ ದಿನದಂದು ಕಾಯಕ ಯೋಗಿ, ಶರಣರಾದ ನುಲಿಯ ಚಂದಯ್ಯನವರ ಜಯಂತಿ ಆಚರಿಸಲಾಗುತ್ತದೆ ಎಂದು ತಿಳಿಸಿದ ಅವರು ಸಮಾಜದಲ್ಲಿ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಬೇಕು ಎಂದರು ಮತ್ತು ರಕ್ಷಾ ಬಂಧನದ ಮಹತ್ವದ ಕುರಿತು ವಿವರಿಸಿದರು. ಇದೇ ಸಂದರ್ಭದಲ್ಲಿ ಸಾಮೂಹಿಕ ರಕ್ಷಾ ಬಂಧನ ಕಾರ್ಯಕ್ರಮವು ಜರುಗಿತು.
ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ,ಬಿ, ಮೋಹನ ಭಜಂತ್ರಿ, ವೈ.ಸಿ.ಗಡಾದ, ಸುರೇಶ ಕಟ್ಟಿಮನಿ, ಎಸ್.ಎನ್.ಬಳ್ಳಾರಿ, ರಾಜು ಭಜಂತ್ರಿ, ಹುಲ್ಲೇಶ ಭಜಂತ್ರಿ, ಗೀತಾ ಭಜಂತ್ರಿ, ಎಚ್.ವಿ.ವಿರಾಪುರ, ಮಾರುತಿ ಅಂಗಡಿ, ಹುಚ್ಚಪ್ಪ ಅಂಗಡಿ ಸೇರಿದಂತೆ ಸಮಾಜದ ಮುಖಂಡರು, ಗಣ್ಯರು, ಹಿರಿಯರು ಹಾಜರಿದ್ದರು. ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಬಾಹುಬಲಿ ಜೈನರ್ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Leave a Reply