ಬೆಳಗಾವಿ,ಅ.೧೦: ಇದೇ ಮೊದಲ ಬಾರಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಉತ್ಸವದ ಕುರಿತು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರಕಾರ್ಯ ಕೈಗೊಳ್ಳಲಾಗುವುದು ಎಂದು ಉತ್ಸವದ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ತಿಳಿಸಿದ್ದಾರೆ.
ಚನ್ನಮ್ಮನ ಕಿತ್ತೂರಿನ ಡೊಂಬರಕೊಪ್ಪ ಪ್ರವಾಸಿಮಂದಿರದಲ್ಲಿ ಸೋಮವಾರ (ಅ.೧೦) ನಡೆದ ಪ್ರಚಾರ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾನರ್, ಪೋಸ್ಟರ್, ಭಿತ್ತಪತ್ರ ಸೇರಿದಂತೆ ಉತ್ಸವದ ಪ್ರಚಾರಸಾಮಗ್ರಿಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುವುದು.ಅದೇ ರೀತಿ ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಮತ್ತು ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ಪ್ರಚಾರ ಸಾಮಗ್ರಿಗಳನ್ನು ಕಳುಹಿಸಿ ಆಯಾ ತಾಲ್ಲೂಕಿನ ತಹಶೀಲ್ದಾರರು ಹಾಗೂ ಸ್ಥಳೀಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಮೂಲಕ ಪ್ರಚುರಪಡಿಸಲಾಗುವುದು ಎಂದು ತಿಳಿಸಿದರು. ರಾಜ್ಯದಾದ್ಯಂತ ಸಂಚರಿಸುವ ಬಸ್ ಗಳ ಮೇಲೆ ಕಿತ್ತೂರು ಉತ್ಸವದ ಪೋಸ್ಟರ್ ಗಳನ್ನು ಅಂಟಿಸಬೇಕು; ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರ್ಡಿಂಗ್ ಗಳನ್ನು ಅಳವಡಿಸಬೇಕು ಎಂದು ಸಮಿತಿಯ ಸದಸ್ಯರು ಸಲಹೆ ನೀಡಿದರು.
ಸುಸಜ್ಜಿತ ಮಾಧ್ಯಮ ಕೇಂದ್ರ ಸ್ಥಾಪನೆ:
ಉತ್ಸವದ ವದಿಗಾರಿಕೆಗೆ ಆಗಮಿಸುವ ಮಾಧ್ಯಮ ಪ್ರತಿನಿಧಿಗಳಿಗೆ ಅನುಕೂಲವಾಗುವಂತೆ ಪ್ರತಿವರ್ಷದಂತೆ ಮುಖ್ಯ ವೇದಿಕೆ ಹಿಂಭಾಗದಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಗುರುನಾಥ ಕಡಬೂರ ತಿಳಿಸಿದರು.
ಇದೇ ವೇಳೆ ಮಾತನಾಡಿದ ಪ್ರಚಾರ ಸಮಿತಿಯ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು, ತಕ್ಷಣವೇ ಸುದ್ದಿ ಕಳಿಸಲು ಅನುಕೂಲವಾಗುವಂತೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಒದಗಿಸಬೇಕು; ಈ ಬಾರಿ ಮೂರು ವೇದಿಕೆಗಳನ್ನು ನಿರ್ಮಿಸುವುಸದರಿಂದ ಮಾಧ್ಯಮ ಪ್ರತಿನಿಧಿಗಳ ಸಂಖ್ಯೆ ಹೆಚ್ಚಾಗುವುದರಿಂದ ಮಾಧ್ಯಮ ಕೇಂದ್ರದಲ್ಲಿ ಕನಿಷ್ಠ ೨೫ ಕಂಪ್ಯೂಟರ್ ಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು. ಮಾಧ್ಯಮ ಕೇಂದ್ರದಲ್ಲಿಯೇ ಪತ್ರಕರ್ತರಿಗೆ ಅಲ್ಪೋಪಹಾರ ಹಾಗೂ ಊಟದ ಕಲ್ಪಿಸಬೇಕು ಎಂದು ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ಉತ್ಸವದ ನೇರಪ್ರಸಾರಕ್ಕೆ ಸಲಹೆ:
ಕಿತ್ತೂರು ಉತ್ಸವದ ಮೂರು ದಿನಗಳ ಎಲ್ಲ ಕಾರ್ಯಕ್ರಮಗಳನ್ನು ಸಾರ್ವಜನಿಕರು ವೀಕ್ಷಿಸಲು ಅನುಕೂಲವಾಗುವಂತೆ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್ ಹಾಗೂ ಫೇಸ್ ಬುಕ್ ಮೂಲಕವೂ ನೇರಪ್ರಸಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಚಾರ ಸಮಿತಿಯ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸಲಹೆ ನೀಡಿದರು.
ಉತ್ಸವದ ಅಂಗವಾಗಿ ವೀರಜ್ಯೋತಿಯಾತ್ರೆಯು ರಾಜ್ಯದಾದ್ಯಂತ ಸಂಚಾರ ಮಾಡುವುದರಿಂದ ಮುಂದಿನ ವರ್ಷದಿಂದ ವೀರಜ್ಯೋತಿ ಸಂಚಾರ ಸಂದರ್ಭದಲ್ಲಿಯೇ ಪ್ರಚಾರ ಸಾಮಗ್ರಿಗಳನ್ನು ಕೂಡ ಎಲ್ಲ ಜಿಲ್ಲೆಗಳಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯರು ತಿಳಿಸಿದರು.
ಸಭೆಯಲ್ಲಿ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ನೀಡಿರುವ ಸಲಹೆಯಂತೆ ಸ್ಥಳೀಯ ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಈ ಬಾರಿ ಹೆಚ್ಚಿನ ಪ್ರಚಾರಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಪ್ರಚಾರ ಸಮಿತಿಯ ಅಧ್ಯಕ್ಷ ಗುರುನಾಥ ಕಡಬೂರ ಹೇಳಿದರು. ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಮಾಧ್ಯಮ ಪ್ರತಿನಿಧಿಗಳು ಮತ್ತು ಪ್ರಚಾರ ಸಮಿತಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಗುರುನಾಥ ಕಡಬೂರ ಅವರನ್ನು ಮಾಧ್ಯಮ ಪ್ರತಿನಿಧಿಗಳು ಸನ್ಮಾನಿಸಿದರು. ಸುರೇಶ್ ಮುರಡಿಮಠ, ಸೋಮಶೇಖರ್ ಕುಪ್ಪಸಗೌಡರ, ನಾಗರಾಜ್ ಜೋರಾಪುರ, ಪ್ರದೀಪ್ ಮೇಲಿನಮನಿ, ಐ.ಬಿ.ಬಣಜಗಿ, ಶೇಖರ್ ಕಲ್ಲೂರ, ಬಸವರಾಜ ವೀರಾಪುರ, ಉಳವಯ್ಯ ಹಿರೇಮಠ, ಸಂಜೀವಕುಮಾರ್, ಉಮೇಶ್ ಗೌರಿ, ವಿನಾಯಕ ಗಾಣಗಿ ಸೇರಿದಂತೆ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು.
Gadi Kannadiga > Local News > ಕಿತ್ತೂರು ಉತ್ಸವ ಪ್ರಚಾರ ಸಮಿತಿ ಸಭೆ ವ್ಯಾಪಕ ಪ್ರಚಾರಕ್ಕೆ ಕ್ರಮ: ಗುರುನಾಥ ಕಡಬೂರ