ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮತ್ತು ಕೆಎಲ್‌ಇ ವಿಶ್ವವಿದ್ಯಾಲಯದ ವೇಣುಧ್ವನಿ ೯೦.೪ ಸಮುದಾಯ ಬಾನುಲಿಯ ಮುಖ್ಯಸ್ಥರ ಮಧ್ಯೆ ಗುರುವಾರ ಶೈಕ್ಷಣಿಕ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಶೈಕ್ಷಣಿಕ ಒಡಂಬಡಿಕೆ ಜರುಗಿತು.
ಕೆಎಲ್‌ಇ ವಿಶ್ವವಿದ್ಯಾಲಯದ ವೇಣುಧ್ವನಿ ೯೦.೪ ಸಮುದಾಯ ಬಾನುಲಿಯ ಕೇಂದ್ರದ ಕಾರ್ಯನಿರ್ವಾಹಕ ಡಾ.ವಿರೇಶ ನಂದಗಾವ ಮಾತನಾಡಿ, ಇಂದು ಆರ್‌ಸಿಯು ವಿವಿಧ ವಿಭಾಗಳೊಂದಿಗೆ ಮತ್ತು ಕೆಎಲ್‌ಇ ಸಮುದಾಯ ಬಾನುಲಿಯೊಂದಿಗೆ ಶೈಕ್ಷಣಿಕ ತಿಳುವಳಿಕೆ ಒಪ್ಪಂದ ಏರ್ಪಟ್ಟಿರುವುದು ಸಂತಸದ ಸಂಗತಿ. ಆರ್‌ಸಿಯು ಮತ್ತು ಕೆಎಲ್‌ಇ ವೇಣುಧ್ವನಿ ಈ ಎರಡು ಸಂಸ್ಥೆಗಳು ಸಮಾಜದ ಏಳ್ಗೆಯಲ್ಲಿ ತಮ್ಮದೆ ಆದ ಮಹತ್ವದ ಪಾತ್ರ ವಹಿಸಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಎರಡು ಸಂಸ್ಥೆಗಳು ಒಗ್ಗೂಡಿ ಕಾರ್ಯನಿರ್ವಹಿಸುವ ಮೂಲಕ ಸಮಾಜದಲ್ಲಿ ಮತ್ತು ಪರಸ್ಪರ ಸಂಸ್ಥೆಗಳಲ್ಲಿ ಮಹತ್ತರ ಸಕಾರಾತ್ಮಕ ಬದಲಾವಣೆಗೆ ಮುನ್ನುಡಿ ದಾಖಲಿಸಲಿವೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಕೇವಲ ವೇಣುಧ್ವನಿ ಬಾನುಲಿ ಕೇಂದ್ರದಲ್ಲಿ ಕಾರ್ಯಕ್ರಮ ನೀಡಲು ಮಾತ್ರವಲ್ಲದೆ, ಸಂಶೋಧನೆಗಳಿಗೂ ಪ್ರೋತ್ಸಾಹ ನೀಡಲಾಗುವುದು. ಸ್ನಾತಕೋತ್ತರ ವಿದ್ಯಾರ್ಥಿಗಳು ಸಮುದಾಯ ಬಾನುಲಿ ಕುರಿತಾಗಿ ಕೈಗೊಳ್ಳುವ ಸಂಶೋಧನಾ ಯೋಜನೆಗಳಿಗೆ ಸೂಕ್ತ ಅನುದಾನ ಕೂಡಾ ಕಲ್ಪಿಸಲಾಗುವುದು. ಈ ಒಡಂಬಡಿಕೆ ಲಾಭ ಪಡೆದು ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ಸಂಶೋಧನಾ ಕೌಶಲ ವೃದ್ಧಿಸಿಕೊಂಡಲ್ಲಿ ಈ ಶೈಕ್ಷಣಿಕ ತಿಳುವಳಿಕೆ ಒಪ್ಪಂದದ ಉದ್ದೇಶಗಳು ಈಡೇರುತ್ತವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ವಪ್ರೇರಿತರಾಗಿ ಈ ಒಪ್ಪಂದದ ಲಾಭ ಪಡೆಯುವತ್ತ ಕಾರ್ಯನ್ಮುಖವಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ. ಕಮಲಾಕ್ಷಿ ತಡಸದ ಮಾತನಾಡಿ, ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ವಿಷಯದ ಪಠ್ಯ ಭಾಗ ಬೋಧಿಸಬಹುದು. ಆದರೆ ಪ್ರಾಯೋಗಿಕ ಸಂಗತಿಗಳನ್ನು ಮತ್ತು ಕೌಶಲಗಳ ಕಲಿಕೆಯ ಮಹತ್ವ ವಿದ್ಯಾರ್ಥಿಗಳಿಗೆ ಅರ್ಥೈಸಲು ವೃತ್ತಿಪರ ಸಂಸ್ಥೆಯ ಸಿಬ್ಬಂದಿ ಸಹಕಾರ ತುಂಬಾ ಅವಶ್ಯ. ಹಾಗಾಗೀ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆರ್‌ಜೆ, ಧ್ವನಿ ಸಂಕಲನ, ಧ್ವನಿ ರೆಕಾರ್ಡಿಂಗ್ ಸೇರಿದಂತೆ ಬಾನುಲಿ ಉದ್ಘೋಷಕ ಮತ್ತು ನಿರೂಪಕರಾಗಲು ಅವಶ್ಯವಿರುವ ಎಲ್ಲ ಬಗೆಯ ಕೌಶಲಗಳನ್ನು ಕಲಿಯಲು ಈ ಶೈಕ್ಷಣಿಕ ಒಪ್ಪಂದ ತುಂಬಾ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು ಆರ್‌ಸಿಯು ಎನ್‌ಎಸ್‌ಎಸ್ ಕೋಶದ ಜೊತೆಗೂ ಕೂಡಾ ಕೆಎಲ್‌ಇ ವೇಣುಧ್ವನಿ ೯೦.೪ ಸಮುದಾಯ ಬಾನುಲಿ ಕೇಂದ್ರವು ಶೈಕ್ಷಣಿಕ ತಿಳುವಳಿಕೆ ಒಪ್ಪಂದ ಜರುಗಿತು.
ಕೆಎಲ್‌ಇ ವೇಣುಧ್ವನಿ ೯೦.೪ ಸಮುದಾಯ ಬಾನುಲಿ ಕೇಂದ್ರದ ಸಿಬ್ಬಂದಿಗಳಾದ ಮಂಜುನಾಥ ಬಳ್ಳಾರಿ, ಮನೀಷಾ ಪಿ.ಎಸ್, ರಾಜ್ಯಶಾಸ್ತ್ರ ವಿಭಾಗದ ಡಾ. ಹನುಮಂತಪ್ಪ. ಡಿ.ಜೆ, ಪತ್ರಿಕೋದ್ಯಮ ವಿಭಾಗದ ಬೋಧಕ ಸಹಾಯಕರಾದ ವಿದ್ಯಾಶ್ರೀ ಹಾಲಕೇರಿಮಠ, ಪೂಜಾ ಹೆಗಡೆ, ಅರುಣ ಹೊಸಮಠ, ಬೋಧಕೇತರ ಸಿಬ್ಬಂದಿ ಸದ್ದಾಂ ರೋಣದ ಮತ್ತು ಪವನ ಶರಣಪ್ಪನವರ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸೋನಿ ಭಾಗಿ ಸ್ವಾಗತಿಸಿದರು. ಮಲ್ಲಮ್ಮ ತೊಲಗಟ್ಟಿ ಮತ್ತು ಬಸವರಾಜ ಭಜಂತ್ರಿ ಪರಿಚಯಿಸಿದರು. ಸಂಜೀವಿನಿ ಉಳ್ಳಾಗಡ್ಡಿ ವಂದಸಿದರು. ವಿಜಯಲಕ್ಷ್ಮಿ ಬದ್ರನ್ನವರ ಮತ್ತು ಮಹಾಂತ ರಾಥೋಡ್ ನಿರೂಪಿಸಿದರು.
Gadi Kannadiga > Local News > ಕೆಎಲ್‌ಇ ವೇಣುಧ್ವನಿ – ಆರ್‌ಸಿಯು ಪತ್ರಿಕೋದ್ಯಮ ವಿಭಾಗದ ಶೈಕ್ಷಣಿಕ ಒಪ್ಪಂದ