This is the title of the web page
This is the title of the web page

Please assign a menu to the primary menu location under menu

Local News

ಗುಜರಾತ್‌ನಲ್ಲಿ ಕಾಂಗ್ರೆಸ್‌ ಸೋಲಿಗೆ ಆಪ್‌ ಕಾರಣ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ


ಬೆಳಗಾವಿ: ಗುಜರಾತ್‌ ನಲ್ಲಿ ಕಾಂಗ್ರೆಸ್‌ ಸೋಲಿಗೆ ಆಮ್‌ ಆದ್ಮಿ ಪಕ್ಷವೇ ಕಾರಣವಾಗಿದ್ದು, ಶೇ 13% ರಷ್ಟು ಕಾಂಗ್ರೆಸ್‌ ಮತಗಳನ್ನು  ಆಮ್‌ ಆದ್ಮಿ ಪಾರ್ಟಿ ಪಡೆದುಕೊಂಡಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.
ನಗರದ ಜಾಧವನಗರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ಇಷ್ಟು ಕಡಿಮೆ ಸ್ಥಾನ ಬರಬಹುದು ಎಂದು ನಾವು ನಿರೀಕ್ಷೆ ಕೂಡ ಮಾಡಿರಲಿಲ್ಲ. ಕಾಂಗ್ರೆಸ್‌ ಹಿನ್ನೆಡೆಗೆ ಕಾರಣ ಆಮ್‌ ಆದ್ಮಿ ಪಕ್ಷ. ಆಪ್‌ ಪಕ್ಷ ಈ ಬಾರಿ ಗುಜರಾತ್‌ನಲ್ಲಿ ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ಅನ್ನು ಪಡೆದಿದೆ ಎಂದು ತಿಳಿಸಿದರು.
ಗುಜರಾತ್ ಫಲಿತಾಂಶ ಇದೇನೂ ಮೋದಿ ಮ್ಯಾಜಿಕ್ ಅಲ್ಲ, ಅಭಿವೃದ್ಧಿ ಮ್ಯಾಜಿಕ್ ಕೂಡ ಅಲ್ಲ. ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ಶೇ.13ರಷ್ಟು ವೋಟ್ ಪಡೆದಿದೆ. ಆಮ್ ಪಡೆದಿರುವ 13% ಮತಗಳು ಕಾಂಗ್ರೆಸ್ನದ್ದು. ಇದರಿಂದಾಗಿ ಪಕ್ಷಕ್ಕೆ ನೇರವಾಗಿ ನಮಗೆ ಹೊಡೆತ ಬಿದ್ದಿದೆ. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷ 60-70 ಕ್ಷೇತ್ರಗಳಲ್ಲಿ ಗೆಲ್ಲಬೇಕಿತ್ತು ಎಂದರು.
ಗೆಲ್ಲುವ ಅಭ್ಯರ್ಥಿಗೆ ಮಾತ್ರ ಟಿಕೆಟ್:‌ ಸ್ಟ್ರ್ಯಾಟಜಿ ಮಾಡದೆ ರಾಜ್ಯದಲ್ಲಿ ನಾವು ಚುನಾವಣೆ ಗೆಲ್ಲಲು ಆಗಲ್ಲ.ಆದರೆ ನಮ್ಮಲ್ಲಿ ಸೋಲುತ್ತಾರೆ ಎಂದು ಗೊತ್ತಿದ್ದರೂ ಟಿಕೆಟ್ ನೀಡುತ್ತಾರೆ. ಸೀನಿಯರ್ ಅಂತಾ ಟಿಕೆಟ್ ನೀಡುತ್ತೇವೆ. ಗೆಲ್ಲುವ ಹಾಗೆ ಇದ್ದರೆ ಮಾತ್ರ ಹಿರಿಯರಿಗೆ ಟಿಕೆಟ್ ನೀಡಲಿ. ಜಾತಿ ಯುಗ ಮುಗಿದಿದೆ, ಕೆಲಸ ಮಾಡುವುದನ್ನು ಜನ ನೋಡ್ತಾರೆ. ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ಇನ್ನು ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದಂತೆ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ಗೆ ಸ್ಪರ್ಧೆ ನೀಡುವ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಜೆಡಿಎಸ್‌ ಇದೆ. ಜೆಡಿಎಸ್‌ ಸೀಮಿತ ಕ್ಷೇತ್ರದಲ್ಲಿದೆ. ಗುಜರಾತ್‌ನಲ್ಲಿ ಆಪ್‌ನಿಂದ ಆದಂತಹ ಪರಿಸ್ಥಿತಿ ಕರ್ನಾಟಕದಲ್ಲಿಲ್ಲ, ಜೆಡಿಎಸ್‌ನವರು ಅವರು ಗೆಲ್ಲುವ ಸ್ಥಾನದಲ್ಲಿ ಗೆಲ್ಲುತ್ತಾರೆ. ನಾವು ಎಲ್ಲಿ ಗೆಲ್ಲಬೇಕು ಅಲ್ಲಿ ಗೆಲ್ಲುವಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದರು.
ಹಿಮಾಚಲ ಪ್ರದೇಶ ಗೆಲುವಿಗೆ ಖರ್ಗೆ, ಪ್ರಿಯಂಕಾ ಗಾಂಧಿ ಕಾರಣ: ಇನ್ನೂ ಹಿಮಾಚಲ್‌ ಪ್ರದೇಶದಲ್ಲಿ ಕಾಂಗ್ರೆಸ್‌ ಗೆಲುವಿಗೆ ಅಲ್ಲಿನ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೇ ಕಾರಣ. ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಂಕಾ ಗಾಂಧಿ ಮತ್ತು ಕಾಂಗ್ರೆಸ್‌ ಚುನಾವಣಾ ಉಸ್ತುವಾರಿಗಳು ಅಲ್ಲಿ ಚುನಾವಣಾ ತಂತ್ರಗಳನ್ನು ಹೆಣೆದು ಭರ್ಜರಿ ಪ್ರಚಾರ ನಡೆಸಿದ್ದರಿಂದ ಕಾಂಗ್ರೆಸ್‌ ಪಕ್ಷ 40 ಸೀಟು ಪಡೆದು ಗೆಲುವು ಸಾಧಿಸಿದೆ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆಶಿ ಒದ್ದಾಡುತ್ತಿದ್ದಾರೆ ಎಂಬ ಡಾ.ಜಿ.ಪರಮೇಶ್ವರ್  ಹೇಳಿಕೆ ವಿಚಾರಕ್ಕೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ರಾತ್ರಿ-ಹಗಲು ಪಕ್ಷಕ್ಕಾಗಿ ಕೆಲಸ ಮಾಡ್ತಿದ್ದಾರೆ: ಡಿಕೆಶಿ ಆ್ಯಕ್ಟಿವ್ ಇದ್ದಾರೆ, ಸಾಕಷ್ಟು ಕೆಲಸ ಮಾಡಿದ್ದಾರೆ. ರಾತ್ರಿ ಹಗಲು ಪಕ್ಷಕ್ಕಾಗಿ ಡಿಕೆಶಿ ಕೆಲಸವನ್ನು ಮಾಡುತ್ತಿದ್ದು, ಕೆಲವೊಂದು ಸಾರಿ ಲೆಕ್ಕಾಚಾರಗಳು ತಪ್ಪಾಗುತ್ತದೆ. ಹುದ್ದೆ ದೊಡ್ಡದಲ್ಲ. ಹೀಗಾಗಿ ಸಪೋರ್ಟ್ ಮಾಡಬೇಕಾಗುತ್ತದೆ. ಒಂದೊಂದು ಸಾರಿ ಏನೋ ತಪ್ಪಿರಬಹುದು. ನಾವೆಲ್ಲರೂ ನಿಮ್ಮ ಜೊತೆಗೆ ಇರುತ್ತೇವೆ ಕೆಲಸ ಮಾಡಿ ಅಂತಾ ಹೇಳಬೇಕಾಗುತ್ತದೆ. ಆ ಸಂದರ್ಭದಲ್ಲಿ ಆ ರೀತಿ ಡಾ.ಜಿ. ಪರಮೇಶ್ವರ ಹೇಳಿರಬಹುದು ಎಂದು ತಿಳಿಸಿದರು.
ಕಾಂಗ್ರೆಸ್ ಕಡೆ ಮುಖ ಮಾಡಲಿದ್ದಾರೆ ಜನ: ಬೆಳಗಾವಿ ಮತ್ತು ಇಡೀ ರಾಜ್ಯಕ್ಕೆ ಬದಲಾವಣೆ ಮಾಡಬೇಕು ಅಂತಾ ನನ್ನ ಅನಿಸಿಕೆ. ಇದರಿಂದ 20 ಸೀಟ್ ಹೆಚ್ಚು ಗೆಲ್ಲಬಹುದು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅಂತಾ ಜನ ನೋಡ್ತಿದ್ದಾರೆ. ಸಿದ್ದರಾಮಯ್ಯ ಕಾಲದ ಸಾಕಷ್ಟು ಯೋಜನೆ ಸ್ಥಗಿತ ಮಾಡಿದ್ದು ಜನರಿಗೆ ಗೊತ್ತಿದೆ. ಕುಟುಂಬಸ್ಥರಿಗೆ ಟಿಕೆಟ್ ನೀಡುವಂತೆ ಹಲವು ನಾಯಕರ ಅರ್ಜಿ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, ಕುಟುಂಬ ರಾಜಕಾರಣದಲ್ಲಿ ಗೆಲ್ಲುವ ಕೆಪ್ಯಾಸಿಟಿ ಇದ್ರೇ ಕೊಡಬಹುದು. ಅವರು ಗೆಲ್ತಾರೆ ಅಂದ್ರೇ ಒಂದೇ ಕುಟುಂಬಕ್ಕೆ ಎರಡು ಮೂರು ಟಿಕೆಟ್ ಕೊಡಬಹುದು. 2023ರಲ್ಲಿ ದಲಿತ ಸಿಎಂ ಆಗಬೇಕಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, ದಲಿತ ಸಿಎಂ ಆಗಬೇಕು ಎಂಬುದು ಗುರಿಯಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಅವರು ತಿಳಿಸಿದರು.

ಬಿಜೆಪಿಯವರೇ ಪಾಲಿಕೆ ಕಮೀಷನರ್-ಮೇಯರ್:  ಮಹಾನಗರ ಪಾಲಿಕೆ ಚುನಾವಣೆ ನಡೆದು ಒಂದು ವರ್ಷವಾದರೂ ಮೇಯರ್, ಉಪಮೇಯರ್ ಚುನಾವಣೆ ನಡೆದಿಲ್ಲ. ಪಾಲಿಕೆ ಸದಸ್ಯರಿಗೆ ಅಧಿಕಾರ ಎನ್ನುವುದು  ಈಗ ಸಿಗಬಹುದು, ನಾಳೆ ಸಿಗಬಹುದು ಎನ್ನುವಂತಾಗಿದೆ ಎಂದ ಅವರು,   ಬಿಜೆಪಿ ಶಾಸಕರೇ ಪಾಲಿಕೆ ಕಮೀಷನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮಗೆ ಎಲ್ಲ ಬೇಕೋ ಅಲ್ಲಿ ಕೆಲಸ ಮಾಡಿಸಿ ಹಣ ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ. ಪಾಲಿಕೆ ಕ್ರಮ ಇದೇ ರೀತಿ ಮುಂದುವರೆದರೆ ಮುಂದೆ ಒಂದು ದಿನ ಗೌನ್ ಗಳನ್ನು ಹಸ್ತಾಂತರಿಸುವ ಕಾರ್ಯ ನಡೆಯಲಿದೆ ಎಂದರು.

ಗಡಿ ಭಾಗದಲ್ಲಿ ಚುನಾವಣೆ ಗಿಮಿಕ್: ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದಲ್ಲಿರುವ ಜತ್, ಅಕ್ಕಲಕೋಟೆಯ ಜನ ಕರ್ನಾಟಕಕ್ಕೆ ಬರುವುದಗಾಗಿ ಹೇಳಿದ್ದಾರೆ. ಅವರು ಇಲ್ಲಿ ಬರೋಕೆ ಆಗಲ್ಲ. ನಾವು ಅಲ್ಲಿ ಹೋಗೊಕ್ಕೆ ಆಗಲ್ಲ. ಅದು ಕೇವಲ ಚರ್ಚೆಗೆ ಸಿಮೀತವಾಗುತ್ತದೆ. ಒಂದು ಬಾರಿ ವಿಭಜನೆಯಾದರೆ ಅಂತಿಮ‌ ಚರ್ಚೆ. ಈ ಭಾಗದ ಜನರಿಗೆ ಕುಡಿಯು ನೀರು ಕೊಡದೆ ಇರುವುದು ಮಹಾರಾಷ್ಟ್ರದ ರಾಜಕೀಯ ಗಿಮಿಕ್ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್‌ ಹಣಮನ್ನವರ್‌, ಮಹಾವೀರ ಮೋಹಿತೆ ಸೇರಿದಂತೆ ಇತರರು ಇದ್ದರು.


Gadi Kannadiga

Leave a Reply