ಬೆಳಗಾವಿ:- ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣದ ಮಹತ್ವ, ಗಳಿಕೆಯ ಪ್ರಾಮುಖ್ಯತೆ ಮತ್ತು ಹೂಡಿಕೆಯ ಬಗ್ಗೆ ತಿಳಿವಳಿಕೆ ಮುಖ್ಯ ಎಂದು ರಾಚವಿ ಕುಲಸಚಿವೆ ಕೆ.ಟಿ. ಶಾಂತಲಾ ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕೊಟೇಕ್ ಸೆಕ್ಯೂರಿಟೀಸ್ ಉಪಕ್ರಮದಲ್ಲಿ ರಾಚವಿ ವೃತ್ತಿ ಮಾರ್ಗದರ್ಶನ, ತರಬೇತಿ ಮತ್ತು ವಿದ್ಯಾರ್ಥಿ ಉದ್ಯೋಗ ಕೋಶ ಮತ್ತು ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರದ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದವತಿಯಿಂದ ಯುವಜನತೆಗೆ ಹಣಕಾಸು ಶಿಕ್ಷಣ ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾರ್ಯಾಗಾರವನ್ನು ಬುಧುವಾರ ಆಯೋಜಿಸಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ರಾಚವಿಯ ಕುಲಸಚಿವೆ ಕೆ. ಟಿ. ಶಾಂತಲಾ ಅವರು ಹಣಕಾಸು ವ್ಯವಹಾರ ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹೂಡಿಕೆಯ ಸಂಸ್ಕೃತಿಯನ್ನು ಚಿಕ್ಕ ವಯಸ್ಸಿನಲ್ಲೇ ಯುವ ಮನಸ್ಸಿನಲ್ಲಿ ತುಂಬಬೇಕು. ಮಾರುಕಟ್ಟೆಯ ಹೂಡಿಕೆಯ ಕುರಿತಾದ ತಿಳಿವಳಿಕೆ ವಿದ್ಯಾರ್ಥಿ ದೆಸೆಯಲ್ಲಿಯೇ ತಿಳಿದುಕೊಳ್ಳುವುದರಿಂದ ಮುಂದೆ ಆರ್ಥಿಕ ಶಿಸ್ತುನ್ನು ಜೀವನದಲ್ಲಿ ಪಾಲಿಸಲು ಸಹಾಯಕವಾಗುತ್ತದೆ. ಹೂಡಿಕೆಯ ಮಾರುಕಟ್ಟೆಯು ವಿಶಾಲವಾದ ಕ್ಷೇತ್ರ. ಈ ಕ್ಷೇತ್ರದಲ್ಲಿ ಸರಾಗವಾಗಿ ಸಾಗಲು ಆಳವಾದ ಜ್ಞಾನದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಈಗಿನಿಂದಲೇ ಮಾರುಕಟ್ಟೆಯ ಹೂಡಿಕೆಯ ಜ್ಞಾನ ಪಡೆದುಕೊಳ್ಳುತ್ತಿರುವುದು ಉತ್ತಮ ಭವಿಷ್ಯಕ್ಕೆ ನಾಂದಿಯಾಗಲಿದೆ ಎಂದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ಲೇಸ್‌ಮೆಂಟ್ ಅಧಿಕಾರಿ ಪ್ರೊ.ಆರ್.ಎನ್.ಮನಗೂಳಿ ಅವರು ಕಾರ್ಯಾಗಾರವು ಹಣದ ಗಳಿಕೆಯ ಜೊತೆಗೆ ಉಳಿಕೆಯ ಕುರಿತು ವಿಶೇಷವಾಗಿ ಬೆಳಕು ಚೆಲ್ಲಲಿದೆ ಎಂದು ಕಾರ್ಯಾಗಾರದ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ಶಂಕರ ಎಸ್ ತೇರದಾಳ ಅವರು ವಿದ್ಯಾರ್ಥಿಗಳಿಗೆ ಇದು ಉತ್ತಮವಾದ ಅವಕಾಶ. ವಿದ್ಯಾರ್ಥಿಗಳು ತಮ್ಮ ಆರ್ಥಿಕ ಗುರಿಗಳನ್ನು ಸಾಧಿಸಲು ಕಾರ್ಯಾಗಾರದ ಗರಿಷ್ಠ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾದ ಡಾ. ಮಹಾಂತೇಶ ಕುರಿ, ಕಾರ್ಯಾಗಾರದ ಸಂಯೋಜಕರಾದ ಡಾ. ಮುಕುಂದ ಮುಂಡರಗಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸಚೀಂದ್ರ ಜಿ.ಆರ್. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಲಕ್ಷ್ಮೀ ರಾಯನ್ನವರ ಪ್ರಾರ್ಥಿಸಿದರು, ಆರತಿ ಎಕ್ಕುಂಡಿ ಸ್ವಾಗತಿಸಿದರು, ಸಂಧ್ಯಾ ಹಳ್ಳಿಕೇರಿ ಪರಿಚಯಿಸಿದರು, ಉಮೇಶ್ ಕುರೇರ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಮತ್ತು ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Gadi Kannadiga > Local News > ಯುವಜನತೆಗೆ ಹೂಡಿಕೆಯ ಸಂಸ್ಕೃತಿಯ ಅರಿವು ಮುಖ್ಯ : ಕುಲಸಚಿವೆ ಕೆ. ಟಿ. ಶಾಂತಲಾ