ಬೆಳಗಾವಿ: ಸಮಾಜ ಸಂಘಟನೆಗೆ ಕುಮಾರ ಶ್ರೀಗಳ ಕೊಡುಗೆ ಅಪಾರವಾಗಿದೆ. ವೀರಶೈವ ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಿ ಐಕ್ಯತೆ ಸಾಧಿಸಿ ಶೈಕ್ಷಣಿಕ ಸಾಮಾಜಿಕ ಕ್ರಾಂತಿ ಮಾಡಿದರು. ಹೀಗಾಗಿ ಹಾನಗಲ್ ಕುಮಾರ ಶಿವಯೋಗಿಗಳು ನಿತ್ಯ ಪ್ರಾತಃ ಸ್ಮರಣೀಯರು ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
ಕಾರಂಜಿಮಠದಲ್ಲಿ ದಿನಾಂಕ 6-10-2025ರಂದು ಜರುಗಿದ 292ನೇ ಶಿವಾನುಭವ ಮತ್ತು ಹಾನಗಲ್ ಕುಮಾರ ಶಿವಯೋಗಿಗಳ 158ನೇ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಪೂಜ್ಯರು ಮಾತನಾಡುತ್ತಿದ್ದರು.
ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪಿಸಿ ಸಮಾಜ ಸಂಘಟನೆ, ಶಿವಯೋಗ ಮಂದಿರ ಸ್ಥಾಪಿಸಿ ಧಾರ್ಮಿಕ ಜಾಗೃತಿ, ಪಂಚಾಕ್ಷರಿ ಪುಟ್ಟರಾಜ ಗವಾಯಿಗಳನ್ನು ಸಂಗೀತ ಲೋಕದ ಅನರ್ಘ್ಯ ರತ್ನಗಳನ್ನಾಗಿ ರೂಪಿಸಿದರು ಎಂದು ಹೇಳಿದರು.
ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಸಾಧನೆ ಕುರಿತು ಚಿಂಚಣಿ ಅಲ್ಲಮಪ್ರಭು ಸಿದ್ಧ ಸಂಸ್ಥಾನ ಮಠದ ಉತ್ತರಾಧಿಕಾರಿಗಳಾದ ಶಿವಪ್ರಸಾದ ದೇವರು ವಿಶೇಷ ಉಪನ್ಯಾಸ ನೀಡಿ, ಕುಮಾರ ಶಿವಯೋಗಿಗಳ ಸಮಾಜ ಸೇವಾ ಕಾರ್ಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಮಿಥುನ ಅಂಕಲಿ ಅವರು ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗೀತದಲ್ಲಿ ಅಪೂರ್ವ ಸಾಧನೆ ಮಾಡಿದ ಪ್ರಣವ ವಿನಾಯಕ ಮತ್ತು ವೇದ ಪ್ರಕಾಶ ಅವರನ್ನು ಕಾರಂಜಿಮಠದ ವತಿಯಿಂದ ಶ್ರೀಗಳು ಸನ್ಮಾನಿಸಿದರು.
ಕಾರಂಜಿಮಠದ ನೂತನ ಉತ್ತರಾಧಿಕಾರಿಗಳಾದ ಡಾ ಶಿವಯೋಗಿ ದೇವರು ಉಪಸ್ಥಿತರಿದ್ದರು. ಡಾ. ಎಸ್. ಎಂ ಗಂಗಾಧರಯ್ಯ, ಪ್ರೊ. ಶ್ರೀಕಾಂತ ಶಾನವಾಡ, ರತ್ನಪ್ರಭ ಬೆಲ್ಲದ ಮೊದಲಾದವರು ಭಾಗವಹಿಸಿದ್ದರು.
ಎ.ಕೆ.ಪಾಟೀಲ ಕಾರ್ಯಕ್ರಮ ನಿರೂಪಿಸಿದರು, ವಿ. ಕೆ. ಪಾಟೀಲ ವಂದಿಸಿದರು.