ಗಂಗಾವತಿ: ಸಮೀಪದ ವಡ್ಡರಹಟ್ಟಿ ಕ್ಯಾಂಪಿನಲ್ಲಿ ನೀರಾವರಿ ಇಲಾಖೆ ವ್ಯಾಪ್ತಿಯ ಜಮೀನಿನಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಶನಿವಾರದಂದು ಭೂಮಿ ಪೂಜೆ ನೆರವೇರಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ವಡ್ಡರಹಟ್ಟಿ ಗ್ರಾಮ ಪಂಚಾಯತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 18 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡ ಭೂಮಿ ಕರ್ನಾಟಕ ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿದೆ. ಈ ಬಗ್ಗೆ ಸಂಪೂರ್ಣ ಅರಿವಿದ್ದೂ ಗ್ರಾ.ಪಂ.ಸದಸ್ಯರು, ಗುತ್ತಿಗೆದಾರರು ಕಾಮಗಾರಿ ಭೂಮಿ ಪೂಜೆ ನೆರೆವೇರಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಏಕೆಂದರೆ ಕಳೆದ ಕೆಲವು ತಿಂಗಳುಗಳಿಂದ ನೀರಾವರಿ ಇಲಾಖೆ ತನ್ನ ವ್ಯಾಪ್ತಿಯ 108 ಎಕರೆ ಆಸ್ತಿಯನ್ನು ಇತ್ತೀಚೆಗೆ ಸರ್ವೆ ಮಾಡಿಸಿ ಸುಪರ್ದಿಗೆ ಪಡೆಯುವ ಸಿದ್ದತೆ ನಡೆಸಿದೆ. ಇದೆಲ್ಲದರ ಬಗ್ಗೆ ಮಾಹಿತಿ ಇದ್ದೂ ಕೂಡ ಗ್ರಾ.ಪಂ. ಅಧಿಕಾರಿಗಳು ಹಾಗೂ ಸದಸ್ಯರು ಇಲಾಖೆಯ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅನುದಾನ ಲೂಟಿಗೆ ಪೂರ್ವ ಸಿದ್ದತೆ ಮಾಡಿಕೊಂಡಿರುವ ಗ್ರಾ.ಪಂ ಅಧಿಕಾರಿಗಳು, ಸದಸ್ಯರು, ಗುತ್ತಿಗೆದಾರ ಬೇಕೆಂದೆ ನೀರಾವರಿ ಇಲಾಖೆಯ ಜಮೀನಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಅನುದಾನ ದುರ್ಬಳಕೆ ಆಗುವ ಮುನ್ನವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಎಚ್ಚೆತ್ತು ಅನುದಾನ ಹಿಂಪಡೆದು ವಿವಾದ ರಹಿತ ಸೂಕ್ತ
ಭೂಮಿಯನ್ನು ಕಟ್ಟಡ ನಿರ್ಮಾಣಕ್ಕೆ ಆಯ್ಕೆಮಾಡಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.
ವರದಿ
(ಹನುಮೇಶ ಬಟಾರಿ ಗಂಗಾವತಿ)