ಬೆಳಗಾವಿ: ಪ್ರಮುಖ ದಿನಬಳಕೆ ಸಾಮಗ್ರಿಗಳಲ್ಲಿ ಒಂದಾದ ಅಡುಗೆ ಎಣ್ಣೆ, ಎಲ್ ಪಿಜಿ ಗ್ಯಾಸ್ , ಡೀಸೆಲ್, ಪೆಟ್ರೋಲ್, , ರಸಾಯನಿಕ ಗೊಬ್ಬರ ಸೇರಿದಂತೆ ಇನ್ನಿತರ ಸಾಮಗ್ದರಿಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ದ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಕೈಯಲ್ಲಿ ತಟ್ಟೆ, ಗ್ಯಾಸ್ ಸಿಲಿಂಡರ್ ಹಿಡಿದು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಲಾಕ್ ಡೌನ್ ನಿಂದ ಅದೇಷ್ಟೋ ಜನರು ಉದ್ಯೋಗ ಕಳದುಕೊಂಡು ಮನೆಯಲ್ಲಿದ್ದಾರೆ. ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ನಮ್ಮ ಮುಂದೆ ಇವೆ. ಇಂಥದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಅಗತ್ಯ ಬೆಲೆಯನ್ನು ಏರಿಕೆ ಮಾಡಿ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ವಯಕ್ತಪಡಿಸಿದರು.
ಈ ವೇಳೆ ಶಾಸಕಿ ಲಕ್ಷ್ಮೀ ಹೆಬ್ಬಳ್ಕರ್ ಅವರು ಮಾತನಾಡಿ ಹಾನಗಲ್ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಸರಕಾರ ಕಡಿಮೆ ಮಾಡಿತ್ತು ಆದರೆ ಇದೀಗ ಮತ್ತೆ ದಿನನಿತ್ಯ ಬಳಕೆಯ ಸಾಮಗ್ರಿಗಳ ಮೇಲೆ ಬೆಲೆ ಏರಿಕೆ ಮಾಡುತ್ತಿದ್ದು ಜನರ ಗಮನವನ್ನು ಬೆರೆ ಕಡೆಗೆ ಸೆಳೆಯುವ ಕೆಲಸ ಮಾಡಲು ಹೊರಟಿದ್ದಾರೆ. ಐದು ರಾಜ್ಯಗಳಲ್ಲಿ ಗೆದ್ದಿದ್ದೇವೆ ಎಂದು ಬೀಗಲು ಹೊರಟ ಸರಕಾರಕ್ಕೆ ಕರ್ನಾಟಕದಿಂದ ತಕ್ಕಪಾಠ ಕಲಿಸುತ್ತೇವೆ ಎಂದರು.
ಈಗಾಗಲೇ ಕೊರೋನಾದಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತಿದೆ. 450 ರೂ. ಇದ್ದ ಎಲ್ ಪಿಜಿ ಗ್ಯಾಸ್ ಬೆಲೆ 1250 ರೂ. ದಾಟಿದೆ. ಅಲ್ಲದೆ ಅಡುಗೆ ಎಣ್ಣೆ, ತರಕಾರಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ದೇಶದ ಜನರ ಜೇಬಿಗೆ ಕತ್ತರಿ ಹಾಕುವ ಹುನ್ನಾರ ಡಬಲ್ ಎಂಜಿನ್ ಸರಕಾರ ಮಾಡುತ್ತಿರುವುದನ್ನು ಕಾಂಗ್ರೆಸ್ ಕಾರ್ಯಕರ್ತರು ತೀವವಾಗಿ ಮನವಿಯಲ್ಲಿ ಖಂಡಿಸಿದ್ದಾರೆ.
ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಪ್ರದೀಪ ಎಂ.ಜಿ., ಪರಶುರಾಮ ಒಗ್ಗನ್ನವರ, ಜಯಶ್ರೀ ಮಾಳಗಿ, ವಿಜಯ ಹಂಪಣ್ಣವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.