ಬೆಳಗಾವಿ; ಕರ್ನಾಟಕದ ಗಾಂಧಿ ಎಂದು ಪರಿಗಣಿಸಲ್ಪಡುತ್ತಿರುವ ಹರಡೇಕರ್ ಮಂಜಪ್ಪನವರ ಸ್ಮಾರಕವನ್ನು ಬೆಳಗಾವಿಯಲ್ಲಿ ನಿರ್ಮಾಣ ಮಾಡಬೇಕು ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಗಾವಿಯಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಕಾಂಗ್ರೆಸ್ ಮಹಾ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ಬೆಳಗಾವಿಯಲ್ಲಿ ವೈಭವದಿಂದ ನೀಡುತ್ತಿರುವುದು ಶ್ಲಾಘನೀಯ ಎಂದಿರುವ ಶ್ರೀಗಳು ಇದೇ ಸಂದರ್ಭದಲ್ಲಿ ಅಂದಿನ ಅಧಿವೇಶನವೂ ಯಶಸ್ವಿಯಾಗಲು ಹಗಲಿರುಳು ಶ್ರಮಿಸಿದ ಕರ್ನಾಟಕ ಸಿಂಹ ಗಂಗಾಧರ ರಾವ ದೇಶಪಾಂಡೆ ಮತ್ತು ಕರ್ನಾಟಕದ ಗಾಂಧಿ ಹರಡೇಕರ್ ಮಂಜಪ್ಪನವರನ್ನು ನೆನಪಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ ಆದರೆ ಬೆಳಗಾವಿಯಲ್ಲಿ ಕೇವಲ ಗಂಗಾಧರರಾವ್ ದೇಶಪಾಂಡೆ ಅವರ ಪುತ್ಥಳಿ ಅನಾವರಣ ಹಾಗೂ ಸ್ಮಾರಕ ಭವನ ನಿರ್ಮಿಸಲಾಗುತ್ತಿದೆ ಇದರೊಂದಿಗೆ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ಹರಡೇಕರ್ ಮಂಜಪ್ಪನವರ ಪುತ್ಥಳಿಯನ್ನು ಕೂಡ ಅನಾವರಣಗೊಳಿಸಬೇಕು ಹಾಗೂ ಸ್ಮಾರಕ ಭವನ ನಿರ್ಮಿಸಬೇಕು ಎಂದು ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ 1924 ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಲು ಗಂಗಾಧರರಾವ ದೇಶಪಾಂಡೆ ಅವರು ಕಾರಣರಾದಂತೆ ಶ್ರೀ ಬಸವೇಶ್ವರ ಸೇವಾದಳ ಎಂಬ ಯುವಕರ ಸಂಘಟನೆಯನ್ನು ಸ್ಥಾಪಿಸಿದ ಕರ್ನಾಟಕದ ಗಾಂಧಿ ಹರಡೇಕರ್ ಮಂಜಪ್ಪನವರು ಯುವಕರನ್ನು ಸಂಘಟಿಸಿ ಸಮ್ಮೇಳನದ ಸಮಸ್ತ ಚಟುವಟಿಕೆಗಳನ್ನು ಕೈಗೊಂಡು ಸಮ್ಮೇಳನದ ಯಶಸ್ಸಿಗೆ ಕಾರಣೀಭೂತರಾಗಿದ್ದಾರೆ. ಸತ್ಯಾಗ್ರಹಿ ಬಸವೇಶ್ವರ ಎಂಬ ಹಿಂದಿ ಪುಸ್ತಕ ಒಂದನ್ನು ಮಹಾತ್ಮ ಗಾಂಧೀಜಿಯವರ ಕೈಗಿತ್ತು ವಿಶ್ವಗುರು ಬಸವಣ್ಣನವರನ್ನು ಗಾಂಧೀಜಿಯವರಿಗೆ ಪರಿಚಯಿಸಿದ್ದರು. ಬದುಕಿನದ್ದಕ್ಕೂ ಬ್ರಹ್ಮಚಾರಿಯಾಗಿದ್ದು ಜನಮನವನ್ನು ತಲುಪಿದ ಮಂಜಪ್ಪನವರ ಸ್ಮಾರಕ ಬೆಳಗಾವಿ ಮಹಾನಗರದಲ್ಲಿ ನಿರ್ಮಿಸಬೇಕು ಮತ್ತು ಅವರ ಹೆಸರಿನಲ್ಲಿ ಗಾಂಧೀತತ್ವಗಳ ಪ್ರತಿಪಾದಕರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡುವಂತಹ ಆಗಬೇಕು ಎಂದು ಶ್ರೀಗಳು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.