ಸವದತ್ತಿ: ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಾಮೂಹಿಕ ಲಿಂಗಪೂಜೆಯೊಂದಿಗೆ ಸೆ. ೧೦ ರಂದು ಮತ್ತೊಮ್ಮೆ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭಿಸಲಾಗುವುದು ಎಂದು ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದರು.
ಇಲ್ಲಿನ ಸವದತ್ತಿ ಅರ್ಬನ್ ಸಭಾಂಗಣದಲ್ಲಿ ಜರುಗಿದ ಮೀಸಲಾತಿ ಹೋರಾಟದ ಪೂರ್ವಭಾವಿ ೨೦ ಸಭೆಯಲ್ಲಿ ಮಾತನಾಡಿದ ಅವರು,, ಲಿಂಗಾಯತ ಪಂಚಮಸಾಲಿಯ ೨೦ ಮೀಸಲಾತಿ ಹೋರಾಟ ಹೊಸ ಬದಲಾವಣೆ ತಂದಿದೆ. ಆದರೂ ನಿರೀಕ್ಷಿತ ಗುರಿ ತಲುಪಲಾಗುತ್ತಿಲ್ಲ, ಮಕ್ಕಳ ಶಿಕ್ಷಣ, ನೌಕರಿಗಾಗಿ ಲಿಂಗಾಯತ ಎಲ್ಲ ಒಳ ಪಂಗಡಗಳಿಗೆ ಮೀಸಲಾತಿ ಅನಿವಾರ್ಯವಾಗಿದೆ ಎಂದರು.
ಬೆಂಗಳೂರಿನ ಫ್ರೀಡಂ ಪಾರ್ಕ್ ಮೈದಾನದಲ್ಲಿ ಮೀಸಲಾತಿಗಾಗಿ ನಡೆದ ಉಪವಾಸ ಸತ್ಯಾಗ್ರಹದಿಂದ ಪ್ರಧಾನಮಂತ್ರಿಗಳ ಮಧ್ಯಸ್ತಿಕೆಯಲ್ಲಿ ೨ಸಿ, ೨ಡಿ ಮೀಸಲಾತಿ ನೀಡಿದರು. ಚುನಾವಣೆ ಹತ್ತಿರದ ಕಾರಣಕ್ಕೆ ಸಮಾಧಾನದಿಂದಿದ್ದೆವು. ಸದ್ಯದ ಸರಕಾರಕ್ಕೆ ನಮ ಸಮುದಾಯದ ಸಚಿವರು, ಶಾಸಕರ ಮೂಲಕ ಒತ್ತಡ ಹೇರಲಾಗುತ್ತಿದೆ. ಸರಕಾರ ರಚಿಸಲು ನಮ್ಮ ಸಮಾಜದಿಂದ ೧೧ ಜನ ಶಾಸಕರನ್ನು ಕೊಡುಗೆ ನೀಡಿದೆ. ಸಿಎಂ ಸಿದ್ದರಾಮಯ್ಯನವರು ಬಜೆಟ್ ನಂತರ ಕಾನೂನು ತಜ್ಞರ ಸಭೆ ನಡೆಸುವ ಕುರಿತು ತಿಳಿಸಿದ್ದರು. ಆದರೆ ಇದುವರೆಗೂ ಸಭೆ ನಡೆಸಿಲ್ಲ, ಕಾರಣ ಹೋರಾಟದಿಂದ ಸರಕಾರ ಗಮನ ಸೆಳೆಯಲೆತ್ನಿಸಲಾಗುವದು ಎಂದರು.
ಲೋಕಸಭಾ ಚುನಾವಣೆ ಒಳಗಾಗಿ ಸಮಾಜಕ್ಕೆ ನ್ಯಾಯ ದೊರಕಿಸಬೇಕಿದೆ. ಪಂಚಮಸಾಲಿಗೆ ೨ಎ ಹಾಗೂ ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕೊಡಲೇಬೇಕು. ಮೀಸಲಾತಿ ಆದೇಶ ಪ್ರತಿ ಸಿಗುವವರೆಗೂ ಹೋರಾಟ ನಿರಂತರವಾಗಿರಲಿದೆ ಎಂದರು.
ಪ್ರಮುಖ ಪಂಚನಗೌಡ ದ್ಯಾಮನಗೌಡರ ಮಾತನಾಡಿ, ನಿರಂತರ ಹೋರಾಟದಿಂದ ಫಲ ಪಡೆಯಲು ಸಾಧ್ಯ. ಸದ್ಯದ ಹೋರಾಟದಿಂದ ಮುಂದಿನ ಪೀಳಿಗೆ ಸುಖ ಜೀವನ ನಡೆಸುವಂತಾಗುತ್ತದೆ. ಸಮಾಜದ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲರೂ ಒಗ್ಗೂಡಿ ಬೆಂಬಲಿಸಬೇಕಿದೆ ಎಂದರು.
ಅಲ್ಲಮಪ್ರಭು ಪ್ರಭುನವರ, ಆರ್.ವಿ. ಕಾರದಗಿ, ದೊಡಗೌಡ ಖೋದಾನಪೂರ, ಎನ್.ಸಿ. ಬೆಂಡಿಗೇರಿ, ನಾಗಪ್ಪ ಪ್ರಭುನವರ, ಸುರೇಶ ಬಡಗಿಗೌಡ್ರ, ಎಮ್. ಕೆ. ಬೇವೂರ, ಮಹಾರಾಜಗೌಡ ಪಾಟೀಲ, ಎಮ್.ಜಿ. ಕಲ್ಲೂರ, ಬಸವರಾಜ ಪಟ್ಟಿ ಪ್ರಭು ಪ್ರಭುನವರ ಸೇರಿ ಪ್ರಮುಖರು ಇದ್ದರು.