ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಬಹುತೇಕ ವಿರಕ್ತ ಮಠಾಧೀಶರುಗಳು ನಡೆಸುತ್ತಿರುವ ಅಭಿಯಾನದಿಂದ ಸಮಾಜದ ಜನಪ್ರತಿನಿಧಿಗಳು ಅದರಲ್ಲೂ ಬೆಳಗಾವಿ ಜಿಲ್ಲೆಯ ಲಿಂಗಾಯತ ಸಮಾಜದ ಜನಪ್ರತಿನಿಧಿಗಳು ಬಹುತೇಕ ದೂರ ಉಳಿಯುತ್ತಿದ್ದಾರೆ.
ಆರ್ಥಿಕವಾಗಿ ಪ್ರಬಲರಾಗಿರುವ ಈ (ರಾಜಕಾರಣಿಗಳು)ವರ್ಗದ ಜನರಿಗೆ ಸಮಾಜದ ಸಾಮಾನ್ಯ ಮತ್ತು ಬಡವರಿಗೆ ಸಿಗಬಹುದಾದ ಅಪರಿಮಿತವಾದ ಸವಲತ್ತುಗಳಿಂದ ಏನೂ ಆಗಬೇಕಾಗಿಲ್ಲ, ಚುನಾವಣೆ ಬಂದಾಗ ಒಂದಿಷ್ಟು ದುಡ್ಡು ಖರ್ಚು ಮಾಡಿದರೆ ಆಯ್ತು ಎನ್ನುವ ಮನಸ್ಥಿತಿ ಇದೆ ಎಂದು ಸಾಮಾನ್ಯ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇವರುಗಳ ನಡುವಳಿಕೆಯೂ ಅದನ್ನೇ ತೋರಿಸುತ್ತದೆ.
ಸ್ವತಂತ್ರ ಲಿಂಗಾಯತ ಧರ್ಮದ ಸ್ಥಾನಮಾನದಿಂದ ಆಗುವ ದೂರಗಾಮಿ ಪ್ರಯೋಜನಗಳ ಬಗ್ಗೆ ಮಠಾಧೀಶರು ಜಾಗೃತಿ ಮೂಡಿಸುವ ಅಭಿಯಾನಗಳನ್ನು ರಾಜ್ಯದ ತುಂಬಾ ಹಮ್ಮಿಕೊಂಡಿದ್ದಾರೆ ಅದಕ್ಕೆ ನಿರೀಕ್ಷಿತ ಮಟ್ಟಕ್ಕೂ ಅಧಿಕ ಬೆಂಬಲ ಎಲ್ಲ ಕಡೆ ಸಿಗುತ್ತಿದೆ. ಇತ್ತೀಚೆಗೆ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದಲ್ಲಿ ಜರುಗಿದ ಬಸವ ಸಂಸ್ಕೃತಿ ಅಭಿಯಾನ ಸಾಕ್ಷಿ. ಅಭಿಯಾನದಲ್ಲಿ ಹತ್ತರಿಂದ ಹದಿನೈದು ಸಾವಿರ ಜನ ಸೇರಿದ್ದು ಸಂಘಟಕರ ನಿರೀಕ್ಷೆಯನ್ನು ಮೀರಿದ್ದಾಗಿತ್ತು. ದುರ್ದೈವವೆಂದರೆ ಲಿಂಗಾಯತ ಸಮಾಜದ ಯಾವುದೇ ಹಾಲಿ ಶಾಸಕರಾಗಲಿ, ಮಾಜಿ ಶಾಸಕರಾಗಲಿ, ಜಿಲ್ಲೆಯನ್ನು ಪ್ರತಿನಿಧಿಸುವ ಲಿಂಗಾಯತ ಸಚಿವರಾಗಲಿ ಭಾಗವಹಿಸಲಿಲ್ಲ. ಇದು ಸಮಾಜದ ಜನಗಳ ಅಸಮಾಧಾನಕ್ಕೆ ಕಾರಣವಾಗಿದ್ದು ಸುಳ್ಳಲ್ಲ.ಆದರೇ ಸಚಿವ ಸತೀಶ ಜಾರಕಿಹೊಳಿ ಮಾತ್ರ ರಾಜಧಾನಿಯಲ್ಲಿ ಕ್ಯಾಬಿನೆಟ್ ಸಭೆಯನ್ನು ಮುಗಿಸಿಕೊಂಡು ನೇರವಾಗಿ ಬೆಳಗಾವಿಗೆ ಆಗಮಿಸಿ ಅಭಿಯಾನದಲ್ಲಿ ಭಾಗವಹಿಸಿದ್ದು ಸಮಾಜದ ಸಮಸ್ತರ ಗಮನ ಸೆಳೆಯಿತು ಇದು ಬಸವ ತತ್ವಗಳ ಕುರಿತು ಅವಗೆ ಅವರಿಗಿರುವ ಗೌರವ ಮತ್ತು ಕಾಳಜಿಯನ್ನು ತೋರಿಸುತ್ತದೆ. ಅದೇ ಕಾಳಜಿ ಜಿಲ್ಲೆಯ ಲಿಂಗಾಯತ ಸಮಾಜದವರೇ ಸಚಿವೆ ಶ್ರೀಮತಿ ಶ್ರೀಮತಿ.ಲಕ್ಷ್ಮಿ ಹೆಬ್ಬಾಳ್ಕರ ಅವರಿಗೆ ಇಲ್ಲವಾಯಿತೆ ಎಂದು ಅಭಿಯಾನದಲ್ಲಿ ಜನ ಬಹಿರಂಗವಾಗಿಯೇ ಅಸಮಾಧಾನಗೊಂಡರು.
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳು ಪೈಕಿ ಒಂಬತ್ತರಲ್ಲಿ ಲಿಂಗಾಯತ ಶಾಸಕರಿದ್ದಾರೆ. ಒಬ್ಬರೂ ಕೂಡ ಅಭಿಯಾನದತ್ತ ಹೊರಳಿ ನೋಡಲಿಲ್ಲ, ಅಷ್ಟೇ ಸಂಖ್ಯೆಯ ಮಾಜಿ ಶಾಸಕರು ಇದ್ದಾರೆ ಅವರು ಕೂಡ ಅಭಿಯಾನದತ್ತ ತಿರುಗಿ ನೋಡಲಿಲ್ಲ. ಮೂರು ಜನ ವಿಧಾನ ಪರಿಷತ್ ಸದಸ್ಯರು, ಒಬ್ಬರು ಸಂಸತ್ ಸದಸ್ಯರು, ಮತ್ತೊಬ್ಬರು ರಾಜ್ಯಸಭಾ ಸದಸ್ಯರು ಹೀಗೆ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಲಿಂಗಾಯತ ಸಮಾಜದ ಜನಪ್ರತಿನಿಧಿಗಳು ಕಡಿಮೆ ಏನಿಲ್ಲ ಆದರೂ ಈ ಬಸವ ಸಂಸ್ಕೃತಿ ಅಭಿಯಾನ ನಮಗೆ ಸಂಬಂಧವೇ ಇಲ್ಲ ಎನ್ನುವಂತೆ ಅಭಿಯಾನದಿಂದ ದೂರ ಉಳಿದರು. ಇದು ಸಮಾಜದ ಪರವಾಗಿನ ನಿರ್ಲಕ್ಷ ಮತ್ತು ಸಮಾಜದ ಬಡವರು ಹಾಗೂ ಸಾಮಾನ್ಯ ವರ್ಗದವರ ಹಿತಾಸಕ್ತಿ ಅವರಿಗೆ ಸಂಬಂಧವೇ ಇಲ್ಲ ಎನ್ನುವುದನ್ನು ಬಿಂಬಿಸಿದೆ.
ಪ್ರಸ್ತುತ ಸ್ವತಂತ್ರ ಲಿಂಗಾಯತ ಧರ್ಮದ ಕುರಿತು ಸಾಕಷ್ಟು ಗೊಂದಲಗಳಿವೆ. ಅವೆಲ್ಲವನ್ನು ಪರಿಹರಿಸಿ ಶತಾಯ-ಗತಾಯ ಸ್ವತಂತ್ರ ಧರ್ಮದ ಮಾನ್ಯತೆ ಸಿಗಲೇಬೇಕು ಎಂಬ ಒಂದಂಶದ ಕಾರ್ಯಕ್ರಮವೇ ಈ ಬಸವ ಸಂಸ್ಕೃತಿ ಅಭಿಯಾನ. ಇದರ ಸಮಾರೋಪ ಅಕ್ಟೋಬರ್ ಐದರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಅಂದಿನ ಬೃಹತ್ ಕಾರ್ಯಕ್ರಮ “ಸಮಾಜದ ಶಕ್ತಿ ಪ್ರದರ್ಶನ” ವೆಂದೇ ಬಿಂಬಿತವಾಗಿದೆ. ಅದಕ್ಕೆ ಸಮಾಜದ ಸಮಸ್ತರು ಎಲ್ಲ ರೀತಿಯ ಭಿನ್ನಾಭಿಪ್ರಾಯಗಳನ್ನು ದೂರ ಇಟ್ಟು ಅದರಲ್ಲಿ ಭಾಗವಹಿಸಬೇಕಿದೆ. ಈ ನಿಟ್ಟಿನಲ್ಲಿ ಸಮಾಜದ ಸಮಸ್ತ ನಾಯಕರು, ಮುಂದಾಳುಗಳು, ಜನಪ್ರತಿನಿಧಿಗಳು, ಸಮಾಜ ಸೇವಕರು, ಎಲ್ಲರೂ ಸೇರಿ ಪ್ರಯತ್ನಿಸಬೇಕಾಗಿದೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಿದ್ಧಪಡಿಸಬೇಕಾಗಿದೆ. ರಾಜ್ಯದಲ್ಲಿ ಅತಿ ದೊಡ್ಡ, ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜ ಇಂದು ಛಿದ್ರ-ಛಿದ್ರವಾಗುತ್ತಿದೆ. ಅದಕ್ಕೆ ಕಾರಣ ಬೇರೆಯವರಲ್ಲ ನಮ್ಮವರೇ!!! ಸಮಾಜದ ಬಲವನ್ನು ಮುರಿಯುವುದೇ ಕೆಲವರ ಅಜೆಂಡಾ ಆಗಿದೆ ಅದನ್ನು ಪೂರ್ಣಗೊಳಿಸಲು ಏನೇನು ಮಾಡಬೇಕು ಅದೆಲ್ಲವನ್ನು ನಾವೆಲ್ಲ ಮಾಡುತ್ತಿದ್ದೇವೆ. ಸಮಾಜದ ರಾಜಕಾರಣಿಗಳು ಮತ್ತು ಅಧಿಕಾರಸ್ಥರು ಒಂದು ವಿಷಯವನ್ನು ಮನದಟ್ಟು ಮಾಡಿಕೊಳ್ಳಬೇಕು ಅದೇನೆಂದರೆ ಸಮಾಜದಲ್ಲಿ ಒಗ್ಗಟ್ಟಿರುವವರೆಗೆ ಮಾತ್ರ ನೀವು ಅಧಿಕಾರದಲ್ಲಿರುವುದಕ್ಕೆ ಸಾಧ್ಯ. ಯಾವಾಗ ಸಮಾಜದಲ್ಲಿ ಒಗ್ಗಟ್ಟಿರುವುದಿಲ್ಲವೋ ಆಗ ನೀವು ಕೂಡ ಅಧಿಕಾರದಲ್ಲಿ ಇರುವುದಿಲ್ಲ. ಇದಕ್ಕೆ ಒಂದಲ್ಲ ಹತ್ತು ಉದಾಹರಣೆಗಳನ್ನು ಕೊಡಬಹುದು. ಇನ್ನೂ ಸಮಯ ಮೀರಿಲ್ಲ ಎಚ್ಚೆತ್ತುಕೊಳ್ಳಿ ಒಂದು ಬಾರಿ, ಒಂದು ಬಾರಿ, ಒಂದೇ ಒಂದು ಬಾರಿ “ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ” ಯನ್ನು ಪಡೆದುಕೊಳ್ಳೋಣ. ನಂತರ ಅವರವರಿಗೆ ಬೇಕಾದ ಆಚರಣೆಗಳನ್ನು ಅವರವರು ಅನುಸರಿಸಲಿ ಅದಕ್ಕೆ ಯಾರ ಅನುಮತಿಯ ಅಗತ್ಯವಿಲ್ಲ, ಯಾರದು ಅಡ್ಡಿ ಆತಂಕಗಳು ಇರಲಾರದು. ಸಮಾಜದ ಎಲ್ಲ ಪಂಗಡಗಳ ಜನರು *ಮುಖ್ಯವಾಗಿ ಯುವ ಜನತೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು.* ನಮಗಾಗಿ ಅಲ್ಲ ಭವಿಷ್ಯದಲ್ಲಿ ಸಮಾಜದ ಮುಂದಿನ ಪೀಳಿಗೆಗಾಗಿ ಇಷ್ಟನ್ನು ನಾವು ಮಾಡದೇ ಇದ್ದರೆ ಭವಿಷ್ಯಕ್ಕಾಗಿ ನಾವು ನಮ್ಮ ನೈತಿಕ ಕರ್ತವ್ಯವನ್ನು ಮಾಡಲಿಲ್ಲ ಎನ್ನುವ ಆರೋಪ ಖಂಡಿತ ನಮ್ಮ ಮೇಲೆ ಶಾಶ್ವತವಾಗಿ ಉಳಿಯಲಿದೆ. ನಮ್ಮ ಮಕ್ಕಳ, ನಮ್ಮ ಮೊಮ್ಮಕ್ಕಳ ಭವಿಷ್ಯವನ್ನು ನಾವೇ ಬಲಿ ಕೊಟ್ಟೆವು ಎಂಬ ಆರೋಪವನ್ನು ಹೊತ್ತುಕೊಂಡೇ ಹೋಗಬೇಕಾಗುತ್ತದೆ. ಹೆಂಡತಿ, ಮಕ್ಕಳು, ರಕ್ತ ಸಂಬಂಧ, ಬಂದು ಬಳಗ ಎಲ್ಲವನ್ನು ಬಿಟ್ಟು ಸಂಸಾರವನ್ನು ತ್ಯಾಗ ಮಾಡಿದ ಸರ್ವಸಂಗ ಪರಿತ್ಯಾಗಿಗಳಾದ ಸನ್ಯಾಸಿಗಳಿಗೆ, ಸ್ವಾಮಿಗಳಿಗೆ, ಮಠಾಧೀಶರಿಗೆ ಇದರಿಂದ ಏನಾಗಬೇಕಿದೆ ? ಅವರೇನೇ ಮಾಡಿದರೂ ಅದು ತಮಗಾಗಿ ಅಲ್ಲ ಕೇವಲ ಮತ್ತು ಕೇವಲ ಸಮಾಜಕ್ಕಾಗಿ ಮಾತ್ರ ಎಂಬುದನ್ನು ಅರಿತುಕೊಂಡು ಹಗಲು ರಾತ್ರಿ ಎನ್ನದೆ ಸಮಾಜಕ್ಕೆ ಶ್ರಮಿಸುತ್ತಿರುವ ಅವರಿಗೆ ಬೆಂಬಲಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ.
ಧರ್ಮ “ಲಿಂಗಾಯತ” ಉಳಿದದ್ದು ಅವರವರಿಗೆ ಬೇಕಾದ ಜಾತಿ ಅಥವಾ ಪಂಗಡ ಏನು ಬೇಕಾದರೂ ಅನುಸರಿಸಬಹುದು. ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊರಟು ಅಕ್ಟೋಬರ್ 5 ರ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ.
-ಮುರುಗೇಶ ಶಿವಪೂಜಿ
ಜಿಲ್ಲಾ ಉಪಾಧ್ಯಕ್ಷ
ಜಾಗತಿಕ ಲಿಂಗಾಯಿತ ಮಹಾಸಭೆ,ಬೆಳಗಾವಿ.