ಕೊಪ್ಪಳ:- ಜನವರಿ 11 (ಕರ್ನಾಟಕ ವಾರ್ತೆ): ಜನವರಿ 30ರಿಂದ ಫೆಬ್ರವರಿ 13ರವರೆಗೆ ಜಿಲ್ಲೆಯಲ್ಲಿ ನಡೆಯುವ ಸ್ಪರ್ಶ ಕುಷ್ಠರೋಗ ಜಾಗೃತಿಯ ಅಭಿಯಾನ-2023ನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೇಶ್ವಾನ್ ವಿಡಿಯೋ ಸಭಾಂಗಣದಲ್ಲಿ ಜನವರಿ 9ರಂದು ನಡೆದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ-2023ರ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕುಷ್ಠರೋಗ ತಡೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಸಹಕಾರ ಮತ್ತು ಸಹಭಾಗಿತ್ವ ತುಂಬಾ ಮಹತ್ವದ್ದಾಗಿದೆ. ಆಯಾ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಹಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಹಕರಿಸಲು, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮತ್ತು ಈ ಕಾರ್ಯ ಚಟುವಟಿಕೆಗಳ ಕುರಿತು ಕರಪತ್ರಗಳು, ಭಿತ್ತಿ ಪತ್ರಗಳು ಮತ್ತು ಮೈಕಿಂಗ್ ಮುಖಾಂತರ ವ್ಯಾಪಕ ಪ್ರಚಾರಕ್ಕೆ ವ್ಯವಸ್ಥೆ ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕುಷ್ಠರೋಗ ನಿರ್ಮೂಲನೆಗೆ ಗಾಂಧೀಜಿಯವರ ಕೊಡುಗೆ ಎನ್ನುವ ವಿಷಯದ ಬಗ್ಗೆ ಶಾಲಾ ವಿದ್ಯಾರ್ಥಿಗಳಿಂದ ಕಿರು ನಾಟಕ ಪ್ರದರ್ಶಿಸಿ ಅರಿವು ಮೂಡಿಸಬೇಕು. ಶಾಲೆಯಲ್ಲಿ ಪ್ರತಿದಿನ ಪ್ರಾರ್ಥನಾ ವೇಳೆಯಲ್ಲಿ ಉಪಾಧ್ಯಾಯರುಗಳು ರೋಗದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಕಾರ್ಯಕ್ರಮ ನಡೆಯುವ ಅವಧಿಯಲ್ಲಿ ಉಪಾಧ್ಯಾಯರು ಹಾಗೂ ವಿದ್ಯಾರ್ಥಿಗಳು ಆಯಾ ಗ್ರಾಮದ ಜನರಿಗೆ ರೋಗದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಂಬಂಧಿಸಿದ ವಾರ್ಡ್ ಸದಸ್ಯರಿಗೆ ಕಾರ್ಯಕ್ರಮದ ಬಗ್ಗೆ ತಿಳಿಸಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಲು ಕ್ರಮ ವಹಿಸಬೇಕು. ಈ ಜಾಗೃತಿ ಆಂದೋಲನದ ಬಗ್ಗೆ ಪತ್ರಿಕೆಗಳಲ್ಲಿ ಪ್ರಚುರಪಡಿಸಿ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು, ನಗರಾಭಿವೃದ್ಧಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕುಷ್ಠರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಕಾರ್ಯಕ್ರಮ ರೂಪಿಸಲು ಅನುಕೂಲವಾಗುವಂತೆ ಸರ್ಕಾರವು ಜಿಲ್ಲಾ ಸಮನ್ವಯ ಸಮಿತಿಯೊಂದನ್ನು ರಚಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಎಪಿಡೆಮಿಯಾಲಜಿಸ್ಟ್, ಆರೋಗ್ಯ ಶಿಕ್ಷಣ ಇಲಾಖೆ ಮತ್ತು ಆಶಾ ಸುಗಮಕಾರರು ಸಮಿತಿಯ ಸದಸ್ಯರಾಗಿದ್ದು ಕಾಲಕಾಲಕ್ಕೆ ಸಭೆ ನಡೆಸಿ ಚರ್ಚಿಸಬೇಕು. ಕುಷ್ಠರೋಗ ಕುರಿತು ಸಂಕ್ಷಿಪ್ತ ಮಾಹಿತಿಯ ಕರಪತ್ರ ಮುದ್ರಿಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರುನ್ನುಮ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ವ್ಯಕ್ತಿಯ ದೇಹದ ಮೇಲೆ ಯಾವುದೇ ಭಾಗದಲ್ಲಿ ತಿಳಿ ಬಿಳಿ ಅಥವಾ ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ಆರೋಗ್ಯ ಸಹಾಯಕ, ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಹಾಗೂ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿಕೊಳ್ಳಬೇಕು. ಕುಷ್ಠರೋಗ ಸಂಪೂರ್ಣ ಗುಣಮುಖ ಹೊಂದುವ ಖಾಯಿಲೆಯಾಗಿದ್ದು ಭಯ ಬೇಡ ಎಂಬುದಾಗಿ ಜನರಲ್ಲಿ ಮನವರಿಕೆ ಮಾಡಬೇಕು. ಕುಷ್ಠರೋಗವನ್ನು ಶೀಘ್ರ ಪತ್ತೆ ಹಚ್ಚಿ ನಿಗಧಿತ ಸಂಪೂರ್ಣ ಚಿಕಿತ್ಸೆಯನ್ನು ಪಡೆದು ನಿಯಮಿತ ವ್ಯಾಯಾಮ ಮಾಡಿದಲ್ಲಿ ಕುಷ್ಠರೋಗದಲ್ಲಿ ಸಂಪೂರ್ಣ ಗುಣಮುಖ ಹೊಂದಬಹುದಾಗಿದೆ. ಬಹುವಿಧ ಔಷಧಿ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ. ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯವನ್ನು ಹೋಗಲಾಡಿಸಿ, ಕುಷ್ಠರೋಗಿಗಳಿಗೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ನೀಡೋಣ ಎನ್ನುವ ಸಂದೇಶವು ಹೆಚ್ಚಿನ ರೀತಿಯಲ್ಲಿ ಹೋಗುವಂತೆ ಕಾರ್ಯಕ್ರಮಗಳು ಮತ್ತು ಇನ್ನೀತರ ಚಟುವಟಿಕೆಗಳ ಮೂಲಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿಗಳಾದ ಡಾ.ರಮೇಶ ಮೂಲಿಮನಿ ಅವರು ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ಎಂ.ಎಂ.ರಡ್ಡೇರ್, ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ, ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ಸವಡಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಡಾ.ಪ್ರಕಾಶ, ಕ್ಷಯ ರೋಗ ನಿಯಂತ್ರಣಾಧಿಕಾರಿಗಳಾದ ಡಾ.ಅಲಕಾನಂದ ಕೆ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು, ರೋಗವಾಹಕ ಆಶ್ರಿತ ನಿಯಂತ್ರಣಾಧಿಕಾರಿಗಳಾದ ಡಾ.ವೆಂಕಟೇಶ, ಜಿಲ್ಲಾ ಅಂಕಿತ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲಾ ಸರ್ವೇಕ್ಷಣಾ ವಿಭಾಗದ ಸಿಬ್ಬಂದಿ ಮತ್ತು ಇನ್ನೀತರರು ಇದ್ದರು.
Gadi Kannadiga > State > ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಯಶಸ್ಸುಗೊಳಿಸಿ: ಎಂ.ಸುಂದರೇಶಬಾಬು ಸೂಚನೆ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023