WhatsApp Group
Join Now
ಬೆಳಗಾವಿ; ಗುರುವಿನ ಪಾತ್ರ ಮತ್ತು ಮಹತ್ವ ಅದ್ಭುತವಾದದ್ದು ಗುರು ಕೃಪೆ ಇಲ್ಲದೆ ಯಾವ ಸಾಧನೆಯನ್ನು ಮಾಡಲಾಗದು ಎಂದು ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು
ನುಡಿದರು.

ಅವರು ಬೆಳಗಾವಿಯಲ್ಲಿ ನಾಗನೂರು ರುದ್ರಾಕ್ಷಿ ಮಠ, ಪ್ರಭುದೇವ ಪ್ರತಿಷ್ಠಾನ ಮಾತೃ ಮಂಡಳಿ ಆಯೋಜಿಸಿದ್ದ ಗುರು ಪೂರ್ಣಿಮೆ ನಿಮಿತ್ತ ಗುರುವಂದನೆ ಮತ್ತು ಶ್ರೀಮತಿ ನೀಲವ್ವ ಬೆಂಡಿಗೇರಿ ಹಾಗೂ ವಿಶಾಲ್ ಹೆರಕರ ಇವರ ಸ್ಮರಣೆಯ ದತ್ತಿನಿಧಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಭಾರತೀಯ ಪರಂಪರೆಯಲ್ಲಿ ಅಷ್ಟೇ ಅಲ್ಲ ಇಡೀ ವಿಶ್ವದಲ್ಲಿ ಗುರುವಿನ ಪಾತ್ರ ಮತ್ತು ಗುರುವಿಗೆ ಇರುವ ಮಹತ್ವ ಅದ್ವಿತೀಯವಾದದ್ದು. ರಾಮಕೃಷ್ಣ ಪರಮಹಂಸರಂಥ ಗುರುವಿನಿಂದಾಗಿ ಸ್ವಾಮಿ ವಿವೇಕಾನಂದರು ಬೆಳಗಿದರು, ಜಗತ್ತನ್ನೇ ಗೆದ್ದ ಅಲೆಕ್ಸಾಂಡರ್ ಕೂಡ ಗುರು ಅರಿಸ್ಟಾಟಲರಿಂದ ಸಾಧನೆ ಮಾಡುವಂತಾಯಿತು. ಗುರುವಿಲ್ಲ ಎಂದಾದರೆ ದೇವರೇ ಇಲ್ಲ ಏಕೆಂದರೆ ದೇವರನ್ನು ತೋರಿಸಿದ್ದೆ ಗುರು ಅದಕ್ಕೆಂದೆ ಶರಣರು ಹೇಳುತ್ತಾರೆ ಶಿವಪಥವನರಿಯಲು ಗುರುಪಥವೇ ಮೊದಲು ಎಂದು,ಮೈಲಾರ ಶರಣರು ಹೇಳುತ್ತಾರೆ ಶಿವನ ಸಾನಿಧ್ಯದಲ್ಲಿದ್ದವಗೆ ಹುಟ್ಟು ಸಾವುಗಳು ಉಂಟು ಆದರೆ ಗುರು ಸಾನಿಧ್ಯದಲ್ಲಿದ್ದವಗೆ ಹುಟ್ಟು ಸಾವುಗಳಿಲ್ಲ ಎಂದು ಹೀಗಾಗಿ ಹರನಿಗಿಂತ ಗುರು ದೊಡ್ಡವನೆಂದು ಗುರುವಿಗೆ ಅತ್ಯಂತ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಥಣಿ ಮೋಟಗಿ ಮಠದ ಶ್ರೀ. ಪ್ರಭು ಚನ್ನಬಸವ ಮಹಾಸ್ವಾಮಿಗಳು ವಹಿಸಿ ಯುವಜನತೆ ಮಠಗಳತ್ತ ಬರುವಂತಾಗಬೇಕು ಮೊಬೈಲ್ ಗಿಳಿನಿಂದ ಹೊರಬಂದು ಗುರು ಪರಂಪರೆಯನ್ನು ಗೌರವಿಸುವ ವಾತಾವರಣವನ್ನು ಮುಂದುವರಿಸಬೇಕು ಎಂದರು. ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಶ್ರೀ. ಅಲ್ಲಮಪ್ರಭು ಮಹಾಸ್ವಾಮಿಗಳು ನೇತ್ರತ್ವ ವಹಿಸಿದ್ದರು. ಧಾರವಾಡ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮಹಾ ಸ್ವಾಮಿಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ಡಾ.ಶಿವಬಸವ ಸ್ವಾಮಿಜಿಯವರ ಪುತ್ಥಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಮಲ್ಲನಕೆರೆ ಶ್ರೀ.ವಿರಕ್ತಮಠದ ಶ್ರೀ.ಚನ್ನಬಸವ ಮಹಾ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಧಾರವಾಡ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಂಗಮನಾಥ ಲೋಕಾಪುರ ಅವರಿಗೆ ಗೌರವ ಸಮ್ಮಾನ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣ ಚಳುವಳಿಗಳಲ್ಲಿ ಭಾಗವಹಿಸಿದ ಶರಣ ತತ್ವದ ಪ್ರತಿಪಾದಕ ಏಕೈಕ ಸಂತರೆಂದರೆ ಅದು ಲಿಂಗೈಕ್ಯ ಡಾ.ಶಿವಬಸವ ಮಹಾಸ್ವಾಮಿಗಳು ಅದರಿಂದಾಗಿಯೇ ಭಾರತದ ಭೂಪಟದಲ್ಲಿ ನಾಗನೂರಿನ ಹೆಸರು ವಜ್ರಾಕ್ಷರಗಳಲ್ಲಿ ದಾಖಲಾಯಿತು ಎಂದರು. ಜಾಗತಿಕ ಲಿಂಗಾಯತ ಮಹಾಸಭೆಯ ಪರವಾಗಿ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಉಪಾಧ್ಯಕ್ಷರುಗಳಾದ ಎ.ವಾಯ್.ಬೆಂಡಿಗೇರಿ ಮತ್ತು ಮುರುಗೇಶ್ ಶಿವಪೂಜಿ, ನಗರ ಘಟಕದ ಉಪಾಧ್ಯಕ್ಷ ಮೋಹನ್ ಗುಂಡ್ಲುರ್ , ಪ್ರಧಾನ ಕಾರ್ಯದರ್ಶಿ ಸಿ.ಎಂ. ಬೂದಿಹಾಳ, ಇವರುಗಳು ಸ್ವಾಮೀಜಿಗಳನ್ನು ಗೌರವಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ಸರಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಬಾಕೆ ಅವರನ್ನು ಗೌರವಿಸಲಾಯಿತು. ಪ್ರಾಚಾರ್ಯ ಎ.ಎಲ್. ಪಾಟೀಲ್ ಸ್ವಾಗತಿಸಿದರು. ಬೆಳಗಾವಿ ವಿಜ್ಞಾನ ಕೇಂದ್ರದ ನಿರ್ದೇಶಕ ರಾಜಶೇಖರ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶ್ರೀ.ಮಠದ ಕಾರ್ಯದರ್ಶಿ ಎಸ್.ಪಿ.ಹಿರೇಮಠ, ಎಸ್ ಜಿಬಿಐಟಿ ಇಂಜಿನಿಯರಿಂಗ್ ಕಾಲೇಜ್ ಚೇರಮನ್, ಡಾ.ಎಫ್.ವಿ.ಮಾನವಿ, ಪ್ರಾಚಾರ್ಯ ಶ್ರೀ. ಪಟಗುಂದಿ, ಪ್ರೊ. ಮಂಜುನಾಥ ಶರಣಪ್ಪನವರ, ದತ್ತಿದಾನಿ ಶ್ರೀಮತಿ.ಸರಳಾ ಹೇರೆಕರ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐಟಿಐ ಕಾಲೇಜಿನ 17 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಪ್ರಭುದೇವ ಪ್ರತಿಷ್ಠಾನ ಮಾತೃಮಂಡಳಿ ಮತ್ತು ಪ್ರಸಾದ ನಿಲಯದ ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.