ಗದಗ ನವೆಂಬರ್ ೩೦: ಬಾಲ್ಯ ವಿವಾಹ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಕಂಡು ಬಂದಲ್ಲಿ ಅಂತಹವರ ವಿರುದ್ಧ ವಿಳಂಬ ಮಾಡದೇ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಜಿಲ್ಲಾ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಪ್ರೌಢಶಾಲೆಯ ಮಕ್ಕಳಿಗೆ ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಮಕ್ಕಳ ಸಹಾಯವಾಣಿ ೧೦೯೮ ಮತ್ತು ಮಕ್ಕಳ ಸಾಕಾಣಿಕೆ ಮತ್ತು ಮಕ್ಕಳ ಹಕ್ಕುಗಳ ಕುರಿತು ವಿಡಿಯೋ ಪ್ರದರ್ಶನದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಫೋಕ್ಸೋ ಕಾಯ್ದೆ ಕುರಿತು ಮೈಕ್ ಮುಖಾಂತರ ವ್ಯಾಪಕ ಪ್ರಚಾರ ಹಾಗೂ ಕರಪತ್ರ ವಿತರಣೆ ಕಾರ್ಯವಾಗಬೇಕು. ದೇವದಾಸಿ ಪದ್ದತಿ , ಬಾಲ್ಯ ವಿವಾಹ ದಂತಹ ಅನಿಷ್ಟ ಪದ್ಧತಿಗಳು ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧಕ್ರಮ. ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಪೂರ್ಣಪ್ರಮಾಣದಲ್ಲಿ ಅನುಷ್ಟಾನವಾಗಬೇಕು ಎಂಬಿತ್ಯಾದಿ ನಿರ್ದೇಶನಗಳನ್ನು ಸಂಬಂಧಿತ ಅಧಿಕಾರಿಗಳಿಗೆ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿರುವುದನ್ನು ಪರಿಶೀಲಿಸಬೇಕು. ಸಖಿ ಒನ್ ಸ್ಟಾಪ್ ಸೆಂಟರ್ ಮೂಲಕ ಮಹಿಳೆಯರಿಗೆ ಉತ್ತಮ ಸೇವೆ ದೊರಕಬೇಕು. ಅದರಂತೆ ಸ್ವೀಕಾರ ಕೇಂದ್ರ , ಸ್ವಾಧಾರ , ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ, ಪೂರಕ ಪೌಷ್ಟಿಕ ಆಹಾರ ಯೋಜನೆ, ಪೋಷಣ ಅಭಿಯಾನ ಯೋಜನೆಗಳನ್ನು ಸರಿಯಾಗಿ ಅನುಷ್ಟಾನಗೊಳಿಸುವ ಮೂಲಕ ಯೋಜನೆಗಳ ಸದುಪಯೋಗ ಅರ್ಹರಿಗೆ ನಿಗದಿತ ಅವಧಿಗೆ ತಲುಪುತ್ತಿರುವ ಬಗ್ಗೆ ಇಲಾಖೆಯ ಮುಖ್ಯಸ್ಥರು ಮೇಲ್ವಿಚಾರಣೆ ನಡೆಸುತ್ತಿರಬೇಕೆಂದು ಸೂಚಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ ಮಾತನಾಡಿ ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ಪ್ರೌಢಶಾಲಾ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಅರಿವು ಮೂಡಿಸಬೇಕು. ಜೊತೆಗೆ ಬಾಲ್ಯ ವಿವಾಹ ಕಾಯ್ದೆ ಉಲ್ಲಂಘನೆಯಾದಲ್ಲಿ ವಿಧಿಸುವ ಕಠಿಣ ಶಿಕ್ಷೆ ಕುರಿತು ತಿಳಿಸಿ, ಬಾಲ್ಯ ವಿವಾಹ ಕಾಯ್ದೆ ಯ ಜಾಗೃತಿಯೊಂದಿಗೆ ಮಕ್ಕಳನ್ನು ಸಂರಕ್ಷಿಸಬೇಕು ಎಂದರು. ಇದರೊಂದಿಗೆ ಮಹಿಳೆಯರ ಮತ್ತು ಮಕ್ಕಳ ಸಾಗಾಟ ತಡೆ , ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಸೇರಿದಂತೆ ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಿರುವ ಕಾನೂನುಗಳ ಅರಿವು ಸದಾ ಮೂಡಿಸಲು ಇಲಾಖಾದಿಕಾರಿಗಳು ಮುಂದಾಗಬೇಕು ಎಂದರು.
ಜಿಲ್ಲಾ ಪೊಲೀಸ ವರಿಷ್ಟಾದಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ ಬಾಲ್ಯ ವಿವಾಹ , ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸುವಾಗ ಸೂಕ್ತ ದಾಖಲೆಗಳೊಂದಿಗೆ ಸಂಬಂಧಿತ ಇಲಾಖೆಯ ಮುಖ್ಯಸ್ಥರೇ ಪೊಲೀಸ ಕಚೇರಿಗೆ ಎಫ್.ಐ.ಆರ್. ದಾಖಲೆ ಸಲ್ಲಿಸಲು ಮುಂದಾಗಬೇಕು. ಬಿಕ್ಷಾಟನೆ ಮಾಡುತ್ತಿರುವವರಿಗೆ ಪುನರ್ವಸತಿ ಕಲ್ಪಿಸಬೇಕು. ಮಹಿಳೆಯರ ಕೌಟುಂಬಿಕ ಹಿಂಸೆ , ಸಾಗಾಟ ಮಾಡುವುದರಿಂದ ಕಠಿಣ ಶಿಕ್ಷೆಗಳು ಕಾನೂನಿನಲ್ಲಿ ಇದ್ದು ಇವುಗಳಿಂದ ತಪ್ಪಿತಸ್ಥರು ತಪ್ಪಿಸಿಕೊಳ್ಳಲು ಅಸಾಧ್ಯ. ತಪ್ಪು ಮಾಡುವ ಮೊದಲು ಕಾನೂನುಗಳ ಕಠಿಣ ಇರುವ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು ಇದರಿಂದ ಕಾನೂನುಗಳ ಉಲ್ಲಂಘನೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಫೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲಾಗುವ ದೌರ್ಜನ್ಯಗಳಿಗೆ ಕಠಿಣ ಶಿಕ್ಷೆ ಇದೆ. ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳು ಸಾಬೀತಾದಲ್ಲಿ ತಪ್ಪಿತಸ್ಥರಿಗೆ ಕನಿಷ್ಟ ೧೦ ವರ್ಷಗಳ ಶಿಕ್ಷೆ ವಿಧಿಸಲಾಗುತ್ತಿದೆ. ಅಲ್ಲದೇ ಇಂತಹ ಅನೇಕ ಕಠಿಣ ಕಾನೂನುಗಳ ಕುರಿತು ಪಾಲಕರಿಗೆ ಹಾಗೂ ಸಾರ್ವಜನಿಕರಿಗೆ , ಮಕ್ಕಳಿಗೆ ಇಲಾಖೆ ಅಧಿಕಾರಿಗಳು ಅರಿವು ಮೂಡಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಮಾತನಾಡಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಕಾರದೊಂದಿಗೆ ಯೋಜನೆಗಳನ್ನು ಅನುಷ್ಟಾನಗೊಳಿಸೋಣ. ಯೋಜನೆಗಳ ಅನುಷ್ಟಾನದಲ್ಲಿ ತಲೆದೂರುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗೆ ತಲುಪಿಸುವ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸೋಣ ಎಂದರು.
ಸಖಿ ಒನ್ ಸ್ಟಾಪ್ ಸೆಂಟರ್ ಯೋಜನೆಗೆ ಸಂಬಂಧಿಸಿದಂತೆ ಎಪ್ರಿಲ್ -೨೦೨೨ ರಿಂದ ಸೆಪ್ಟೆಂಬರ್ ೨೦೨೨ ರವರೆಗೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ೨೦೦೫ ರಡಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಪೋಕ್ಸೋ , ಬಾಲ್ಯ ವಿವಾಹ ಹಾಗೂ ವರದಕ್ಷಿಣೆ ಕಿರುಕುಳ ಹಾಗೂ ಇನ್ನಿತರ ವಿಷಯಗಳ ಬಗ್ಗೆ ೧೨೩ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿದ್ದು ೬೫೩೯ ಜನರಿಗೆ ಅರಿವು ಮೂಡಿಸಲಾಗಿದೆ. ಬಾಲ್ಯ ವಿವಾಹ ನಿಷೇಧ ಯೋಜನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಒಟ್ಟು ೫೬ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಪ್ರಿಲ್-೨೦೨೨ ರಿಂದ ಸೆಪ್ಟೆಂಬರ್ ೨೦೨೨ ರವರೆಗೆ ಬಾಲ್ಯ ವಿವಾಹದ ಕುರಿತು ೨೯ ದೂರುಗಳನ್ನು ಸ್ವೀಕರಿಸಿದ್ದು ಆ ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ. ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯ ತಡೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಸಾಗಾಟ ತಡೆ ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ೧೯೪ ಹಾಗೂ ತಾಲೂಕು ಮಟ್ಟದಲ್ಲಿ ೧೦ ಸಭೆಗಳನ್ನು ನಡೆಸಲಾಗಿದೆ. ಕೌಟುಂಬಿಕ ಸಂರಕ್ಷಣಾ ಕಾಯ್ದೆಯಡಿ ೯೦ ಪ್ರಕರಣಗಳು ದಾಖಲಾಗಿದ್ದು ೩೮ ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ. ಗ್ರಾಮ ಪಂಚಾಯತ್ವಾರು ಲಿಂಗಾನುಪಾತ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ಕಡಿಮೆ ಲಿಂಗಾನುಪಾತ ಇರುವ ಗ್ರಾಮ ಪಂಚಾಯತಿಗಳಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ದಮನಿತ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸಲು ಜಿಲ್ಲಾ ಸಲಹಾ ಸಮಿತಿ ಕೋಶವನ್ನು ರಚಿಸಲಾಗಿದ್ದು ಜಿಲ್ಲಾ ಮಹಿಳಾ ಒಕ್ಕೂಟದಲ್ಲಿ ೨೬೩೫ ದಮನಿತ ಮಹಿಳೆಯರು ಹೆಸರು ನೊಂದಾಯಿಸಿದ್ದಾರೆ. ೨೦೧೫-೧೬ ರಿಂದ ೨೦೨೨-೨೩ರವರೆಗೆ ಚೇತನ ಯೋಜನೆಯಡಿ ೧೨೫ ದಮನಿತ ಮಹಿಳೆಯರು ಸೌಲಭ್ಯ ಪಡೆದಿದ್ದು ೪೩೩೦೦೦೦ ಸಹಾಯಧನವನ್ನು ವಿತರಿಸಲಾಗಿದೆ ಎಂದು ಸಂಬಂಧಿಸಿದ ಯೋಜನೆ ಅನುಷ್ಟಾನಾಧಿಕಾರಿ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ. ಜಗದೀಶ ನುಚ್ಚಿನ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ.ಗೊಜನೂರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟೆಮನಿ, ಜಿಲ್ಲಾ ಪಂಚಾಯತ್ ಯೋಜನಾನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಐ.ಆರ್.ಅಕ್ಕಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಲ್ಲೇದ, ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಆಹಾರ ಇಲಾಖೆ , ಕಾರ್ಮಿಕ ಇಲಾಖೆ ಸೇರಿದಂತೆ ಸಮಿತಿಯ ಸದಸ್ಯರುಗಳು ಹಾಜರಿದ್ದರು.
Gadi Kannadiga > State > ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮ ವಹಿಸಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮ ವಹಿಸಿ
Suresh30/11/2022
posted on

More important news
ರೈತ ಬಾಂಧವರ ಗಮನಕ್ಕೆ
07/02/2023
ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನ
07/02/2023
ಐತಿಹಾಸಿಕ ಲಕ್ಕುಂಡಿ ಉತ್ಸವ : ಮಹಿಳಾ ಗೋಷ್ಟಿ
07/02/2023