ಕೊಪ್ಪಳ ಜುಲೈ ೦೭: ಜಿಲ್ಲೆಯಲ್ಲಿ ಈಗ ಮತ್ತೆ ಮಳೆಗಳು ಸುರಿಯುತ್ತಿದ್ದು ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ಹೀಗಾಗಿ ಹವಾಮಾನ ಆಧಾರಿತ ಬಿತ್ತನೆ, ಬೀಜೋಪಚಾರ, ಉತ್ತಮ ಪರಿಕರಗಳ ಬಳಕೆ, ಬೆಳೆಗಳ ಆರೋಗ್ಯ ನಿರ್ವಹಣೆ, ಕಡಿಮೆ ಮಳೆಯಿಂದಲು ನಿರೀಕ್ಷಿತ ಇಳುವರಿ ಬರುವ ಬೆಳೆ ತೆಗೆಯುವುದು ಸೇರಿದಂತೆ ರೈತರಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಕೃಷಿ ಅಧಿಕಾರಿಗಳಿಗೆ ಸಲಹೆ ಮಾಡಿದರು.
ಜುಲೈ ೬ರಂದು ಜಿಲ್ಲಾಡಳಿತ ಭವನದ ಕೇಸ್ವಾನ್ ಹಾಲನಲ್ಲಿ ಕೃಷಿ, ಪಶುಪಾಲನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ತಡವಾಗಿಯಾದರು ಮುಂಗಾರು ಮಳೆ ಮಳೆಗಳು ಸುರಿಯುತ್ತಿರುವುದರಿಂದ ರೈತರು ತಮ್ಮ ತಮ್ಮ ಭೂಮಿ ಹದ ಮಾಡುತ್ತ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಗುಣಮಟ್ಟದ ಬೀಜಗಳ ವಿತರಣೆಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಆಗಾಗ ಮಳೆ ಕೊರತೆ ಎದುರಾಗುತ್ತಿರುವುದನ್ನು ಮನಗಂಡು ಮುಂಜಾಗ್ರತಾ ಕ್ರಮವಾಗಿ ಮಳೆಯಾಶ್ರಿತ ಬೆಳೆಗಳನ್ನು ಕಡಿಮೆ ಮಾಡಿ ಹವಾಮಾನ ವೈಫರಿತ್ಯವಾದರು ಸಹ ಕನಿಷ್ಟ ಉತ್ಪನ್ನ ದೊರೆಯುವ ಬೆಳೆಗಳನ್ನು ತೆಗೆಯಲು ರೈತರಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕು. ಬರ ಇಲ್ಲವೇ ಅತಿವೃಷ್ಠಿಯಿಂದಾಗಿ ತೊಂದರೆಯಾದಲ್ಲಿ ರೈತರಿಗೆ ರಕ್ಷಣೆ ನೀಡಲು ಬೆಳೆ ವಿಮೆ ಫಸಲ್ ವಿಮಾ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಬೆಳೆವಿಮೆ ಸೇರಿದಂತೆ ಯಾವುದೇ ರೀತಿಯ ಅನುಕೂಲತೆಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ ರೈತರಿಗೆ ಇ-ಕೆವೈಸಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇ-ಕೆವೈಸಿ ಮಾಡಿಸಲು ಕ್ರಮ: ಬ್ಯಾಂಕ್ ಅಕೌಂಟಗೆ ಆಧಾರ್ ಲಿಂಕ್ ಮಾಡಿಸುವ ಅಭಿಯಾನದ ಇ-ಕೆವೈಸಿ ಮಾಡಿಸಲು ಅವಧಿಯನ್ನು ಜುಲೈ ೯ರವರೆಗೆ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಶೇ.೭೩.೩೧ ರಷ್ಟು ರೈತರು ಇ-ಕೆವೈಸಿ ಮಾಡಿಸಿಕೊಂಡಿದ್ದು, ಬಾಕಿ ಇರುವ ೪೨,೩೨೫ ರೈತರು ಸಹ ಕೂಡಲೇ ಇ-ಕೆವೈಸಿ ಮಾಡಿಸಿಕೊಳ್ಳಲು ಮನವರಿಕೆ ಮಾಡಿ ಪ್ರಚಾರ ಮಾಡಲಾಗುತ್ತದೆ. ಫಾಮರ‍್ಸ್ ಯುನಿಕ್ ಐಡಿ ಸಂಖ್ಯೆ ಇದ್ದಲ್ಲಿ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಎಲ್ಲ ಅನುಕೂಲತೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ರೈತರು ಕಡ್ಡಾಯವಾಗಿ ಎಫ್‌ಐಡಿ ಸಂಖ್ಯೆಯನ್ನು ಹೊಂದಬೇಕಾಗಿದ್ದು ಇದನ್ನು ಮಾಡಿಸಿಕೊಳ್ಳಲು ಸಹ ರೈತರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ತಿಳಿಸಿದರು.
ವಿಮಾ ಯೋಜನೆ ಅನುಷ್ಠಾನ: ಬೆಳೆ ಕಟಾವು ಪ್ರಯೋಗ ಮತ್ತು ಇಳುವರಿ ಕೊರತೆ ಅನುಗುಣವಾಗಿ ಹೋಬಳಿ, ಗ್ರಾಮ ಪಂಚಾಯತ್ ವಿಮಾ ಘಟಕದಲ್ಲಿ ಬೆಳೆವಿಮೆ ಮಾಡಿದ ಎಲ್ಲಾ ರೈತರು ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ ಬೆಳೆವಿಮೆ ನಷ್ಟ ಪಡೆಯಲು ಅರ್ಹರಿರುತ್ತಾರೆ. ಹೀಗಾಗಿ ಅಧಿಸೂಚಿತ ಬೆಳೆಗೆ ಹಾನಿಯಾದಲ್ಲಿ ರೈತರಿಗೆ ವಿಮಾ ರಕ್ಷಣೆ ಒದಗಿಸಲು ಅನುಕೂಲವಾಗುವಂತೆ ಈ ಯೋಜನೆಯ ಸದುಪಯೋಗಕ್ಕೆ ರೈತರಿಗೆ ವ್ಯಾಪಕ ಮಾಹಿತಿ ನೀಡಲಾಗುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ೫೯೦೦ ರೈತರು ವಿಮಾ ಕಂತು ಪಾವತಿಸಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಬಿತ್ತನೆ ವಿವರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ, ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ, ತೊಗರಿ, ಹುರುಳಿ, ಅಲಸಂದಿ, ಹೆಸರು, ಮಡಿಕೆ, ಶೆಂಗಾ, ಸೂರ್ಯಕಾಂತಿ, ಗುರೆಳ್ಳು, ಔಡಲು, ಹತ್ತಿ, ಕಬ್ಬು ಬೆಳೆಗಳನ್ನು ಬೆಳೆಯಲಾಗುತ್ತದೆ. ಅದರಂತೆ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳು ಸೇರಿ ಒಟ್ಟು ೩,೦೮,೦೦೦ ಹೆಕ್ಟೇರ್ ಪ್ರದೇಶದಲ್ಲಿನ ಗುರಿಯ ಪೈಕಿ ಇದುವರೆಗೆ ೯೧,೯೩೨ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು
ಬೀಜ-ರಸಗೊಬ್ಬರ ವಿವರ: ಜುಲೈ ೦೪ಕ್ಕೆ ಕೊನೆಗೊಂಡಂತೆ ಜಿಲ್ಲೆಯಲ್ಲಿ ೨೪,೯೨೨ ಮೆ.ಟನ್ ಯೂರಿಯಾ, ೧೩,೧೩೩ ಮೆ.ಟನ್ ಡಿಎಪಿ, ೧೦೦೮ ಮೆ.ಟನ್ ಎಂಓಪಿ, ೩೨,೫೯೨ ಮೆ.ಟನ್ ಎನ್‌ಕೆಪಿಎಸ್ ಮತ್ತು ೩೮೯ ಮೆ.ಟನ್ ಎಸ್‌ಎಸ್‌ಪಿ ರಸಗೊಬ್ಬರ ದಾಸ್ತಾನು ಇದೆ. ಅದೇ ರೀತಿ ಜುಲೈ ೦೪ಕ್ಕೆ ಕೊನೆಗೊಂಡಂತೆ ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳು ಸೇರಿ ಒಟ್ಟು ೪೫೨.೭೫ ಕ್ವಿಂಟಲ್ ಭತ್ತದ ಬೀಜ ಮಾರಾಟವಾಗಿದ್ದು ೧೯೬.೦೦ ಕ್ವಿಂಟಲ್ ದಾಸ್ತಾನು ಇದೆ. ೩೬೭೧.೭೮ ಕ್ವಿಂಟಲ್ ಮೆಕ್ಕೆಜೋಳದ ಬೀಜ ಮಾರಾಟವಾಗಿದ್ದು ೧೪೬೪.೯೭ ಕ್ವಿಂಟಲ್ ದಾಸ್ತಾನು ಇದೆ. ೩೨೪.೨೩ ಕ್ವಿಂಟಲ್ ಸಜ್ಜೆ ಬೀಜವು ಮಾರಾಟವಾಗಿದ್ದು ೧೫೬.೪೮ ಕ್ವಿಂಟಲ್ ದಾಸ್ತಾನು ಇದೆ. ೫.೫೬ ಕ್ವಿಂಟಲ್ ನವಣಿ ಬೀಜವು ಮಾರಾಟವಾಗಿದ್ದು ೫.೦೪ ಕ್ವಿಂಟಲ್ ದಾಸ್ತಾನು ಇದೆ. ೧೨೨.೯೧ ಕ್ವಿಂಟಲ್ ಹೆಸರು ಬೀಜವು ಮಾರಾಟವಾಗಿದ್ದು ೪೯.೦೯ ಕ್ವಿಂಟಲ್ ದಾಸ್ತಾನು ಇದೆ. ೫೮೮.೯೩ ಕ್ವಿಂಟಲ್ ತೊಗರಿ ಬೀಜವು ಮಾರಾಟವಾಗಿದ್ದು ೧೪೩.೫೭ ಕ್ವಿಂಟಲ್ ದಾಸ್ತಾನು ಇದೆ. ೧೭.೮೯ ಕ್ವಿಂಟಲ್ ಸೂರ್ಯಕಾಂತಿ ಬೀಜವು ಮಾರಾಟವಾಗಿದ್ದು ೧೦೩.೭೯ ಕ್ವಿಂಟಲ್ ದಾಸ್ತಾನು ಇದೆ. ಭತ್ತ, ಮೆಕ್ಕೆಜೋಳ, ಸಜ್ಜೆ, ನವಣೆ, ಹೆಸರು, ತೊಗರಿ ಮತ್ತು ಸೂರ್ಯಕಾಂತಿ ಸೇರಿ ಕೊಪ್ಪಳ ಜಿಲೆಯಲ್ಲಿ ಒಟ್ಟು ೭೩೦೩.೦೨ ಕ್ವಿಂಟಲ್‌ನಷ್ಟು ಬೀಜಗಳು ದಾಸ್ತಾನು ಪೈಕಿ ಜುಲೈ ೦೪ರವರೆಗೆ ೫೧೮೪.೦೫ ಕ್ವಿಂಟಲ್‌ನಷ್ಟು ಬೀಜಗಳು ಮಾರಾಟವಾಗಿ ಈದೀಗ ೨೧೧೮.೯೪ ಕ್ವಿಂಟಲ್‌ನಷ್ಟು ಬೀಜಗಳು ದಾಸ್ತಾನು ಇದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ೮೩.೬೦ ಹೆಕ್ಟರ್ ಕೃಷಿ, ೧೩೧.೫೯ ತೋಟಗಾರಿಕೆ ಸೇರಿ ಒಟ್ಟು ೨೧೫.೧೯ ಹೆಕ್ಟರ್ ಬೆಳೆ ನಷ್ಟವಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ವಿವಿಧ ತಾಲೂಕುಗಳ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಪಶುಪಾಲನೆ, ತೋಟಗಾರಿಕಾ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.
Gadi Kannadiga > State > ಕೃಷಿ ಅಧಿಕಾರಿಗಳೊಂದಿಗೆ ಸಭೆ ಮಳೆ ಹಿನ್ನೆಲೆ; ರೈತರಿಗೆ ಮಾರ್ಗದರ್ಶನ ಮಾಡಲು ಸಲಹೆ
ಕೃಷಿ ಅಧಿಕಾರಿಗಳೊಂದಿಗೆ ಸಭೆ ಮಳೆ ಹಿನ್ನೆಲೆ; ರೈತರಿಗೆ ಮಾರ್ಗದರ್ಶನ ಮಾಡಲು ಸಲಹೆ
Suresh07/07/2023
posted on

More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023