ವಿಜಯನಗರ,ಜ.೨೮: ಮೊಲ ಕೂಡ ವೀರಾವೇಷದಿಂದ ಹೋರಾಡಿದ ವಿಜಯನಗರದ ಮಣ್ಣಿನಲ್ಲಿ ಕುಸ್ತಿ ಅಖಾಡ ರಂಗೇರಿದೆ. ಹಂಪಿ ಉತ್ಸವದ ಪ್ರಶಸ್ತಿಗಾಗಿ ಪೈಲ್ವಾನ್‌ಗಳ ಕಾದಾಟ ಆರಂಭವಾಗಿದೆ. ಎದುರಾಳಿಯನ್ನು ಚಿತ್ ಮಾಡಿ, ಮಣ್ಣು ಮುಕ್ಕಿಸಿ ಜಗಜಟ್ಟಿಗಳು ಎಂದೆನಿಸಿಕೊಳ್ಳಲು ಉರಿ ಬಿಸಿಲನ್ನು ಲೆಕ್ಕಿಸದೆ ಪೈಲ್ವಾನ್‌ಗಳು ಸಾಮು ತೆಗೆಯುತ್ತಿದ್ದಾರೆ. ಇದಕ್ಕೆ ಸ್ಪೂರ್ತಿ ತುಂಬುವ ನಿಟ್ಟಿನಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಹಾಗೂ ಶಾಸಕ ಆನಂದ್ ಸಿಂಗ್ ಸ್ವತಃ ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ವಿಶೇಷ ದೃಶ್ಯಗಳಿಗೆ ಮಲಪನಗುಡಿ ಗ್ರಾಮದ ವಿಜಯ ವಿದ್ಯಾರಣ್ಯ ಶಾಲಾ ಆವರಣದ ಕುಸ್ತಿ ಅಖಾಡ ಇಂದು ಸಾಕ್ಷಿಯಾಯಿತು. ಈ ಬಾರಿಯ ಹಂಪಿ ಉತ್ಸವದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ೧೦೦ ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿದ್ದಾರೆ. ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಶಸ್ತಿಗಳಿಗೆ ಸೆಣಸಾಟ ನಡೆಯಲಿದೆ.
ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜನೆ; ಕುಸ್ತಿ ಪಂದ್ಯಗಳ ಉದ್ಘಾಟನೆಗೂ ಮುನ್ನ ಸ್ಥಳೀಯ ಕಸ್ತಿಪಟುಗಳು ಸಚಿವ ಆನಂದ್ ಸಿಂಗ್ ಅವರಲ್ಲಿ ಪ್ರತಿ ಬಾರಿಯಂತೆ ಪ್ರತ್ಯೇಕವಾಗಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸುವಂತೆ ಮನವಿ ಮಾಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಗಳನ್ನು ನಡೆಸುವಂತೆ ಸೂಚನೆ ನೀಡಿದರು. ‘ಸ್ಥಳೀಯ ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಪಂದ್ಯಾವಳಿ ಆಯೋಜಿಸುವುದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ’ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ಕುಸ್ತಿ ಪಂದ್ಯಾವಳಿ ಉದ್ಘಾಟನೆಯಲ್ಲಿ ಉಪ ಆಯುಕ್ತ ಸಿದ್ದರಾಮೇಶ್ವರ, ತಾ.ಪಂ.ಇಓ ರಮೇಶ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಹರಿಸಿಂಗ್ ರಾಥೋಡ್, ಮಲಪನಗುಡಿ ಗ್ರಾ.ಪಂ ಅಧ್ಯಕ್ಷ ರಘುನಾಯ್ಕ, ಉಪಾ ವಿರೂಪಾಕ್ಷಪ್ಪ, ಜಿಲ್ಲಾ ದೈಹಿಕ ಪರಿವೀಕ್ಷಕ ಮುನಿರಾಜು, ತಾಲೂಕು ದೈಹಿಕ ಪರಿವೀಕ್ಷಕ ಡಿ.ವಿ.ಜತ್ತಿ ಉಪಸ್ಥಿತರಿದ್ದರು.
Gadi Kannadiga > State > ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದಾವಳಿಗೆ ಚಾಲನೆ ನೀಡಿದ ಸಚಿವ ಆನಂದ ಸಿಂಗ್ ಹಂಪಿ ಉತ್ಸವದ ಅಖಾಡದ ಬಳೆಗಾಗಿ ಪೈಲ್ವಾನ್‌ಗಳ ಕಾದಾಟ
ಹಲಗೆ ಬಾರಿಸುವ ಮೂಲಕ ಕುಸ್ತಿ ಪಂದಾವಳಿಗೆ ಚಾಲನೆ ನೀಡಿದ ಸಚಿವ ಆನಂದ ಸಿಂಗ್ ಹಂಪಿ ಉತ್ಸವದ ಅಖಾಡದ ಬಳೆಗಾಗಿ ಪೈಲ್ವಾನ್‌ಗಳ ಕಾದಾಟ
Suresh28/01/2023
posted on
