This is the title of the web page
This is the title of the web page

Please assign a menu to the primary menu location under menu

State

ಮೃಗಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಹುಲಿ ಪ್ರಾಣಿ ಮನೆ ಉದ್ಘಾಟಿಸಿದ ಸಚಿವ ಎಚ್.ಕೆ.ಪಾಟೀಲ


ಗದಗ ಜು.೨೯: ಅಂತರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಬಿಂಕದಕಟ್ಟಿಯ ಮೃಗಾಲಯದಲ್ಲಿ ನೂತನವಾಗಿ ನಿರ್ಮಿಸಲಾದ ಹುಲಿ ಪ್ರಾಣಿ ಮನೆ ಸೇರಿದಂತೆ ವಿವಿಧ ಪ್ರಾಣಿ ಮನೆಗಳನ್ನು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಶನಿವಾರದಂದು ಉದ್ಘಾಟಿಸಿದರು.
ತದನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು ವಿಶ್ವದಲ್ಲಿ ಇರುವ ಹುಲಿಗಳ ಪ್ರಮಾಣದಲ್ಲಿ ಶೇ.೬೦ ರಷ್ಟು ಭಾರತ ದೇಶದಲ್ಲಿರುವದು ಹೆಮ್ಮೆಯ ವಿಷಯವಾಗಿದೆ. ವಿಶ್ವದಲ್ಲಿ ಒಟ್ಟು ೫೫೭೮ ವಿವಿಧ ಜಾತಿಯ ಹುಲಿಗಳ ಸಂತತಿ ಇದ್ದು ಈ ಪೈಕಿ ನಮ್ಮ ರಾಜ್ಯದಲ್ಲಿ ೪೩೫ ಹುಲಿಗಳು ಇರುವದು ಸಂತಸ ತಂದಿದೆ. ಕರ್ನಾಟಕ ಹಾಗೂ ಮಧ್ಯಪ್ರದೇಶ ರಾಜ್ಯಗಳಲ್ಲಿ ಹುಲಿಗಳ ಸಂತತಿ ಸರಿ ಪ್ರಮಾಣದಲ್ಲಿದೆ. ೧೯೭೩ ರಲ್ಲಿ ಅಂದಿನ ಪ್ರಧಾನಿ ದಿ. ಇಂದಿರಾ ಗಾಂಧೀ ಅವರು ಹುಲಿ ಸಂರಕ್ಷಣೆಗೆ ಮುಂದಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ದರ ಪರಿಣಾಮವಾಗಿ ಇಂದಿಗೂ ಹುಲಿ ಸಂತತಿ ದೇಶದಲ್ಲಿ ಜೀವಂತವಾಗಿದೆ ಎಂದರು.
ಮೃಗಾಲಯಕ್ಕೆ ಜಿರಾಫೆ, ಜಿಬ್ರಾ: ಬಿಂಕದಕಟ್ಟಿ ಮೃಗಾಲಯಕ್ಕೆ ಜನೇವರಿ ೨೬ ರಂದು ಹೊಸ ಅತಿಥಿಗಳಾಗಿ ಜಿರಾಫೆ ಹಾಗೂ ಜಿಬ್ರಾಗಳು ಆಗಮಿಸಲಿವೆ. ಈ ಪ್ರಾಣಿಗಳು ಮೃಗಾಲಯಕ್ಕೆ ಬರುವ ವೀಕ್ಷಕರ ಸಂಖ್ಯೆಯನ್ನು ಇನ್ನೂ ಹೆಚ್ಚಿಸುವ ವಿಶ್ವಾಸವಿದೆ. ಮೃಗಾಲಯದಲ್ಲಿ ಈ ಅತಿಥಿಗಳ ಸ್ವಾಗತಕ್ಕಾಗಿ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಮೃಗಾಲಯಕ್ಕೆ ಆನೆ ಆಗಮನ: ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರೊಂದಿಗೆ ಗದಗ ಮೃಗಾಲಯದ ಕುರಿತು ಚರ್ಚಿಸಲಾಗಿದೆ. ಗದಗ ಮೃಗಾಲಯಕ್ಕೆ ಆನೆ ತರುವ ಬಗ್ಗೆ ಪ್ರಸ್ತಾಪಿಸಲಾಗಿದ್ದು ಆನೆ ಜೊತೆಗೆ ಅಗತ್ಯ ನಿರ್ವಹಣಾ ಅನುದಾನವನ್ನು ಸಹ ನೀಡುವದಾಗಿ ಸಚಿವ ಈಶ್ವರ ಖಂಡ್ರೆ ಅವರು ಸಮ್ಮತಿ ನೀಡಿದ್ದಾರೆ. ಶೀಘ್ರವೇ ಗದಗ ಮೃಗಾಲಯಕ್ಕೆ ಆನೆಯು ಸಹ ಅತಿಥಿಯಾಗಿ ಆಗಮಿಸಲಿದೆ ಎಂದರು.
ಝೂ ಮಾಸ್ಟರ ಪ್ಲಾನ್: ಗದಗ ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯದ ಝೂ ಮಾಸ್ಟರ ಪ್ಲಾನ್ ಸಿದ್ಧವಾಗಿದ್ದು ೨೦೨೪ರ ಆಗಸ್ಟ ೧೫ ರೊಳಗಾಗಿ ಝೂ ಮಾಸ್ಟರ ಪ್ಲಾನ್ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಗದಗ ಜಿಲ್ಲಾ ಪ್ರವಾಸೋದ್ಯಮ ಸಮಿತಿಯು ಗದಗ ಮೃಗಾಲಯದ ಅಭಿವೃದ್ಧಿಗೆ ಮುಂದಾಗಿದ್ದು ಅಧ್ಯಯನ ಸಹ ನಡೆಸಿದೆ. ಗದಗ ಜಿಲ್ಲೆಯು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಬಿಂಕದಕಟ್ಟಿ ಮೃಗಾಲಯದ ಹತ್ತಿರದಲ್ಲಿಯೇ ಅತ್ಯಾಧುನಿಕ ಸೌಲಭ್ಯಗಳುಳ್ಳ ಉತ್ತಮ ಕ್ಯಾಂಟಿನ್ ಮಾಡಲಾಗುವದು ಎಂದರು.
ಪ್ರವಾಸೋದ್ಯಮ ವರದಿ: ಹಿರಿಯ ಆಯ್.ಎ.ಎಸ್. ಅಧಿಕಾರಿ ಮನೋಜ ಕುಮಾರ ಅವರ ನೇತೃತ್ವದಲ್ಲಿ ಗದಗ ಜಿಲ್ಲಾ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿ ಸಮತಿಯನ್ನು ರಚಿಸಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಅದರಂತೆ ಸಮಿತಿಯು ಅಗಸ್ಟ ೮ ರಂದು ಅಧ್ಯಯನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಈ ಮೂಲಕ ಗದಗ ಜಿಲ್ಲಾ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಲಕ್ಕುಂಡಿಯಲ್ಲಿ ಹುದುಗಿರುವ ದೇವಸ್ಥಾನಗಳನ್ನು ಗುರುತಿಸುವದರ ಮೂಲಕ ಅವುಗಳನ್ನು ಅಭಿವೃದ್ಧಿ ಪಡಿಸಿ ಲಕ್ಕುಂಡಿಯ ಗತ ವೈಭವವನ್ನು ಪ್ರವಾಸಿಗರಿಗೆ ಪರಿಚಯಿಸಬೇಕು. ಹಂಪಿಯಷ್ಟೇ ಲಕ್ಕುಂಡಿಯು ಸಮೃದ್ಧ ಪ್ರದೇಶವಾಗಿದೆ ಎಂಬುದನ್ನು ಪ್ರವಾಸಿಗರಿಗೆ ಪರಿಚಸಯಿಸಲು ಕ್ರಮ ಕೈಗೊಳ್ಳಲಾಗುವದು ಎಂದರು.
೩೦೦ ಕೋಟಿ ಹೂಡಿಕೆ: ಪ್ರವಾಸೋದ್ಯಮದಲ್ಲಿ ೩೦೦ ಕೋಟಿ ರೂ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ನೂರಾರು ಹೊಟೆಲ್ ಸೌಲಭ್ಯಗಳು ಸೃಷ್ಟಿಯಾಗಲಿವೆ. ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಸಹಕಾರಿ. ಖಾಸಗಿ ಹೂಡಿಕೆಯಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು ಕೆಳವರ್ಗದ ಜನರೂ ಇದರ ಪ್ರಯೋಜನ ಪಡೆಯಲಿದ್ದಾರೆ. ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ಬದ್ಧವಾಗಿದ್ದು, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯ ಸರಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ಕಲ್ಪಿಸಿರುವುದರಿಂದ ರಾಜ್ಯದಲ್ಲಿ ಪ್ರವಾಸೋದ್ಯಮವು ಅಭಿವೃದ್ಧಿಗೊಳ್ಳುತ್ತಿದೆ.
ಈ ಸಂಧರ್ಬದಲ್ಲಿ ಶಿರಹಟ್ಟಿ ಶಾಸಕರಾದ ಡಾ.ಚಂದ್ರು ಲಮಾಣಿ, ಬಿಂಕದಕಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಲ್ಲಾ ಪೋಲಿಸ್ ಅಧೀಕ್ಷಕ ಬಿ.ಎಸ್.ನೇಮಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ದಿಪೀಕಾ ಬಾಜಪೇಯಿ, ಉಪವಿಭಾಗಾಧಿಕಾರಿ ಗಂಗಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಸೇರಿದಂತೆ ಗಣ್ಯರು, ಹಿರಿಯರು, ಸಾರ್ವಜನಿಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಹುಲಿ ದಿನಾಚರಣೆ ಅಂಗವಾಗಿ ಬಿಂಕದಕಟ್ಟಿ ಮೃಗಾಲಯಲದಲ್ಲಿ ಏರ್ಪಡಿಸಲಾದ ಚಿತ್ರಕಲಾ ಸ್ಪರ್ಧೇಯಲ್ಲಿ ವಿವಿಧ ಶಾಲೆಯ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡಿದ್ದರು.


Leave a Reply