ಬೆಳಗಾವಿ: ಗೃಹ ಲಕ್ಷ್ಮೀ ಯೋಜನೆ ಚಾಲನೆಯನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರವಾಗಿದ್ದನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಕೇಳಿ ಎಂದು ಮಾಧ್ಯಮದವರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೇರಳ ರಾಜ್ಯದ ವಯನಾಡು ಕ್ಷೇತ್ರದಲ್ಲಿ ಕಾರ್ಯಕ್ರಮ ಇದ್ದುದ್ದರಿಂದ ಅಲ್ಲಿಂದ ಮೈಸೂರಿಗೆ ಬರಲು ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಗೃಹ ಲಕ್ಷ್ಮೀ ಯೋಜನೆ ಚಾಲನೆಯನ್ನು ಬೆಳಗಾವಿಯಿಂದ ಮೈಸೂರಿಗೆ ಶಿಪ್ಟ್ ಮಾಡಿದ್ದಾರೆ. ಇದರಲ್ಲಿ ಯಾರ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನೂ ಬಿಜೆಪಿ & ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ & ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಬೇಡ ಅಂತಾ ಹೇಳಲು ಆಗಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನಿರ್ಧರಿಸುತ್ತಾರೆಂದು ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನದಲ್ಲಿರುವ ನಾಯಕರನ್ನು ಬಿಜೆಪಿಯತ್ತ ಸೆಳೆಯುವುದಾಗಿ ಸಿ.ಟಿ.ರವಿ ನೀಡಿದ ಹೇಳಿಕೆ ತಳ್ಳಿಹಾಕಿದ ಸತೀಶ, ‘ಈಗ ಕಾಂಗ್ರೆಸ್ ಶಾಸಕರನ್ನು ಬೇಟೆಯಾಡುವ ಸ್ಥಿತಿಯಲ್ಲಿ ಬಿಜೆಪಿ ಇಲ್ಲ. ನಮ್ಮ ಪಕ್ಷವೇ ವಿರೋಧ ಪಕ್ಷದ ಶಾಸಕರನ್ನು ಬೇಟೆಯಾಡುವ ಸ್ಥಿತಿಯಲ್ಲಿದೆ’ ಎಂದು ತಿರುಗೇಟು ಕೊಟ್ಟರು.
‘ಶಾಸಕರು, ಮಾಜಿ ಶಾಸಕರು ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರನ್ನು ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಮಾಡಲು ಸಾಧ್ಯವಿಲ್ಲ. ನಿಗಮ, ಮಂಡಳಿಗಳಿಗೆ ಸುಮಾರು 100 ಹುದ್ದೆಗಳಿರಬಹುದು. ಆದರೆ, ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಹಾಗಾಗಿ ಕೆಲವರಿಗೆ ಹುದ್ದೆ ಸಿಗಬಹುದು. ಇನ್ನೂ ಕೆಲವರಿಗೆ ಸಿಗದಿರಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೈಲಹೊಂಗಲ, ಅಥಣಿ ತಾಲ್ಲೂಕಿನವರೂ ಪ್ರತ್ಯೇಕ ಜಿಲ್ಲೆಗೆ ಬೇಡಿಕೆ ಇರಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ತಮ್ಮ ತಾಲ್ಲೂಕನ್ನು ಜಿಲ್ಲೆಯಾಗಿಸುವಂತೆ ಕೇಳುವ ಹಕ್ಕು ಎಲ್ಲರಿಗೂ ಇದೆ. ಆದರೆ, ಸರ್ಕಾರವೇ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ. ನವೆಂಬರ್ 1ರೊಳಗೆ ಬೆಳಗಾವಿ ತಾಲ್ಲೂಕು ವಿಭಜನೆಯಾಗಬೇಕೆಂದು ನಾವು ಬಯಸುತ್ತೇವೆ. ಜಿಲ್ಲೆ ವಿಭಜನೆ ನಿರ್ಧಾರಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು’ ಎಂದರು.
ಬೆಳಗಾವಿ, ಚಿಕ್ಕೋಡಿ ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಅಂತಿಮವಾಗಿಲ್ಲ. ಈ ಕುರಿತು ಜಿಲ್ಲೆಯ ಎಲ್ಲಾ ಶಾಸಕರು ಚರ್ಚಿಸಿ ನಿರ್ಧಾರ ಮಾಡುತ್ತೇವೆ, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಯಾವುದೇ ಶಾಸಕರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆಂದು ಹೇಳಿಲ್ಲ. ಒಟ್ಟಾರೇ ರಾಜ್ಯದಲ್ಲಿ 20 ಸೀಟು ಗೆಲ್ಲಲು ಗುರಿ ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಆಶೀಪ್ (ರಾಜು ) ಸೇಠ್, ಬೆಳಗಾವಿ ಜಿಲ್ಲೆ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಸುನೀಲ್ ಹಣಮನ್ನವರ್, ಕೆಪಿಸಿಸಿ ಸದಸ್ಯ ಕಿರಣ ಸಾಧುನ್ನವರ್ ಇದ್ದರು.