This is the title of the web page
This is the title of the web page

Please assign a menu to the primary menu location under menu

Local News

“ಆಧುನಿಕ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಶಿಕ್ಷಣವೇ ನಮ್ಮೆಲ್ಲರ ಆಧಾರ : ಶಾಸಕ ಅನಿಲ ಬೆನಕೆ


ಬೆಳಗಾವಿ: ಸೆಪ್ಟೆಂಬರ-೨೭: “ಆಧುನಿಕ ವಿಜ್ಞಾನ-ತಂತ್ರಜ್ಞಾನ ಯುಗದಲ್ಲಿ ಶಿಕ್ಷಣವೇ ನಮ್ಮೆಲ್ಲರ ಆಧಾರವಾಗಿದೆ. ಅದರಲ್ಲೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರ, ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಡ್ಡಾಯ ಮತ್ತು ಉಚಿತವಾಗಿ ನೀಡಬೇಕೆಂಬುದು ಸರ್ಕಾರದ ಆಶಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸುರೇಶ ಯಾದವ ಫೌಂಡೇಶನ್ ಕೈ ಜೋಡಿಸುತ್ತಿರುವುದು ಶ್ಲಾಘನೀಯವಾಗಿದೆ” ಎಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅಭಿಪ್ರಾಯ ಪಟ್ಟರು.
ಬೆಳಗಾವಿಯ ರಾಮತೀರ್ಥ ನಗರದ ಕರ್ನಾಟಕ ಪಬ್ಲಿಕ್ ಶಾಲೆಯ ‘ಸುರೇಶ ಯಾದವ ಫೌಂಡೇಶನ್ ಸಭಾಭಾವನ’ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಸರ್ಕಾರಿ ಶಾಲೆಗೆ ಪ್ರವೇಶ ಪಡೆಯಲು ಶಾಸಕರು, ಸಂಸದರಿಂದ ಶಿಫಾರಸ್ಸು ಪತ್ರ ತರಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಸಂತಸದ ವಿಷಯ. ನಮ್ಮ ದೇಶದ ಬಡತನ ನಿರ್ಮೂಲನೆ ಮಾಡಬಲ್ಲ ಏಕೈಕ ಅಸ್ತ್ರವೆಂದರೆ ಶಿಕ್ಷಣ. ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕಾದರೆ ಸಕಲ ಸೌಕರ್ಯ ಹೊಂದಿದ ಕಟ್ಟಡದ ಅವಶ್ಯಕತೆ ಇದೆ. ಹೀಗಾಗಿ ಸದರಿ ಶಾಲೆಗೆ ಆರು ಕೊಠಡಿಗಳನ್ನು ಶೀಘ್ರದಲ್ಲಿ ಕಟ್ಟಲಾಗುವುದು. ಶೀಘ್ರದಲ್ಲಿ ಸದರಿ ಶಾಲೆಯಲ್ಲಿ ೧೧ಮತ್ತು ೧೨ ನೇ ವರ್ಗಗಳನ್ನು ಪ್ರಾರಂಭಿಸಲಾಗುವುದು. ಸುರೇಶ ಯಾದವ ಅವರಂತೆ ಸಾರ್ವಜನಿಕರು ಶಾಲಾ ಅಭಿವೃದ್ಧಿಗೆ ತನು ಮನ ಧನಗಳಿಂದ ಸಹಾಯ ಮಾಡುವಂತಾಗಲಿ” ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಬೆಳಗಾವಿ ಸಂಸದರಾದ ಮಂಗಲಾ ಅಂಗಡಿ ಅವರು ಮಾತನಾಡಿ, “ಸರ್ಕಾರಿ ಶಾಲೆಗಳ ಸುಧಾರಣೆಯಲ್ಲಿ ಸರ್ಕಾರದೊಂದಿಗೆ ಶಿಕ್ಷಕರು , ಪಾಲಕರು ಹಾಗೂ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳುವಂತಾದರೆ ಬಡಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆತು ಅವರ ಭವಿಷ್ಯ ಉಜ್ವಲವಾಗಬಲ್ಲುದು” ಎಂದರು.
ಸಾನಿಧ್ಯ ವಹಿಸಿದ್ದ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ” ಸರ್ಕಾರಿ ಶಾಲೆಗಳಲ್ಲಿ ಸರ್ವ ಜನಾಂಗದ ಮಕ್ಕಳು ಬಡವ-ಶ್ರೀಮಂತರೆನ್ನದೆ ಸಮ ಭಾವದಲ್ಲಿ ಬೆಳೆಯಬಲ್ಲರು. ಅಂಥ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಸುರೇಶ ಯಾದವ ಅವರ ಭವಿಷ್ಯ ಉಜ್ವಲವಾಗಲಿ. ಅವರ ಪ್ರೇರಣೆಯಿಂದ ಹೆಚ್ಚಿನ ದಾನಿಗಳು ಶಾಲೆಯ ಸುಧಾರಣೆಗೆ ಸಹಕರಿಸಬೇಕು” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಸುರೇಶ ಯಾದವ ದಂಪತಿಗಳನ್ನು ಶಾಲೆಯ ವತಿಯಿಂದ ಸತ್ಕಾರಿಸಲಾಯಿತು. ಶಾಲೆಗೆ ವಿವಿಧ ರೀತಿಯಲ್ಲಿ ದೇಣಿಗೆ ನೀಡಿದ ದಾನಿಗಳನ್ನು, ಪಾಲಕರನ್ನು ಸತ್ಕಾರಿಸಲಾಯಿತು. ಸಭಾಭವನ ನಿರ್ಮಿಸಿದ ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕ ಸುರೇಶ ಯಾದವ ಅವರು ಸತ್ಕಾರಕ್ಕೆ ಪ್ರತಿಯಾಗಿ ಮಾತನಾಡಿ, ” ನನ್ನ ಮಾತೃ ಭಾಷೆ ಮರಾಠಿಯಾದರೂ ನಾನು ಸರ್ಕಾರಿ ಕನ್ನಡ ಶಾಲೆಯಲ್ಲೇ ಕಲಿತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಸರ್ಕಾರಿ ಶಾಲೆಯ ಋಣ ತೀರಿಸುವ ಸದವಕಾಶ ಎಂಬಂತೆ ಕರ್ನಾಟಕ ಪಬ್ಲಿಕ್ ಶಾಲೆಗೆ ಸಭಾಭವನ ನಿರ್ಮಿಸಿದ್ದೇವೆ. ಮುಂದೆಯೂ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ” ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಜಿ. (ರವಿ) ಭಜಂತ್ರಿ, ಶ್ರೀಶೈಲ ಕಂಕಣವಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ನಗರ ಸೇವಕರಾದ ಹಣಮಂತ ಕೊಂಗಾಲಿ, ರಾಜಶೇಖರ ಡೋಣಿ, ಕೆ. ಎಂ. ಡಿ. ಸಿ. ಮಾಜಿ ಅಧ್ಯಕ್ಷ ಮುಕ್ತಾರ ಪಠಾಣ, ಶಾಲೆಯ ದತ್ತು ಪಡೆದ ಬುಡಾ ಆಯುಕ್ತರಾದ ಪ್ರೀತಮ್ ನಸಲಾಪುರೆ, ಕ್ಷೇತ್ರ ಸಮನ್ವಯ ಅಧಿಕಾರಿ ಐ. ಡಿ. ಹಿರೇಮಠ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಯಕುಮಾರ ಹೆಬಳಿ, ನಗರ ಅಧ್ಯಕ್ಷ ಬಾಬು ಸೊಗಲನ್ನವರ, ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷೆ ಜ್ಯೋತಿ ಬೆಣ್ಣಿ, ಸಮತಾ ಶಾಲೆಯ ಅಧ್ಯಕ್ಷ ಶಂಕರ ಬಾಗೇವಾಡಿ, ಪ್ರಥಮ ದರ್ಜೆ ಗುತ್ತಿಗೆದಾರ ನಾನಾಗೌಡ ಬಿರಾದಾರ, ಅಶೋಕ ಧರಿಗೌಡರ, ಶಾಲೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ಪಾಲಕರು ಹಾಗೂ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡಾ. ರಾಜಶೇಖರ ಚಳಗೇರಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಪ್ರಾಥಮಿಕ ಶಾಲೆಯ ಪ್ರಧಾನ ಗುರುಮಾತೆ ಎನ್.ಆರ್. ಮೆಳವಂಕಿ ಮಾತನಾಡಿದರು.


Gadi Kannadiga

Leave a Reply